ಯಾದಗಿರಿ/ಬೆಂಗಳೂರು: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ (Road Accident) ಘಟನೆ ಯಾದಗಿರಿ ನಗರದ ಹೊರವಲಯದ ವರ್ಕನಹಳ್ಳಿ ರಸ್ತೆಯಲ್ಲಿ ನಡೆದಿದೆ.
ಯಾದಗಿರಿಯ ಕುಂಬಾರಹಳ್ಳಿ ನಿವಾಸಿ ಭೀಮಾಶಂಕರ (55) ಮೃತ ದುರ್ದೈವಿ. ಮತ್ತೋರ್ವ ಬೈಕ್ ಸವಾರ ಮಲ್ಲಿಕಾರ್ಜುನ ಎಂಬಾತ ಗಂಭೀರ ಗಾಯಗೊಂಡಿದ್ದು, ಯೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಭೀಮಾಶಂಕರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಯಾದಗಿರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
3 ಬೈಕ್‌ಗಳಿಗೆ ಡಿಕ್ಕಿ ಹೊಡೆದ ಕಾರು
ಚಲಿಸುತ್ತಿದ್ದ ಮೂರು ಬೈಕ್‌ಗಳಿಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ 2ನೇ ಹಂತದಲ್ಲಿ ನಡೆದಿದೆ. ಚಾಲಕ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಅದೃಷ್ಟವಾಶತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಚಾಲಕ ವಾಸು ಎಂಬಾತ ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿದ್ದರಿಂದ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಬೈಕ್‌ಗಳಿಗೆ ಗುದ್ದಿದ್ದಾನೆ. ಅಪಘಾತ ನಡೆಯುತ್ತಿದ್ದಂತೆ ಚಾಲಕನನ್ನು ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೈಕೋ ಲೇಔಟ್ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲು ಮಾಡಲಾಗಿದೆ. ವೃದ್ಧ ದಂಪತಿಗೆ ಸೇರಿದ ಕಾರಿಗೆ ವಾಸು ಚಾಲಕನಾಗಿ ಕೆಲಸ ಮಾಡುತ್ತಿದ್ದ.ಕಾರ್ಯಕ್ರಮ ಮುಗಿಸಿ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ.
ತಿರುವಣ್ಣಾಮಲೈನಲ್ಲಿ ಬಸ್- ಟಾಟಾ ಸುಮೋ ಡಿಕ್ಕಿ; 7 ಮಂದಿ ದುರ್ಮರಣ, 14 ಜನಕ್ಕೆ ಗಾಯ
ತಿರುವಣ್ಣಾಮಲೈ: ಸರ್ಕಾರಿ ಬಸ್ ಮತ್ತು ಟಾಟಾ ಸುಮೋ ಮುಖಾಮುಖಿ ಡಿಕ್ಕಿಯಾಗಿ 7 ಮಂದಿ ಸ್ಥಳದಲ್ಲೇ ಮೃತಪಟ್ಟು, 14 ಮಂದಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆದಿದೆ.
ತಿರುವಣ್ಣಾಮಲೈ ಜಿಲ್ಲೆಯ ಚೆಂಗಂನ ಎಂಟು ಜನರು ಟಾಟಾ ಸುಮೋದಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ಸರ್ಕಾರಿ ಬಸ್ ಬೆಂಗಳೂರಿನಿಂದ ತಿರುವಣ್ಣಾಮಲೈಗೆ ತೆರಳುತ್ತಿತ್ತು. ಕರುಮಂಕುಲಂ ಪ್ರದೇಶದಲ್ಲಿ ಎರಡು ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಇದರಿಂದ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ 14 ಮಂದಿಯನ್ನು ಪೊಲೀಸರು ರಕ್ಷಿಸಿ ತಿರುವಣ್ಣಾಮಲೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಿರುವಣ್ಣಾಮಲೈ ಜಿಲ್ಲಾ ಪೊಲೀಸರು ಟಾಟಾ ಸುಮೋದಲ್ಲಿ ಬಂದ ಪ್ರಯಾಣಿಕರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ಮೃತರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ.
ರಿಹ್ಯಾಬಿಲಿಟೇಷನ್ ಸೆಂಟರ್‌ನ 3ನೇ ಮಹಡಿಯಿಂದ ಜಿಗಿದು ವ್ಯಕ್ತಿ ಸಾವು
ಬೆಂಗಳೂರಿನ ಕೆಂಚನಪುರದಲ್ಲಿರುವ ರಿಹ್ಯಾಬಿಲಿಟೇಷನ್ ಸೆಂಟರ್‌ನ ಮೂರನೇ ಮಹಡಿಯಿಂದ ಜಿಗಿದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಶುಕೂರ್ ಪಟೇಲ್ ಮೃತ ದುರ್ದೈವಿ.
ಮೂಲತ: ಯಾದಗಿರಿ ಜಿಲ್ಲೆಯವನಾದ ಶುಕೂರ್ ಪಟೇಲ್ ಕೆಂಚನಪುರ ಕ್ರಾಸ್ ಬಳಿ ಇರುವ ಫೋರ್ ಎಸ್ ಮನೋವೈದ್ಯಕೀಯ ಆಸ್ಪತ್ರೆ ಮತ್ತು ಪುನರ್ವಸತಿ ಕೇಂದ್ರ ಚಿಕಿತ್ಸೆಗೆ ದಾಖಲಾಗಿದ್ದರು.
ಮಂಗಳವಾರ ಬೆಳಗ್ಗೆ 11.30ರ ಸುಮಾರಿಗೆ ಮೂರನೇ ಮಹಡಿಯಲ್ಲಿ ಸಿಬ್ಬಂದಿ ಓಂಕಾರ್ ಎಂಬುವವರು ವಾಕಿಂಗ್ ಮಾಡುತ್ತಿದ್ದರು. ಅಲ್ಲೆ ಇದ್ದ ಶುಕೂರ್ ಓಂಕಾರ್‌ನನ್ನು ಒಮ್ಮೆಲೆ ತಳ್ಳಿ ಬಳಿಕ ಕೆಳಗಡೆ ಜಿಗಿದಿದ್ದಾನೆ.
ಮೂರನೇ ಮಹಡಿಯಿಂದ ಬಿದ್ದ ಪರಿಣಾಮ ಶುಕೂರ್ ಪಾಟೀಲ್ ತಲೆಗೆ ಗಂಭೀರವಾಗಿ ಗಾಯವಾಗಿದ್ದರಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ