Site icon Vistara News

Road Accident : ತುಂಡಾದ ಆ್ಯಕ್ಸಲ್‌ ಬ್ಲೇಡ್‌; ಉರುಳುತ್ತಿದ್ದ ಬಸ್ಸನ್ನು ಹಿಡಿದು ನಿಲ್ಲಿಸಿದ ಆಪದ್ಭಾಂಧವರು

Road Accident Bus Fall Down

ಕಾರವಾರ: ಆ್ಯಕ್ಸಲ್‌ ಬ್ಲೇಡ್‌ ತುಂಡಾಗಿ ನಿಯಂತ್ರಣ ಕಳೆದುಕೊಂಡ ಬಸ್‌ವೊಂದು, ರಸ್ತೆ ಬದಿಗೆ ಉರುಳಿ ಬೀಳುವುದರಲ್ಲಿತ್ತು. ಆದರೆ ಸಾರ್ವಜನಿಕರೇ ಆಪದ್ಭಾಂಧವರಾಗಿ (Road Accident) ಬಂದು ಅಪಾಯವನ್ನು ತಪ್ಪಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಹಬ್ಬುವಾಡ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ.

ಸರ್ಕಾರಿ ಬಸ್ಸು ಕಾರವಾರದಿಂದ ಕೆರವಡಿ ಗ್ರಾಮಕ್ಕೆ ತೆರಳುತ್ತಿತ್ತು. ಬಸ್ಸಿನಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಚಲಿಸುತ್ತಿದ್ದಾಗಲೇ ಒಮ್ಮೆಲೇ ಬಸ್ಸಿನ ಹಿಂಬದಿ ಆ್ಯಕ್ಸಲ್‌ ಬ್ಲೇಡ್‌ ತುಂಡಾಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ, ರಸ್ತೆಯಲ್ಲಿಯೇ ಪಲ್ಟಿಯಾಗುವ ಹಂತಕ್ಕೆ ತಲುಪಿತ್ತು. ಆದರೆ ಇದನ್ನೂ ಕಂಡ ಸಾರ್ವಜನಿಕರು ಉರುಳುತ್ತಿದ್ದ ಬಸ್ಸನ್ನು ಹಿಡಿದು ನಿಲ್ಲಿಸಿದ್ದಾರೆ.

ಈ ಅವಘಡದಲ್ಲಿ ಬಸ್ಸಿನಲ್ಲಿದ್ದ ಹಲವರಿಗೆ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಂಡಿಷನ್ ಇಲ್ಲದ ಡಕೋಟಾ ಬಸ್ಸನ್ನು ಓಡಾಡಲು ಬಿಟ್ಟ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ರಸ್ತೆಯಲ್ಲಿಯೇ ಬಸ್ ಪಲ್ಟಿಯಾಗುತ್ತಿದ್ದರಿಂದ ಕಾರವಾರ ಕೈಗಾ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಇದನ್ನೂ ಓದಿ: Namma Metro : ಕೈ ಜಾರಿ ಬಿತ್ತು ಮೊಬೈಲ್‌; ಅಪಾಯ ಲೆಕ್ಕಿಸದೇ ಮೆಟ್ರೋ ಟ್ರ್ಯಾಕ್‌ಗೆ ಜಿಗಿದಳು!

ಎಲೆಕ್ಟ್ರಿಕ್‌ ಬಸ್‌- ಜೀಪ್‌ ಮಧ್ಯೆ ಭೀಕರ ಅಪಘಾತ; ನಾಲ್ವರು ಸಾವು

ಮೈಸೂರು: ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್‌ ಬಸ್‌ (KSRTC Electric Bus) ಮತ್ತು ಜೀಪ್‌ ಮಧ್ಯೆ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ (Road Accident) ನಾಲ್ವರು ಮೃತಪಟ್ಟಿದ್ದಾರೆ. ಹುಣಸೂರು ಪಟ್ಟಣದ ಹುಣಸೂರಿನ ಆರ್.ಟಿ.ಒ. ಕಚೇರಿ ಬಳಿ ಈ ಘಟನೆ ಸಂಭವಿಸಿದೆ. ಮೃತರಲ್ಲಿ ಜೀಪು ಚಾಲಕನ ಕೂಡಾ ಸೇರಿದ್ದಾನೆ.

ವಿರಾಜಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬ್ಯಾಟರಿ ಚಾಲಿತ ಬಸ್ ಮತ್ತು ಹುಣಸೂರಿನಿಂದ ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಜೀಪಿನಲ್ಲಿ ಒಟ್ಟು ಆರು ಮಂದಿ ಪ್ರಯಾಣ ಬೆಳೆಸುತ್ತಿದ್ದರು. ಇವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೀಪಿನಲ್ಲಿದ್ದವರೆಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ. ಹುಣಸೂರು ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೈಕ್‌ಗೆ ಡಿಕ್ಕಿ ಹೊಡೆದ ಕಾರು; ಇಬ್ಬರಿಗೆ ಗಂಭೀರ ಗಾಯ

ಶಿರಸಿ: ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದು ಇಬ್ಬರು ಬೈಕ್‌ ಸವಾರರು ಗಂಭೀರ ಗಾಯಗೊಂಡಿದ್ದಾರೆ. ಶಿರಸಿ ತಾಲೂಕಿನ ಹನುಮಂತಿ ಬಳಿಯ ಹಾಲಿನ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದೆ.

ಸಿದ್ದಾಪುರ ತಾಲೂಕಿನ ಹೊಳೆಜಡ್ಡಿಯ ನಾಗಪತಿ ಗೌಡಾ ಹಾಗು ಹುಲಿಯಾ ಗೌಡಾ ಗಾಯಗೊಂಡವರು. ಗಾಯಾಳುಗಳನ್ನು ಶಿರಸಿ ಪಂಡಿತ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಎರಡು ದಿನಗಳ ಹಿಂದೆ ಬನವಾಸಿ ಭಾಗದಲ್ಲಿ ಒಂದು ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಾಗಿತ್ತು. ವಿದ್ಯಾರ್ಥಿಗೆ ಡಿಕ್ಕಿ ಹೊಡೆದ ಕಾರು ನಿಲ್ಲಿಸಿದೆ ಪರಾರಿಯಾಗಿತ್ತು. ಇದೀಗ ಶಿರಸಿ ತಾಲೂಕಿನಲ್ಲಿ‌ ಮತ್ತೊಂದು ಹಿಟ್ ಆ್ಯಂಡ್‌ ರನ್ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version