ಯಾದಗಿರಿ/ ಚಿಕ್ಕಮಗಳೂರು: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಬಳಿ ಖಾಸಗಿ ಬಸ್‌ವೊಂದು ಆಯತಪ್ಪಿ ಕಂದಕ್ಕೆ (Road Accident) ಉರುಳಿದೆ. ಕಂದಕ್ಕೆ ರಭಸವಾಗಿ ಬಿದ್ದ ಪರಿಣಾಮ ಪ್ರಯಾಣಿಕನೊರ್ವ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತ ಬಸ್ಸಿನಲ್ಲಿದ್ದ 25 ಮಂದಿ ಗಾಯಗೊಂಡಿದ್ದಾರೆ.
ಬಾಲು ಕುಮಾರ್ (36) ಮೃತ ಪ್ರಯಾಣಿಕರಾಗಿದ್ದಾರೆ. ಈತ ಬೀದರ್ ಜಿಲ್ಲೆಯ ಹುಮನಬಾದ್ ತಾಲೂಕಿನ ಹಳ್ಳಿಖೇಡ ನಿವಾಸಿ ಎಂದು ತಿಳಿದು ಬಂದಿದೆ. ಬೀದರ್‌ನಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ತಡರಾತ್ರಿ ಈ ಅಪಘಾತ ನಡೆದಿದೆ. ಬಸ್‌ನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಇತರೆ ಗಾಯಾಳು ಪ್ರಯಾಣಿಕರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಚಿಕ್ಕಮಗಳೂರಲ್ಲಿ ದಟ್ಟ ಮಂಜು; ರಸ್ತೆ ಕಾಣದೇ ಬಂಡೆಗೆ ಲಾರಿ ಡಿಕ್ಕಿ
ಕಳೆದ ಎರಡ್ಮೂರು ದಿನಗಳಿಂದ ಚಿಕ್ಕಮಗಳೂರಲ್ಲಿ ಮಳೆ ಸುರಿಯುತ್ತಿದೆ. ಬೆಳಗಿನ ಹೊತ್ತು ದಟ್ಟವಾದ ಮಂಜು ಆವರಿಸುತ್ತಿದೆ. ಇದರಿಂದಾಗಿ ಸವಾರರು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡೆ ವಾಹನವನ್ನು ಚಲಾಯಿಸುವ ಸ್ಥಿತಿ ನಿರ್ಮಾಣವಾಗಿದೆ. ಕಳೆದರಡು ದಿನಗಳಿಂದ ಮಳೆಗೆ ರಸ್ತೆಯಲ್ಲಿ ಸ್ಕಿಡ್ ಆಗಿ ಅಪಘಾತಗಳು ಸಂಭವಿಸುತ್ತಿದೆ. ಸದ್ಯ ಚಾರ್ಮಾಡಿ ಘಾಟ್‌ನ 6ನೇ ತಿರುವಿನಲ್ಲಿ ಲಾರಿಯೊಂದು ಬಂಡೆಗಲ್ಲಿಗೆ ಗುದ್ದಿದೆ.
ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಗೊಬ್ಬರ ತುಂಬಿಕೊಂಡು ಚಿಕ್ಕಮಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದಾಗ ಈ ಅಪಘಾತ ನಡೆದಿದೆ. ಲಾರಿ ಚಾಲಕ ಹಾಗೂ ಕ್ಲೀನರ್‌ಗೆ ಸಣ್ಣಪುಟ್ಟ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಜು ಕವಿದ ಕಾರಣಕ್ಕೆ ಚಾಲಕನ ನಿಯಂತ್ರಣ ತಪ್ಪಿ ಬಂಡೆಗೆ ಡಿಕ್ಕಿಯಾಗಿದೆ. ಇನ್ನು ತಿರುವಿನಲ್ಲೇ ಅಪಘಾತವಾದ ಕಾರಣಕ್ಕೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಗಾಯಗೊಂಡು ನರಳಾಡುತ್ತಿದ್ದ ಚಾಲಕ, ಕ್ಲೀನರ್‌ನನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಚಿಕ್ಕಮಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.
ಕಿಲ್ಲರ್ ಬಿಎಂಟಿಸಿಗೆ ವರ್ಷದ ಮೊದಲ ಬಲಿ
ಬೆಂಗಳೂರು: ರಾಜಧಾನಿಯಲ್ಲಿ ಕಿಲ್ಲರ್ ಬಿಎಂಟಿಸಿ (killer BMTC) ಬಸ್ಸಿಗೆ ವ್ಯಕ್ತಿಯೊಬ್ಬರು (Road Accident) ಬಲಿಯಾಗಿದ್ದಾರೆ. ಎಳಂಗೋವನ್ ಸೆಂಕತ್ತವಲ್ (43) ಮೃತ ದುರ್ದೈವಿ.
ಜ.6ರಂದು ಮಾರತ್ತಹಳ್ಳಿಯ ವರ್ತೂರು ಮುಖ್ಯರಸ್ತೆಯಲ್ಲಿ ಈ ಅಪಘಾತ ನಡೆದಿದೆ. ಕುಂದಲಹಳ್ಳಿ ಜಂಕ್ಷನ್ ಕಡೆಯಿಂದ ಬೆಳ್ಳಂದೂರಿಗೆ ಬೈಕ್ ಸವಾರ ತೆರಳುತಿದ್ದ, ಅದೇ ಮಾರ್ಗದಲ್ಲಿ ಬಿಎಂಟಿಸಿ ವೋಲ್ವೋ ಬಸ್ ಬರುತ್ತಿತ್ತು.
ಈ ವೇಳೆ ವೋಲ್ವೋ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಸವಾರ ಗಂಭೀರ ಗಾಯಗೊಂಡಿದ್ದಾರೆ. ಅಪಘಾತದಿಂದ ತಲೆ ಹಾಗೂ ಮುಖದ ಭಾಗಕ್ಕೆ ಬಲವಾದ ಗಾಯವಾಗಿದ್ದು, ಕೂಡಲೇ ಸ್ಥಳೀಯರು ಗಾಯಾಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ಸೇರುವ ಮೊದಲೇ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಎಚ್‌ಎಎಲ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆಯನ್ನು ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ