Site icon Vistara News

Road Accident : ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿ ಹೊಡೆದ ಕಾರು; ಚಾಲಕ ಸಾವು, ಮೂವರು ಗಂಭೀರ

Car Accident

ಬೆಂಗಳೂರು: ಬೆಳಗಿನ ಜಾವ ಕಾರು ಚಲಾಯಿಸಿಕೊಂಡು ಬರುವಾಗ ನಿದ್ದೆಗಣ್ಣಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬ್ರಿಡ್ಜ್‌ ಮೇಲೆ ಕಾರು (Road Accident) ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಕಾರು ಚಲಾಯಿಸುತ್ತಿದ್ದ ಸಾಗರ್ (25) ಎಂಬಾತ ಸ್ಥಳದಲ್ಲೆ ಮೃತಪಟ್ಟಿದ್ದಾನೆ.

ಬೆಳಗಿನ ಜಾನ 4 ಗಂಟೆ ಸುಮಾರಿಗೆ ಬೆಂಗಳೂರಿನ ದೊಮ್ಮಲೂರು ಫ್ಲೈಓವರ್ ಮೇಲೆ‌ ಈ ಅಪಘಾತ ಸಂಭವಿಸಿದೆ. ಕೋಲಾರದಿಂದ ಬೆಂಗಳೂರಿಗೆ ವೋಕ್ಸ್ ವ್ಯಾಗನ್ ಕಾರಿನಲ್ಲಿ ನಾಲ್ವರು ಯುವಕರು ಬರುತ್ತಿದ್ದರು. ಈ ವೇಳೆ ನಿದ್ದೆಗಣ್ಣನಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿ ಹೊಡೆದಿದೆ. ಅಪಘಾತದಲ್ಲಿ ಸಾಗರ್‌ ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳೀಯರು ಗಾಯಾಳುಗಳನ್ನು ಸಿ.ವಿ ರಾಮನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲಸೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾಗಿದ್ದವನು ಶವವಾಗಿ ಪತ್ತೆ

ಕಲಬುರಗಿಯ ಫರ್ತಾಬಾದ್ ಠಾಣಾ ವ್ಯಾಪ್ತಿಯಲ್ಲಿ ನೀರಿನ ಹೊಂಡದಲ್ಲಿ ಕಾರುವೊಂದು ಬಿದ್ದಿದ್ದು, ಅದರಲ್ಲಿ ಮೃತದೇಹವು ಪತ್ತೆಯಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಅಮೃತ್ ಎಂಬಾತ ಹತ್ತು ದಿನಗಳಿಂದ ನಾಪತ್ತೆಯಾಗಿದ್ದ. ಆದರೆ ಮಂಗಳವಾರ ನೀರಿನ ಹೊಂಡದಲ್ಲಿ ಕಾರಿನೊಂದಿಗೆ ಆತನ ಶವ ಪತ್ತೆಯಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫರತಾಬಾದ್ ಬಳಿಯ ಜೇವರ್ಗಿ ಶಹಬಾದ್ ರಸ್ತೆಯ ಹೊಂಡದಲ್ಲಿ ಪತ್ತೆಯಾಗಿರುವ ಮೃತದೇಹವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Murder Case : ಮೇಲುಕೋಟೆ ದೀಪಿಕಾ ಕೊಲೆ ಕೇಸ್‌; ಅಕ್ಕ ಎಂದವನೇ ಇಟ್ಟನಾ ಮುಹೂರ್ತ

ಓವರ್‌ಟೇಕ್‌ ಧಾವಂತದಲ್ಲಿ ಟಿಪ್ಪರ್‌ಗೆ ಡಿಕ್ಕಿ; ನಡುರಸ್ತೆಯಲ್ಲಿ ಶವವಾದ ಕಾಲೇಜು ವಿದ್ಯಾರ್ಥಿ

ಬೆಂಗಳೂರು: ಕಾಲೇಜು ವಿದ್ಯಾರ್ಥಿಯೊಬ್ಬ (College Student) ಬೈಕ್‌ನಲ್ಲಿ ಟಿಪ್ಪರ್ ಲಾರಿಯನ್ನು ಓವರ್ ಟೇಕ್ (Overtaking tipper lorry) ಮಾಡುವ ಧಾವಂತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಕ್‌ ಟಿಪ್ಪರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಲಿಖಿತ್ (22) ಎಂಬ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ (Road Accident).

ಉಲ್ಲಾಳ ಸಮೀಪದ ಕೆಎಲ್ ಇ ಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಲಿಖಿತ್‌ ಸ್ನೇಹಿತರ ಜತೆ ಬೈಕ್‌ಗಳಲ್ಲಿ ತೆರಳಿದ್ದ. ಉಲ್ಲಾಳ ಕೆರೆ ಕಟ್ಟೆ ಮೇಲೆ ಸಾಗುತ್ತಿದ್ದಾಗ ಎದುರಿನಿಂದ ಒಂದು ಟಿಪ್ಪರ್‌ ಸಾಗುತ್ತಿದ್ದ. ಅದನ್ನು ಓವರ್‌ ಟೇಕ್‌ ಮಾಡಲು ಮುಂದಾದ ವೇಳೆ ಬೈಕ್‌ ಟಿಪ್ಪರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಬಳಿಕ ಬೈಕ್‌ ಎಗರಿಬಿದ್ದು, ಲಿಖಿತ್‌ ನೆಲಕ್ಕೆ ಅಪ್ಪಳಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಹಿಂಬದಿ ಸವಾರನಾಗಿದ್ದ ಜ್ಞಾನೇಶ್‌ಗೆ ಗಂಭೀರ ಗಾಯವಾಗಿದೆ. ಲಿಖಿತ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಕೆಂಗೇರಿ‌ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road Accident : ಬೆಂಗಳೂರಲ್ಲಿ ಭೀಕರ ಅಪಘಾತ; ಇಬ್ಬರು ಸವಾರರು ಮೃತ್ಯು

ಎತ್ತಿನ ಗಾಡಿಗೆ ಬೈಕ್‌ ಡಿಕ್ಕಿ: ಯುವಕನ ತಲೆಯೇ ಕಟ್‌!

ಗದಗ: ದೊಡ್ಡ ವಾಹನ ಡಿಕ್ಕಿ ಹೊಡೆದು ಬೈಕ್‌ ಸವಾರರು ಭಯಾನಕವಾಗಿ ಮೃತಪಡುವುದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಂದು ಅಪಘಾತದಲ್ಲಿ ಎತ್ತಿನ ಬಂಡಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ, ಮಾತ್ರವಲ್ಲ ಸವಾರನ ರುಂಡವೇ ಕತ್ತರಿಸಲ್ಪಟ್ಟು ದೂರಕ್ಕೆ ಎಸೆಯಲ್ಪಟ್ಟಿದೆ.

ಗದಗ ಜಿಲ್ಲೆ ನರಗುಂದ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ರೋಣ ತಾಲೂಕಿನ ಯಾವಗಲ್ ಗ್ರಾಮದ ರುದ್ರಗೌಡ ಪೊಲೀಸ್ ಪಾಟೀಲ್ (28) ಮೃತಪಟ್ಟವರು.

ಮೃತ ದುರ್ದೈವಿ

ಕೆಲವು ಮಂದಿ ಎತ್ತಿನ ಗಾಡಿ ಮೂಲಕ ಸವದತ್ತಿ ಯಲ್ಲಮ್ಮ ದೇವರ ದರ್ಶನಕ್ಕೆ ಹೋಗುತ್ತಿದ್ದರು. ಆಗ ನರಗುಂದ ಪಟ್ಟಣದಿಂದ ಯಾವಗಲ್ ಗ್ರಾಮಕ್ಕೆ ಯುವಕನೊಬ್ಬ ಬೈಕ್‌ನಲ್ಲಿ ಹೋಗುತ್ತಿದ್ದ. ಈ ವೇಳೆ, ಬೈಕ್‌ ಎತ್ತಿನ ಗಾಡಿಗೆ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಎತ್ತಿನಗಾಡಿ ರಾಂಗ್‌ ಸೈಡಿನಲ್ಲಿ ಸಾಗಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ದೂರಲಾಗಿದೆ. ಘಟನೆಯಲ್ಲಿ ಗಾಯಗೊಂಡ ಇಬ್ಬರು ಎತ್ತಿನಗಾಡಿಯಲ್ಲಿ ಪ್ರಯಾಣಿಸುತ್ತಿದ್ದವರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version