ಕಲಬುರಗಿ: ಇಲ್ಲಿನ ಚಿಂಚೋಳಿ ತಾಲೂಕಿನ ಯಂಪಳ್ಳಿ ಗ್ರಾಮದ ಬಳಿ ರಸ್ತೆ ದಾಟುತ್ತಿದ್ದ ವೃದ್ಧನಿಗೆ ಕೆಕೆಆರ್‌ಟಿಸಿ ಬಸ್ ಡಿಕ್ಕಿ (Road Accident) ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ವೃದ್ಧ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಕ್ಕಯ್ಯಾ (68) ಮೃತ ದುರ್ದೈವಿ.
ಬಕ್ಕಯ್ಯಾ ಬಹಿರ್ದೆಸೆಗೆಂದು ರಸ್ತೆ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಬಕ್ಕಯ್ಯಾ ತೀವ್ರ ರಕ್ತಸ್ರಾವಗೊಂಡು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಚಿಂಚೋಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಬಸ್ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ರಾಸುಗಳನ್ನು ಸಾಗಿಸುತ್ತಿದ್ದ ಗೂಡ್ಸ್ ವಾಹನ ಪಲ್ಟಿ
ಜಾನುವಾರುಗಳನ್ನು ಸಾಹಿಸುತ್ತಿದ್ದ ಗೂಡ್ಸ್ ವಾಹನ ಪಲ್ಟಿಯಾಗಿದ್ದು, ಸ್ಥಳದಲ್ಲೇ ಹಸುವೊಂದು ಮೃತಪಟ್ಟಿದೆ. ಚಾಮರಾಜನಗರ ತಾಲ್ಲೂಕಿನ ಪಣ್ಯದಹುಂಡಿ ಗ್ರಾಮದಲ್ಲಿ ಅಪಘಾತ ನಡೆದಿದೆ. ಮೈಸೂರಿನಿಂದ ಕೇರಳಕ್ಕೆ ಅಕ್ರಮವಾಗಿ ರಾಸುಗಳು ಸಾಗಿಸಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ. ಬದುಕಿಳಿದ ಎರಡು ಎಮ್ಮೆ, ಎಂಟು ಹಸುಗಳನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗಿನ ಜಾವ 6 ಗಂಟೆ ಈ ಘಟನೆ ನಡೆದಿದ್ದು, ವಾಹನ ಪಲ್ಟಿಯಾಗುತ್ತಿದ್ದಂತೆ ಸ್ಥಳದಿಂದ ಚಾಲಕ ಹಾಗು ಕ್ಲೀನರ್ ಕಾಲ್ಕಿತ್ತಿದ್ದಾರೆ. ಚಾಮರಾಜನಗರ ಗ್ರಾಮಾಂತರ ಪೊಲೀಸರು ಸ್ಥಳ ಮಹಜರು ನಡೆಸಿದ್ದು, ವಾಹನದ ಮೂಲ ತಿಳಿಯಲು ಕಾರ್ಯಪ್ರವೃತ್ತರಾಗಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ