ಕೊಪ್ಪಳ/ಕೊಡಗು: ಕೊಪ್ಪಳ ತಾಲೂಕಿನ ಮುನಿರಾಬಾದ್ ಸಮೀಪದ ತುಂಗಭದ್ರಾ ನದಿ ಸೇತುವೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು (Road Accident) ಹಾರಿ ಮೇಲಿಂದ ಉರುಳಿ ಬಿದ್ದಿದೆ. ಪರಿಣಾಮ ಲಾರಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಕೊಪ್ಪಳದಿಂದ ಹೊಸಪೇಟೆ ಕಡೆ ಲಾರಿ ಹೊರಟಿತ್ತು. ಆದರೆ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ತಡೆಗೋಡೆ ಡಿಕ್ಕಿ ಹೊಡೆದಿದೆ. ತಡೆಗೋಡೆಯು ಮುರಿದು ಲಾರಿ 30 ಅಡಿ ಮೇಲಿಂದ ನದಿಗೆ ಬಿದ್ದಿದೆ. ಮೇಲಿಂದ ಬಿದ್ದ ರಭಸಕ್ಕೆ ಚಾಲಕ ಸ್ಪಾಟ್ ಡೆತ್ ಆಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಚಾಲಕನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.
ನಿಯಂತ್ರಣ ತಪ್ಪಿ ರಸ್ತೆ ಬದಿಗೆ ನುಗ್ಗಿದ ಕೆಎಸ್‌ಆರ್‌ಟಿಸಿ
ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಬರೆಗೆ ಕೆಎಸ್‌ಆರ್‌ಟಿಸಿ ಬಸ್ ಅಪ್ಪಳಿಸಿದೆ. ಕೊಡಗು ಜಿಲ್ಲೆ ಸುಂಟಿಕೊಪ್ಪ ಸಮೀಪದ ಕೆದಕಲ್ ಬಳಿ ಘಟನೆ ನಡೆದಿದೆ. ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮಡಿಕೇರಿಯಿಂದ ಕುಶಾಲನಗರ ಕಡೆಗೆ ಬರುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿ ಒಮ್ಮೆಲೆ ರಸ್ತೆ ಬದಿಗೆ ನುಗ್ಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Tiger Nail : ಗಾಂಜಾ ಜಾಲ ಭೇದಿಸುವಾಗ ಹುಲಿ ಉಗುರು ಪತ್ತೆ!
ನಿಂತಿದ್ದ ಟ್ರಕ್‌ಗೆ ಕ್ಯಾಂಟರ್ ಡಿಕ್ಕಿ; ಒದ್ದಾಡಿ ಪ್ರಾಣ ಬಿಟ್ಟ ಚಾಲಕ!
ಬೆಂಗಳೂರು: ನಿಂತಿದ್ದ ಗಾಡಿಗೆ ಕ್ಯಾಂಟರ್ ಡಿಕ್ಕಿಯಾಗಿ ಚಾಲಕನೊಬ್ಬ ದಾರುಣವಾಗಿ ಮೃತಪಟ್ಟಿರುವ ಘಟನೆ ನೈಸ್ ರೋಡ್‌ನ ನಾಗೇಗೌಡ ಪಾಳ್ಯ ಬ್ರಿಡ್ಜ್ ಬಳಿ (Road Accident) ನಡೆದಿದೆ. ಕ್ಯಾಂಟರ್ ಚಾಲಕ ಸಂತೋಷ್ ನಾಯಕ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಂಗಳವಾರ ರಾತ್ರಿ ಈ ಅಪಘಾತ ನಡೆದಿದೆ. ಅತೀ ವೇಗವಾಗಿ ಕ್ಯಾಂಟರ್ ಚಲಾಯಿಸಿ ಬಂದ ಸಂತೋಷ್ ನಿಯಂತ್ರಣ ತಪ್ಪಿ, ನಿಂತಿದ್ದ ಟ್ರಕ್ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕ್ಯಾಂಟರ್ ಚಾಲಕ ಸಂತೋಷ್ ಎರಡು ವಾಹನಗಳ ಮಧ್ಯೆ ಸಿಲುಕಿದ್ದಾನೆ. ಹೊರಬರಲು ಆಗದೆ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ.
ಅಪಘಾತ ನಡೆಯುತ್ತಿದ್ದಂತೆ ಆತನನ್ನು ಹೊರತೆಗೆಯಲು ಸ್ಥಳೀಯರು ಹಾಗೂ ತಲ್ಲಘಟ್ಟಪುರ ಸಂಚಾರಿ ಪೊಲೀಸರು ಹರಸಾಹಸ ಪಟ್ಟರು. ಡಿಕ್ಕಿ ರಭಸಕ್ಕೆ ಎರಡು ವಾಹನಗಳ ಮಧ್ಯೆ ಸಿಲುಕಿ ಚಾಲಕ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಸ್ಥಳಕ್ಕೆ ತಲ್ಲಘಟ್ಟಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ASI Death : ನೈಟ್ ಡ್ಯೂಟಿ ಮುಗಿಸಿ ವಿಷ ಸೇವಿಸಿದ ಎಎಸ್‌ಐ!
ಹೆದ್ದಾರಿಯಲ್ಲಿ ಲಾರಿ ಪಲ್ಟಿ; ಚೆಲ್ಲಾಪಿಲ್ಲಿಯಾದ ಗ್ಲಾಸ್
ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಕೃಷ್ಣಗಿರಿಯ ಸೂಳಗಿರಿ ಸಮೀಪದ ಹೆದ್ದಾರಿಯಲ್ಲಿ ಗ್ಲಾಸ್ ತುಂಬಿದ್ದ ಲಾರಿ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಹೊಡೆದಿದೆ. ಲಾರಿ ಚಾಲಕ ಹಾಗೂ ಕ್ಲೀನರ್‌ಗೆ ಸಣ್ಣಪುಟ್ಟ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೆದ್ದಾರಿಯಲ್ಲಿ ಗ್ಲಾಸ್ ಪೀಸ್‌ಗಳ ರಾಶಿಯಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಲಾರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಗ್ಲಾಸ್‌ಗಳು ಪೀಸ್ ಆಗಿದ್ದವು. ರಸ್ತೆ ಮೇಲೆ ಬಿದ್ದಿದ್ದ ಗ್ಲಾಸ್ ಪೀಸ್‌ಗಳನ್ನು ತೆರವು ಕಾರ್ಯಾಚರಣೆ ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ