ಆನೇಕಲ್: ಆಕೆ ಗರ್ಭಿಣಿ (Pregnant woman). ಹೊಟ್ಟೆಯೊಳಗಿದ್ದ ಮಗುವಿನ ಹೃದಯದಲ್ಲಿ ರಂಧ್ರ ಇದೆ ಎಂದು ಗೊತ್ತಾಗಿತ್ತು. ಹೇಗಾದರೂ ಮಾಡಿ ತನ್ನ ಕರುಳಿನ ಕುಡಿಯನ್ನು ಉಳಿಸಿಕೊಳ್ಳಬೇಕೆಂದು ದೂರದ ಆಂಧ್ರದಿಂದ ಬೆಂಗಳೂರಿಗೆ ತನ್ನ ಅಕ್ಕನೊಂದಿಗೆ ಬಂದಿದ್ದಳು. ಆದರೆ ಯಮನಂತೆ ಬಂದ ಲಾರಿಯು ಡಿಕ್ಕಿ ಹೊಡೆದ ರಭಸಕ್ಕೆ ಒಡಲಿನ ಕುಡಿಯು ಸೇರಿ ಮೂವರು (Road accident) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
7 ತಿಂಗಳ ಗರ್ಭಿಣಿ ರುಕಿಯಾ (28) ಹಾಗೂ ಲಕ್ಷ್ಮಮ್ಮ (50) ಮೃತ ದುರ್ದೈವಿಗಳು. ಆಂಧ್ರ ಮೂಲದ ಮದನಪಲ್ಲಿ ನಿವಾಸಿಯಾಗಿರುವ ರುಕಿಯಾ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವಿಗೆ ಹೃದಯದಲ್ಲಿ ರಂಧ್ರ ಇರುವುದು ಗೊತ್ತಾಗಿತ್ತು. ಇದೇ ಕಾರಣಕ್ಕೆ ಪರಿಚಯಸ್ಥರ ಮೂಲಕ ಬೆಂಗಳೂರಿಗೆ ಬಂದಿದ್ದರು. ವರ್ತೂರು ಸಮೀಪದ ಮದುರಾನಗರದ ಲಕ್ಷ್ಮಮ್ಮ(50) ಜತೆಗೆ ಬೊಮ್ಮಸಂದ್ರಕ್ಕೆ ಬಂದಿದ್ದರು.
ಏಳು ತಿಂಗಳ ತುಂಬು ಗರ್ಭಿಣಿಯಾಗಿದ್ದರಿಂದ ಸ್ಕೈವಾಕ್ ಹತ್ತಲಾಗದೆ ಬಸ್ ಇಳಿದವರೇ ಹೆದ್ದಾರಿ ದಾಟಿ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಹೋಗಲು ಮುಂದಾಗಿದ್ದರು. ಈ ವೇಳೆ ಟಾಟಾಏಸ್ ತಪ್ಪಿಸಿದ ಕಂಟೇನರ್ ಲಾರಿ ಮಹಿಳೆಯರಿಬ್ಬರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಎರಡು ದೇಹಗಳು ಛಿದ್ರ ಛಿದ್ರಕೊಂಡಿತ್ತು. ಬೊಮ್ಮಸಂದ್ರ ಬಳಿಯ ನಾರಾಯಣ ಹೃದಯಾಲಯ ಆಸ್ಪತ್ರೆ ಮುಂಭಾಗವೇ ಈ ಅಪಘಾತ ನಡೆದಿದೆ.
ಎನ್‌ಎಚ್‌ಎ ವತಿಯಿಂದ ಅವೈಜ್ಞಾನಿಕ ಸ್ಕೈವಾಕ್ ನಿರ್ಮಾಣ ಮಾಡಿರುವುದೆ ಅಪಘಾತಗಳಿಗೆ ಕಾರಣ ಎನ್ನಲಾಗಿದೆ. ಬೊಮ್ಮಸಂದ್ರ ಕೈಗಾರಿಕೆಗಳಿಗೆ ಬರುವ ಕಾರ್ಮಿಕರು ಸ್ಕೈವಾಕ್ ಬಿಟ್ಟು ರಸ್ತೆ ದಾಟುತ್ತಾರೆ. ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮಸಂದ್ರದಲ್ಲಿ ನಾರಾಯಣ ಹೃದಯಾಲಯ ಮತ್ತು ಬಿಟಿಎಲ್ ಕಾಲೇಜಿದೆ. ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ರಸ್ತೆ ದಾಟುತ್ತಾರೆ. ಹೀಗೆ ಸ್ಕೈ ವಾಕ್ ಇದ್ದರೂ ಕೂಡ ರಸ್ತೆ ಮೂಲಕವೇ ದಾಟಲು ಹೋಗಿ ಮಹಿಳೆಯರಿಬ್ಬರು ಹಾಗೂ ಪ್ರಪಂಚವನ್ನೇ ನೋಡದ ಮಗು ತಾಯಿ ಗರ್ಭದಲ್ಲೇ ಮೃತಪಟ್ಟಿದೆ. ಸದ್ಯ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ