ಬಳ್ಳಾರಿ/ತುಮಕೂರು: ಇತ್ತೀಚೆಗೆ ಅಪಘಾತ ಪ್ರಕರಣಗಳು (Road Accident) ಹೆಚ್ಚಾಗುತ್ತಿದ್ದು, ಸಾವು ನೋವಿಗೆ ಕಾರಣವಾಗುತ್ತಿದೆ. ಬಳ್ಳಾರಿಯ ಕುಂಟನಾಳ್ ಬಳಿ ತಡರಾತ್ರಿ ನಡೆದ ಬೈಕ್ ಮತ್ತು ಲಾರಿ ಅಪಘಾತದಲ್ಲಿ ಸವಾರನೊಬ್ಬ ದಾರುಣವಾಗಿ ಮೃತಪಟ್ಟಿದ್ದಾನೆ.
ಬೈಕ್‌ಗೆ ಲಾರಿಯು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್ ಸವಾರ ಮಾರೇಶ್ (28) ಮೃತ ದುರ್ದೈವಿ.
ಮಾರೇಶ್ ಪತ್ನಿ- ಮಕ್ಕಳನ್ನು ನೋಡಿಕೊಂಡು ವಾಪಸ್ಸು ಬರುತ್ತಿದ್ದಾಗ, ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಮಾರೇಶ್ ಸ್ಥಳದಲ್ಲೇ ಜೀವ ಬಿಟ್ಟಿದ್ದಾನೆ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Actress Leelavathi: ಲೀಲಾವತಿ ಅಂತಿಮ ದರ್ಶನ ಪಡೆದ ಸೊಸೆ, ಮೊಮ್ಮಗ
ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಇಬ್ಬರು ಸಾವು
ತುಮಕೂರಿನ ಊರುಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.
ಈರುಳ್ಳಿ ತುಂಬಿಕೊಂಡು ಬರುತ್ತಿದ್ದ ಕ್ಯಾಂಟರ್ ವಾಹನವು ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಕ್ಯಾಂಟರ್‌ನಲ್ಲಿದ್ದ ಚಾಲಕ ಹಾಗೂ ಮತ್ತೋರ್ವ ಸಾವನ್ನಪ್ಪಿದ್ದಾರೆ. ಮೃತರು ಹಾಸನ ಹಾಗೂ ಚಿತ್ರದುರ್ಗ ಮೂಲದವರು ಎನ್ನಲಾಗಿದೆ.
ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ನಿಯಂತ್ರಣ ತಪ್ಪಿ ಆಂಬ್ಯುಲೆನ್ಸ್ ಪಲ್ಟಿ, ಗರ್ಭಿಣಿ ಬಚಾವ್
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ರಸ್ತೆಯ ಮಧ್ಯೆ ಆಂಬ್ಯುಲೆನ್ಸ್ ಪಲ್ಟಿಯಾಗಿ ಚಾಲಕ ಮತ್ತು ಸಿಬ್ಬಂದಿ ಗಾಯಗೊಂಡಿದ್ದಾರೆ. ಗರ್ಭಿಣಿಯನ್ನು ತಾಳಿಕೋಟಿಯಿಂದ ವಿಜಯಪುರಕ್ಕೆ ಕರೆದು ಕೊಂಡು ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಆಂಬ್ಯುಲೆನ್ಸ್ ಪಲ್ಟಿಯಾಗಿದೆ.
ಅದೃಷ್ಟವಶಾತ್ ಗರ್ಭಿಣಿಗೆ ಯಾವುದೇ ತೊಂದರೆ ಆಗಿಲ್ಲ. ಆಂಬ್ಯುಲೆನ್ಸ್ ಚಾಲಕ ಹಾಗೂ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಮತ್ತೊಂದು ಆಂಬ್ಯುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ