Site icon Vistara News

Road Accident : ಗೂಡ್ಸ್‌ ಆಟೋ ಡಿಕ್ಕಿ; ಪೌರಕಾರ್ಮಿಕ ಮಹಿಳೆಯ ಕೈ ಕಟ್‌, ನಡುರಸ್ತೆಯಲ್ಲಿ ನರಳಾಟ

Woman collides with goods auto

ಬೆಂಗಳೂರು: ಸೋಮವಾರ ಬೆಳಗ್ಗೆ ಪೌರಕಾರ್ಮಿಕ ಮಹಿಳೆಯೊಬ್ಬರು ರಸ್ತೆಯಲ್ಲಿ ಸ್ವಚ್ಛತಾ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಅತಿವೇಗವಾಗಿ ಬಂದ ಗೂಡ್ಸ್‌ ಆಟೋವೊಂದು ಡಿಕ್ಕಿ (Road Accident) ಹೊಡೆದಿದೆ. ಪರಿಣಾಮ ಮಹಿಳೆಯ ಎಡಗೈ ಕಟ್‌ ಆಗಿದೆ. ಬಿಇಎಂಎಲ್‌ ಲೇಔಟ್ ರಾಜರಾಜೇಶ್ವರಿನಗರದಲ್ಲಿ ಈ ದುರ್ಘಟನೆ ನಡೆದಿದೆ.

ವೇಗವಾಗಿ ಬಂದ ಗೂಡ್ಸ್‌ ವಾಹನವು ಮೊದಲಿಗೆ ಲೈಟ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಮಹಿಳೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಮಹಿಳೆಯ ಕೈ ಮೇಲೆ ವಾಹನ ಹರಿದಿದೆ. ಪರಿಣಾಮ ಕೈ ಮುರಿದುಕೊಂಡು ಮಹಿಳೆ ನರಳಾಡುತ್ತಿದ್ದರು. ರಕ್ತಸ್ರಾವವಾಗಿ ಒದ್ದಾಡುತ್ತಿದ್ದ ಮಹಿಳೆಯನ್ನು ಆಂಬ್ಯುಲೆನ್ಸ್‌ಗಾಗಿ ಕಾಯದೇ ಆಟೋದಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಇತ್ತ ಅಪಘಾತವಾಗುತ್ತಿದ್ದಂತೆ ವಾಹನ ಬಿಟ್ಟು ಚಾಲಕ ಸ್ಥಳದಿಂದ ಪರಾರಿ ಆಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಗೂಡ್ಸ್‌ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಪಘಾತ ಮಾಡಿ ಪರಾರಿ ಆದ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.

ಟ್ರಾಕ್ಟರ್‌ ಚಲಿಸುತ್ತಿದ್ದಾಗ ಕುಸಿದು ಬಿದ್ದ ರಸ್ತೆ ಸೇತುವೆ

ಧಾರವಾಡ ಜಿಲ್ಲೆಯ ಮೊರಬ-ಆಯಟ್ಟಿ ಬಳಿ ಇರುವ ಸೇತುವೆ ಕುಸಿದು ಬಿದ್ದಿದೆ. ಯೋಗಿಶ್‌ ಎಂಬುವವರು ಟ್ರಾಕ್ಟರ್‌ನಲ್ಲಿ ಹೊಲಕ್ಕೆ ಹೋಗುವಾಗ ಏಕಾಏಕಿ ಸೇತುವೆ ಕುಸಿದಿದೆ. ದಿಢೀರ್‌ ಕುಸಿತದಿಂದಾಗಿ ಟ್ರಾಕ್ಟರ್‌ನಲ್ಲಿ ಸಿಲುಕಿ ಇಬ್ಬರು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕಳೆದ 8 ವರ್ಷದ ಹಿಂದೆಯಷ್ಟೇ ತುಪ್ಪರಿ ಹಳ್ಳಕ್ಕೆ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಕಳಪೆ‌ ಕಾಮಗಾರಿ ಮಾಡಿರುವ ಹಿನ್ನೆಲೆಯಲ್ಲಿ ಸೇತುವೆ ಕುಸಿದಿದೆ ಎಂಬ ಆರೋಪ ಕೇಳಿ ಬಂದಿದೆ. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: Missing Case : ಸಾವನದುರ್ಗ ಚಾರಣಕ್ಕೆ ಹೋದ ಯುವಕ ಮಿಸ್ಸಿಂಗ್‌

ಕಾರು ಬಡಿದು ಮಹಿಳೆ ಸಾವು; ಶಾಲಾ ಮಕ್ಕಳ ಬಸ್‌ ಪಲ್ಟಿಯಾಗಿ ನಾಲ್ವರಿಗೆ ತೀವ್ರ ಗಾಯ

ಕಾರವಾರ: ವಾಕಿಂಗ್ ತೆರಳುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ (Road Accident) ಹೊಡೆದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರ ಅವರ್ಸಾ ಬಳಿ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಅವರ್ಸೆಯ ದೀಪಾ ಅಶೋಕ ನಾಯ್ಕ (55) ಮೃತ ದುರ್ದೈವಿ. ಗೋವಾದಿಂದ ಕೋಲಾರ ಕಡೆಗೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ಮಹಿಳೆ ಕಾರಿನ ಮೇಲೆ ಹಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಮುನ್ನವೇ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶಾಲೆ ಪ್ರವಾಸದ ಬಸ್ಸು ಪಲ್ಟಿ, ನಾಲ್ವರಿಗೆ ತೀವ್ರ ಗಾಯ

ಹಾವೇರಿ: ಪ್ರವಾಸಕ್ಕೆ ಹೊರಟಿದ್ದ ಬಸ್ ಪಲ್ಟಿಯಾಗಿ ನಾಲ್ಕು ಮಕ್ಕಳಿಗೆ ಗಂಭೀರ ಗಾಯವಾಗಿದೆ. 45 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಅಲ್ಲಿಪೂರು ಕ್ರಾಸ್ ಬಳಿ ಘಟನೆ ನಡೆದಿದೆ.

ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ಸಜ್ಜನಗುಡ್ಡದ ಸರ್ಕಾರಿ ಶಾಲೆ ಮಕ್ಕಳು ಪ್ರವಾಸ ಹೊರಟಿದ್ದ ಬಸ್‌ ಪಲ್ಟಿಯಾಗಿ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡ ನಾಲ್ವರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಣ್ಣಪುಟ್ಟ ಗಾಯಗೊಂಡ ಮಕ್ಕಳು ಸವಣೂರು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಸವಣೂರು ಉಪವಿಭಾಗಾಧಿಕಾರಿ ತಹಶೀಲ್ದಾರ್‌ ಹಾಗೂ ಸವಣೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version