ಗದಗ: ಇಲ್ಲಿನ ರೋಣ ತಾಲೂಕಿನ ಅರಹುಣಸಿ ಗ್ರಾಮದಲ್ಲಿ ಸವರ್ಣೀಯರು ದಲಿತರ ಕಾಲೋನಿ ಸಂಪರ್ಕಿಸುವ ರಸ್ತೆಗೆ ಮುಳ್ಳುಕಂಟಿ ಹಾಕಿ ರಸ್ತೆ ಬಂದ್ (Road closed) ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹುಲ್ಲೂರು ಗ್ರಾಮದಿಂದ ಅರಹುಣಸಿಗೆ ಸಂಪರ್ಕ ಮಾಡುವ ಪಕ್ಕದ ರಸ್ತೆಗೆ ಬೇಲಿ ಹಾಕಿದ್ದಾರೆ. ಇದರಿಂದ ಸುಮಾರು 400 ಜನ ದಲಿತರು ಊರೊಳಗೆ ಹೋಗಲು ಆಗದೆ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.
ದಲಿತರು ಓಡಾಡುವ ರಸ್ತೆ ಜಾಗ ನಮಗೆ ಸೇರಿದ್ದು ಎಂದು ರೈತ ಬಸನಗೌಡ ಚೌರೆಡ್ಡಿ ಎಂಬುವವರು ದಾರಿಗೆ ಬೇಲಿ ಹಾಕಿದ್ದಾರೆ. ಆದರೆ 1975ರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾಗಿರುವ ಜಾಗ ಇದು ಎಂದು ದಲಿತರು ವಾದ ಮಾಡುತ್ತಿದ್ದಾರೆ. 1974-75ರಲ್ಲಿ ದಲಿತರ ಕಾಲೋನಿಗಾಗಿ ಸುಮಾರು ಎರಡು ಎಕರೆ 38 ಗುಂಟೆ ಜಾಗವನ್ನು ಸರ್ಕಾರದವರು ಖರೀದಿ ಮಾಡಿದ್ದರು. ಆದರೆ, ಇದರಲ್ಲಿ 3 ಗುಂಟೆ ಜಾಗ ತಮ್ಮದೆಂದು ಚೌರೆಡ್ಡಿ ಕುಟುಂಬ ವಾದ ಮಾಡುತ್ತಿದೆ.
3 ಗುಂಟೆ ಜಾಗಕ್ಕಾಗಿ ಚೌರೆಡ್ಡಿ ಕುಟುಂಬದ ಅಣ್ಣ-ತಮ್ಮಂದಿರು ಜಗಳ ಮಾಡುತ್ತಿದ್ದು, ಜಗಳದ ನೆಪ ಹೇಳಿ ಆ ದಾರಿಯನ್ನು ಬಂದ್ ಮಾಡಿ ದರ್ಪ ತೋರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದಲಿತರು ಇದನ್ನು ಪ್ರಶ್ನೆ ಮಾಡಿದರೆ ಆ ಜಾಗ ನಮ್ಮದು ಎಂದು ರೈತ ಬಸನಗೌಡ ಚೌರೆಡ್ಡಿ ವಾದ ಮಾಡುತ್ತಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ರೋಣ ತಹಸೀಲ್ದಾರ್ ಭೇಟಿ ನೀಡಿದ್ದು, ಜಾಗದ ಮಾಲೀಕರ ಮನವೊಲಿಕೆಗೆ ಯತ್ನಿಸಿದ್ದಾರೆ. ಆದರೆ, ಪಟ್ಟುಬಿಡದ ಕುಟುಂಬಸ್ಥರು ಬೇಲಿ ತೆಗೆಯುವುದಿಲ್ಲ ಎಂದು ಹಠಕ್ಕೆ ಬಿದ್ದಿದ್ದಾರೆ. ಇತ್ತ ಊರೊಳಗೆ ಹೋಗಲು ಆಗದೆ ದಲಿತ ಸಮುದಾಯದವರು ಕಂಗಾಲಾಗಿದ್ದಾರೆ.
ಇದನ್ನೂ ಓದಿ | Bull attack | ಸೈಕಲ್‌ನಲ್ಲಿ ಹೋಗುತ್ತಿದ್ದ 7ರ ಬಾಲಕನ ಮೇಲೆ ಗೂಳಿ ದಾಳಿ: ಕೊಂಬಿನಿಂದ ಎತ್ತಿ ಎಸೆದ ಬೀಡಾಡಿಗಳು