ಹಾಸನ: ಇಲ್ಲಿನ ಅರಸೀಕೆರೆ ತಾಲೂಕಿನಲ್ಲಿ ನೇರ್ಲಗಿ ಗ್ರಾಮದಲ್ಲಿ ಮಳೆಯ ಆರ್ಭಟಕ್ಕೆ ಕೆರೆ ಏರಿ ಕುಸಿದು (Road collapse) ಸಂಚಾರ ಸ್ಥಗಿತಗೊಂಡಿರುವ ಘಟನೆ ನಡೆದಿದೆ. ಅರಸೀಕೆರೆ ತಾಲೂಕಿನ ಜಾವಗಲ್ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಸದ್ಯ ಸಂಪರ್ಕ ಕಡಿತವಾಗಿ ಸಂಚಾರ ಸ್ಥಗಿತಗೊಂಡಿದೆ.
ನೇರ್ಲಗಿ ಗ್ರಾಮದ ಕೆರೆ ತುಂಬಿ ನೀರಿನ ಒತ್ತಡ ಹೆಚ್ಚಾದ ಕಾರಣ ಕೆರೆ ಏರಿ ಕುಸಿದಿದೆ. ರಸ್ತೆ ಸಮೇತ ಹಂತ ಹಂತವಾಗಿ ಕುಸಿಯುತ್ತಿದ್ದು, ತಕ್ಷಣವೇ ಪರಿಹಾರ ಕಾರ್ಯಕೈಗೊಳ್ಳಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮೊದಲು ತಾತ್ಕಾಲಿಕ ವ್ಯವಸ್ಥೆಯನ್ನಾದರೂ ಮಾಡುವಂತೆ ಆಗ್ರಹಿಸಿದ್ದಾರೆ. ಕೆರೆ ಏರಿ ಒಡೆದರೆ ನೂರಾರು ಎಕರೆ ಬೆಳೆ ನಾಶವಾಗುವ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ.
ಇತ್ತ ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕೆರೆ ಏರಿ ಕುಸಿದ ಬಗ್ಗೆ ತಹಸೀಲ್ದಾರ್ ವಿದ್ಯಾ ವಿಭಾ ರಾಥೋಡ್ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ವಾಹನ ಸಂಚಾರವನ್ನು ಸ್ಥಗಿತ ಮಾಡಲಾಗಿದೆ. ಶೀಘ್ರವಾಗಿ ರಸ್ತೆ ದುರಸ್ತಿ ಬಗ್ಗೆ ಕ್ರಮವಹಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ | Rain News | ರಾಜಧಾನಿಯಲ್ಲಿ ಭೀಕರ ಮಳೆ; ರಸ್ತೆ, ಬಡಾವಣೆಗಳು ಜಲಾವೃತವಾಗಿ ಜನರ ಪರದಾಟ