ಮಂಗಳೂರು: ಧಾರಕಾರ ಮಳೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರನ್ ವೇ ಬದಿಯಲ್ಲಿ ರಸ್ತೆ ಕುಸಿತವಾಗಿದ್ದರಿಂದ ಅದ್ಯಪಾಡಿಯಿಂದ ಕೈ ಕಂಬ ಹೋಗುವ ರಸ್ತೆ ಬಂದ್ ಆಗಿರುವುದರಿಂದ ಗುರುವಾರ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಆದರೆ, ವಿಮಾನ ಹಾರಾಟದಲ್ಲಿ ವ್ಯತ್ಯಯ ಇಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಸ್ತೆ ಕುಸಿತವಾಗಿರುವುದರಿಂದ ವಿಮಾನ ನಿಲ್ದಾಣ ರನ್ ವೇಗೆ ಯಾವುದೇ ಹಾನಿಯಾಗಿಲ್ಲ, ರನ್ ವೇಗಿಂತ ಬಹಳಷ್ಟು ದೂರದಲ್ಲಿ ರಸ್ತೆ ಕುಸಿತವಾಗಿದೆ. ಇದರಿಂದ ವಿಮಾನ ಹಾರಾಟದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕುಸಿತಕ್ಕೆ ಕಲ್ಲು ಗಣಿಗಾರಿಕೆ ಕಾರಣವೇ?
ಅಧಿಕ ಮಳೆಯಿಂದ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ರಸ್ತೆ ಕುಸಿತ ಉಂಟಾಗಿದೆ. ಏರ್‌ಪೋರ್ಟ್ ತಡೆಗೋಡೆ ಒಡೆದ ಕಾರಣ ರಸ್ತೆ ಹೊಂದಿಕೊಂಡಂತೆ ಇರುವ ಗುಡ್ಡದ ಭಾಗ ಕುಸಿದಿದೆ. ಏರ್‌ಪೋರ್ಟ್ ರನ್ ವೇನಿಂದ ನೀರು ಹೊರಗೆ ಬಿಡುತ್ತಿರುವ ಕಾರಣ ಗುಡ್ಡ ಕುಸಿದಿದೆ ಎಂದು ಸ್ಥಳೀಯರು ದೂರಿದ್ದಾರೆ. ಸಮೀಪದಲ್ಲಿ ಕಲ್ಲು ಗಣಿಗಾರಿಕೆ ನಡೆಸಿದ ಸ್ಥಳದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದು ಗುಡ್ಡ ಕುಸಿತಕ್ಕೆ ಮತ್ತೊಂದು ಕಾರಣ ಎನ್ನಲಾಗಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಗುರುವಾರ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಮಳೆಯಿಂದ ಗುಡ್ಡ ಕುಸಿತವಾಗಿ ಮೂವರು ಕಾರ್ಮಿಕರು ಮೃತಪಟ್ಟ ಸ್ಥಳಕ್ಕೆ ಸಚಿವ ಸುನಿಲ್ ಕುಮಾರ್, ಶಾಸಕ ರಾಜೇಶ್ ನಾಯ್ಕ್ ಹಾಗೂ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ | Rain News | ರಾಜ್ಯಾದ್ಯಂತ ಭಾರಿ ಮಳೆ: ಕೊಡಗಲ್ಲಿ ಮನೆ ಕುಸಿತ, ಭೂಕುಸಿತ ಪ್ರದೇಶಗಳೆಡೆ ಸಚಿವರ ಜಂಟಿ ಭೇಟಿ