ಮಡಿಕೇರಿ: ಇಲ್ಲಿನ ಗಾಳಿಬೀಡು ಪಂಚಾಯಿತಿ ವ್ಯಾಪ್ತಿಯ ಅಭಯಾರಣ್ಯದೊಳಗೆ 2008ರಲ್ಲಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದೆ ರಸ್ತೆ ನಿರ್ಮಾಣ (Road Dispute) ಚಟುವಟಿಕೆಗೆ ಕೊಡಗಿನ ಇಬ್ಬರು ಶಾಸಕರು ಕೈಹಾಕಿದ್ದರು ಎಂಬ ಆರೋಪ ಕೇಳಿಬಂದಿತ್ತು. ಮಡಿಕೇರಿಯಿಂದ ಕಡಮಕಲ್ಲು ಮಾರ್ಗವಾಗಿ ದಕ್ಷಿಣ ಕನ್ನಡದ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿತ್ತು. ಆದರೆ, ಇದೇ ಈಗ ಅವರಿಗೆ ಸಂಕಷ್ಟ ತಂದೊಡ್ಡಿದೆ.
ಆದರೆ, ಅರಣ್ಯದೊಳಗೆ ರಸ್ತೆ ನಿರ್ಮಾಣ ಮಾಡುವುದನ್ನು ಖಂಡಿಸಿ ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಸುಪ್ರೀಂ ಕೋರ್ಟ್ ಕೇಂದ್ರೀಯ ಸಶಕ್ತ ಸಮಿತಿ ಸ್ಥಾಪಿಸಿತು. ಸಮಿತಿ 2012ರಲ್ಲಿ ನೀಡಿದ ವರದಿಯಲ್ಲಿ ಕಾನೂನು ಉಲ್ಲಂಘನೆ ಸುಪ್ರೀಂ ಕೋರ್ಟ್ ಆದೇಶಗಳ ತಿರಸ್ಕಾರಕ್ಕೆ ಸಮಾನವಾಗಿದೆ ಎಂದು ಹೇಳಲಾಗಿತ್ತು. ಬಳಿಕ ಪ್ರಕರಣವನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ (NGT) ವರ್ಗಯಿಸಲಾಗಿತ್ತು.
ಅಂದಿನ ಕೊಡಗು ಜಿಲ್ಲಾಧಿಕಾರಿ ಬಲದೇವ್ ಕೃಷ್ಣ ಮತ್ತು ಮುಖ್ಯ ಸಂರಕ್ಷಣಾಧಿಕಾರಿ ಜಿ ಸುದರ್ಶನ್ ಅವರು ಉಲ್ಲಂಘನೆ ತಡೆಯಲು ಕ್ರಮ ಕೈಗೊಂಡಿಲ್ಲ ಎಂದು ಸಿಇಸಿ ಹೇಳಿತ್ತು. ಅಲ್ಲದೆ, ಇದರಲ್ಲಿ ಭಾಗಿಯಾಗಿರುವ ಎಲ್ಲರಿಗೂ 2017ರ ಅಕ್ಟೋಬರ್ 3ರಂದು ಎನ್‌ಜಿಟಿ ನೋಟಿಸ್ ಜಾರಿ ಮಾಡಿತ್ತು. ಆದಾಗ್ಯೂ, ಕಳೆದ ನಾಲ್ಕು ವರ್ಷಗಳ ವಿಚಾರಣೆಯಲ್ಲಿ ಸುದರ್ಶನ್ ಸಲ್ಲಿಸಿದ ಅಫಿಡವಿಟ್ ಹೊರತುಪಡಿಸಿ, ಸಿಇಸಿ ಹೆಸರಿಸಿದ ವ್ಯಕ್ತಿಗಳಿಂದ ಯಾವುದೇ ಉತ್ತರ ಬಂದಿರಲಿಲ್ಲ. ಹೀಗಾಗಿ ಪ್ರಕರಣ ಹಳ್ಳ ಹಿಡಿದಿತ್ತು. ಆದರೀಗ ಪ್ರಕರಣಕ್ಕೆ ಮರುಜೀವ ಬಂದಿದೆ. ಈ ಪ್ರಕರಣದ ಹಿಂದೆ ರಾಜಕೀಯ ಕೈವಾಡ ಇದ್ದು, ನಾವು ಅರಣ್ಯ ನಾಶ ಮಾಡಿಲ್ಲ ಎಂದು ಶಾಸಕ ಬೋಪಯ್ಯ ಹೇಳಿದ್ದಾರೆ.
15 ವರ್ಷಗಳ ಹಿಂದೆ ವನ್ಯಜೀವಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಿಸಲು ಪ್ರಯತ್ನಿಸಿದ್ದ ಪ್ರಕರಣ ಇತ್ಯರ್ಥ ಆಗುವ ಹಂತ ತಲುಪಿದ್ದು, ಯಾವ ತೀರ್ಪು ಬರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ʼನಮ್ಮದು ಹೊಟ್ಟೆ ಪಾಡಿನ ರಾಜಕಾರಣʼ; ʼಒಕ್ಕಲಿಗ ಸಮಾಜ ನನ್ನ ಜತೆ ನಿಲ್ಲಲಿʼ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್