ಬೆಂಗಳೂರು: ಜನ ಓಡಾಡುವ ಸಮಯದಲ್ಲೇ ಚಿನ್ನದ ಅಂಗಡಿಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ ದರೋಡೆ ಮಾಡಿರುವ (Robbery Case) ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿನ್ನದಂಗಡಿ ಮಾಲೀಕ ಮನೋಜ್ ಕಾಲಿಗೆ ಗುಂಡೇಟು ತಗುಲಿದೆ.
ಹಾಡಹಗಲೇ ಬ್ಯಾಡರಹಳ್ಳಿಯ ಪೈಪ್ ಲೈನ್ ರಸ್ತೆಯಲ್ಲಿರುವ ವಿನಾಯಕ ಜ್ಯುವೆಲ್ಲರ್ಸ್‌ಗೆ ನುಗ್ಗಿದ ದರೋಡೆಕೋರರು ಅಂಗಡಿಯಲ್ಲಿದ್ದ ಮಾಲೀಕ ಮನೋಜ್ ಗನ್ ತೋರಿಸಿ ಬೆದರಿಸಲು ಮುಂದಾಗಿದ್ದಾರೆ. ಇದಕ್ಕೆ ಜಗ್ಗದೆ ಇದ್ದಾಗ ಕಾಲಿಗೆ ಗುಂಡೇಟು ಹಾರಿಸಿದ್ದಾರೆ. ಬಳಿಕ ಶಾಪ್‌ನಲ್ಲಿದ್ದ ಚಿನ್ನಾಭರಣವನ್ನೆಲ್ಲ ದೋಚಿ ಪರಾರಿಯಾಗಿದ್ದಾರೆ.
ಗುರುವಾರ (ಅ.12) ಬೆಳಗ್ಗೆ 10.45ರ ಸುಮಾರಿಗೆ ಎರಡು ಬೈಕ್‌ಗಳಲ್ಲಿ ನಾಲ್ವರು ಬಂದಿದ್ದಾರೆ. ಬೈಕ್‌ನಿಂದ ಇಳಿದವರೇ ಏಕಾಏಕಿ ವಿನಾಯಕ ಜ್ಯುವೆಲ್ಲರ್ಸ್ ಅಂಗಡಿಗೆ ನುಗ್ಗಿದ್ದಾರೆ. ಅಂಗಡಿಯಲ್ಲಿದ್ದ ಮಾಲೀಕರಿಗೆ ಗನ್ ತೋರಿಸಿ ಸುಮಾರು 1 ಕೆಜಿ ತೂಕದ ಚಿನ್ನಾಭರಣ ದರೋಡೆ ಮಾಡಿದ್ದಾರೆ. ಈ ವೇಳೆ ವಿರೋಧ ವ್ಯಕ್ತಪಡಿಸಿದ ಅಂಗಡಿ ಮಾಲೀಕನಿಗೆ ತೊಡೆಗೆ ಒಬ್ಬ ಗುಂಡು ಹಾರಿಸಿದ್ದಾರೆ. ಸದ್ಯ ಗಾಯಾಳು ಮನೋಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಾಳು ಮನೋಜ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ದೌಡಾಯಿಸಿದ್ದಾರೆ. ಸುತ್ತಮುತ್ತಲಿರುವ ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿದ್ದು, ಸಿಕ್ಕ ಸುಳಿವಿನ ಆಧಾರದ ಮೇಲೆ ದರೋಡೆಕೋರರಿಗೆ ಹುಡುಕಾಟ ನಡೆಸಿದ್ದಾರೆ. ಇತ್ತ ವಿಷಯ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ.
ಎಟಿಎಂಗೆ ಕನ್ನಾ ಹಾಕಿದ ಖದೀಮರು
ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದ ಶಿವಾಜಿ ನಗರದಲ್ಲಿ ಇರುವ ಕರ್ನಾಟಕ ಬ್ಯಾಂಕ್‌ಗೆ ಸೇರಿದ ಎಟಿಎಂನಲ್ಲಿ ಮುರಿದು ಹಣ ದೋಚಿದ್ದಾರೆ. ಗುರುವಾರ ನಸುಕಿನ ಜಾವ ಗ್ಯಾಸ್ ಕಟರ್‌ನಿಂದ ಎಟಿಎಂ ಯಂತ್ರವನ್ನು ಮುರಿದು ಸುಮಾರು 6.50 ಲಕ್ಷ ರೂ. ದೋಚಿ ನಾಪತ್ತೆಯಾಗಿದ್ದಾರೆ. ಸ್ಥಳಕ್ಕೆ ಹುಮನಾಬಾದ ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡ ಸೇರಿದಂತೆ ಬಸವಕಲ್ಯಾಣ ನಗರ ಠಾಣೆ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ