ಭಾಸ್ಕರ್ ಆರ್. ಗೆಂಡ್ಲ, ಶಿರಸಿ
ನೋಡೋಕೆ ಯೂನಿಫಾರಂ ಹಾಕಿಕೊಂಡ ಎಲ್ಕೆಜಿ ಕ್ಲಾಸ್ ಹುಡುಗಿ ಥರ ಇದ್ದರೂ ಮಕ್ಕಳಿಗೆಲ್ಲ ಇವಳೇ ಟೀಚರ್! ಮಗ್ಗಿ ಹೇಳಿ ಕೊಡೋ ಈ ಗೊಂಬೆ ಟೀಚರ್ (Robot Teacher) ಅಂದ್ರೆ ಮಕ್ಕಳಿಗೆಲ್ಲ (Students) ಭಾರೀ ಖುಷಿ. ಅಷ್ಟಕ್ಕೂ ಈ ಗೊಂಬೆ ಟೀಚರ್ (Doll Teacher) ಯಾರು ಅನ್ನೋದೆ ಮಕ್ಕಳಿಗೆಲ್ಲ ಕ್ಯೂರಿಯಾಸಿಟಿ! ಪಾಠ ಹೇಳಿ ಕೊಡುವ ಈ ಟೀಚರ್ನ ಮುದ್ದು ಮಾಡುವುದು, ಮಾತನಾಡಿಸುವುದು… ಹೀಗೆ ಮಕ್ಕಳಿಗೆ ಗೊಂಬೆ ಟೀಚರ್ ಕಂಡರೆ ಬಹಳ ಪ್ರೀತಿ.
ಗೊಂಬೆ ಟೀಚರ್ ಅಂದರೆ ಯಾವುದೇ ಮನುಷ್ಯನಲ್ಲ. ಬದಲಾಗಿ ಮಕ್ಕಳನ್ನು ಪಾಠದತ್ತ ಆಕರ್ಷಿಸುವ ರೀತಿಯಲ್ಲಿ ಪಾಠ ಮಾಡುವ ರೋಬೋ ಈಗ ಗಮನ ಸೆಳೆಯುತ್ತಿದೆ. ಶಿರಸಿಯ ಎಂ.ಇ.ಎಸ್ ಚೈತನ್ಯ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿರುವ ಅಕ್ಷಯ್ ಮಾಶೇಲ್ಕರ್ ಅವರು ಪಾಠ ಮಾಡುವ ಈ ರೋಬೋ ತಯಾರಿಸಿದ್ದು, ಮಕ್ಕಳನ್ನು ಆಕರ್ಷಿಸುತ್ತಿದೆ. ಈ ರೋಬೋ ಟೀಚರ್ಗೆ ಶಿಕ್ಷಾ ಎಂದು ಹೆಸರಿಡಲಾಗಿದೆ.
ಈ ರೋಬೋಟ್ ಶಿಕ್ಷಾ ಕಾಗುಣಿತ, ಮಗ್ಗಿ, ಪದ್ಯ ಎಲ್ಲವನ್ನೂ ಮಕ್ಕಳಿಗೆ ಹೇಳಿಕೊಡುತ್ತದೆ. ಮಕ್ಕಳನ್ನು ತಕ್ಷಣಕ್ಕೆ ಆಕರ್ಷಿಸುವ ಈ ರೋಬೋ, ಪಾಠದ ಜತೆಗೆ ಮಕ್ಕಳ ಜತೆ ಆಟವನ್ನೂ ಆಡುತ್ತದೆ. ಹೀಗಾಗಿ ಮಕ್ಕಳಿಗೆ ಈ ಗೊಂಬೆ ಟೀಚರ್ ಅಂದರೆ ಅಚ್ಚುಮೆಚ್ಚು. ಮಕ್ಕಳ ಪಾಠದ ಎಲ್ಲ ಪ್ರಶ್ನೆಗೂ ಉತ್ತರ ನೀಡುವ ರೋಬೋ, ಕ್ಲಾಸ್ನ ಟಾಪ್ ವಿದ್ಯಾರ್ಥಿಯೂ ಹೌದು.
ಇದನ್ನೂ ಓದಿ: 7th Pay Commission : ವೇತನ ಆಯೋಗದ ಶಿಫಾರಸು ಜಾರಿ ಕುರಿತು ಬಜೆಟ್ನಲ್ಲಿ ಘೋಷಣೆ; ಕಾಯ್ದಿರಿಸುವ ಹಣವೆಷ್ಟು?
ಪಾಠ ಮಾಡುತ್ತಾ ಹತ್ತಾರು ಆಟ ಆಡಿಸುತ್ತದೆ!
ಈ ರೋಬೋಟ್ಗೆ ಮೊದಲೇ ಅಗತ್ಯ ವಿಷಯಗಳನ್ನೆಲ್ಲ ಫೀಡ್ ಮಾಡಲಾಗಿದೆ. ಕೈಯಲ್ಲಿ ಸ್ಮಾರ್ಟ್ ಕಾರ್ಡ್ ಇಟ್ಟ ತಕ್ಷಣ ಏನೆಲ್ಲ ವಿಷಯಗಳಿವೆಯೋ ಅವುಗಳನ್ನು ಪ್ರತಿಯೊಬ್ಬರಿಗೂ ಅರ್ಥವಾಗುವ ಹಾಗೆ ವಿವರಣೆ ನೀಡುತ್ತದೆ. ಈಗಾಗಲೇ ಶಾಲೆ ಶಾಲೆಗೆ ಸವಾರಿ ಆರಂಭಿಸಿರುವ ಶಿಕ್ಷಾ ರೋಬೋಟ್ ಮಕ್ಕಳನ್ನು ಪಾಠದತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ, ಕೆರೆ-ದಡ, ಮ್ಯೂಸಿಕಲ್ ಚೇರ್ ಮತ್ತು ಗಣಿತಕ್ಕೆ ಸಂಬಂಧಪಟ್ಟ ಆಟಗಳನ್ನು ಕೂಡ ಆಡಿಸುತ್ತದೆ.
ಇದನ್ನೂ ಓದಿ: IND VS AUS: ದ್ವಿತೀಯ ಟೆಸ್ಟ್ಗೆ ಶ್ರೇಯಸ್ ಅಯ್ಯರ್; ಸೂರ್ಯಕುಮಾರ್ ಯಾದವ್ ಡೌಟ್?
ಸೆನ್ಸಾರ್ ಮೂಲಕ ಕಾರ್ಯನಿರ್ವಹಣೆ
ಪ್ರೊ.ಅಕ್ಷಯ್ ಮಾಶೇಲ್ಕರ್ ಅವರ ಶಿಷ್ಯ ಆದರ್ಶ್ ದೇವಾಡಿಗ ಅವರು ಸೇರಿ ನಿರ್ಮಿಸಿರುವ ಈ ರೋಬೋಟ್ ವಿದ್ಯುತ್ ಚಾಲಿತವಾಗಿದೆ. ಹಲವು ಸೆನ್ಸಾರ್ಗಳನ್ನು ಈ ಸಾಧನಕ್ಕೆ ಅಳವಡಿಸಲಾಗಿದೆ. ವಿಶೇಷವಾಗಿ ಸ್ಮಾರ್ಟ್ ಕಾರ್ಡ್ ಹಾಗೂ ಗೊಂಬೆಯ ಕೈ ಇವೆರಡರಿಂದ ಸಂವಹನ ಸಾಧ್ಯವಾಗಿರುವುದರಿಂದ ಯಾರು ಬೇಕಾದರೂ ಈ ರೋಬೋಟ್ ಅನ್ನು ನಿಯಂತ್ರಿಸಬಹುದು. ತೂಕ ಕಡಿಮೆ ಇರುವುದರಿಂದ ಆರಾಮಾಗಿ ಸಾಗಣೆ ಮಾಡಬಹುದು. ಈಗಾಗಲೇ ಪ್ರೊ. ಅಕ್ಷಯ್ ಮಾಶೇಲ್ಕರ್ ಅವರು ಹಲವು ವೈಜ್ಞಾನಿಕ ಉಪಕರಣಗಳನ್ನು ತಯಾರಿಸಿದ್ದಾರೆ. ಅವರು ತಯಾರಿಸಿದ ಮನೆಗೆ ಅಗತ್ಯವಿರುವ ಚಿಕ್ಕ ಸೋಲಾರ್ ಪ್ರಾಜೆಕ್ಟ್ ಸೇರಿದಂತೆ ಅನೇಕ ವಿಜ್ಞಾನದ ಉಪಕರಣ ಮಾಡೆಲ್ಗಳು ಗಮನ ಸೆಳೆಯುತ್ತವೆ. ಡಾ. ವಿಕ್ರಂ ಸಾರಾಭಾಯ್ ಸೈನ್ಸ್ ಮತ್ತು ಮ್ಯಾಥಮೆಟಿಕ್ಸ್ ರಿಸರ್ಚ್ ಸೆಂಟರ್ ತೆರೆದಿರುವ ಅಕ್ಷಯ್, ವಿವಿಧ ಶಾಲೆಗಳ ಮಕ್ಕಳಿಗೆ ವಿಜ್ಞಾನದ ಮಾಡೆಲ್ ಮಾಡಲು ನೆರವು ನೀಡುತ್ತಿದ್ದಾರೆ. ಈ ಹಿಂದೆ ಲಯನ್ಸ್ ಶಾಲೆಯ ಮಕ್ಕಳಿಗೆ ಗ್ಯಾಸ್ ಗೀಜರ್ನಿಂದ ಆಗುವ ಅವಘಡ ತಡೆಯುವ ಬಗ್ಗೆ ವಿಷಯ ಮಂಡಿಸಲು ಸಹಕಾರಿಯಾಗಿದ್ದರು. ಜತೆಗೆ ವಿಷಯ ಮಂಡಿಸಿದ ವಿದ್ಯಾರ್ಥಿಗಳು ಯುವ ವಿಜ್ಞಾನಿ ಪ್ರಶಸ್ತಿಗೂ ಭಾಜನರಾಗಿದ್ದರು.
ಇದನ್ನೂ ಓದಿ: Karnataka Election : ಭ್ರಷ್ಟ, ಬಚ್ಚಲು ಬಾಯಿ ಮಾತಿಗೆ ನಾನು ಉತ್ತರ ಕೊಡೊಲ್ಲ: ಅಶ್ವತ್ಥನಾರಾಯಣ್ ಹೇಳಿಕೆಗೆ ಡಿಕೆಶಿ ಗರಂ
“ವೈಜ್ಞಾನಿಕ ಉಪಕರಣಗಳ ಬಗ್ಗೆ ಹೊಸ ಸಂಶೋಧನೆ ಮಾಡುವುದು ನನ್ನ ಫ್ಯಾಷನ್. ಮಕ್ಕಳು ಆಟದ ಜತೆಗೆ ಕಲಿಯುವುದರಿಂದ ಹೆಚ್ಚು ನೆನಪಿಸಲ್ಲಿ ಇರುತ್ತದೆ. ಮೊಬೈಲ್ಗಳ ಬದಲಾಗಿ ಇಂಥ ಹೊಸ ತಂತ್ರಜ್ಞಾನ ಬಳಸಿ ಪಾಠ ಮಾಡುವುದರಿಂದ ಮಕ್ಕಳಿಗೆ ಕಲಿಯುವ ಆಸಕ್ತಿಯೂ ಹೆಚ್ಚಾಗುತ್ತದೆ. ಹೀಗಾಗಿ ರೋಬೋ ಟೀಚರ್ ತಯಾರಿಸಿದ್ದೇವೆ. ಅಲ್ಲದೆ ಶಿಕ್ಷಾ ೨.೦ ಕೂಡ ರೆಡಿ ಮಾಡಲು ತೀರ್ಮಾನಿಸಲಾಗಿದೆ. ಅದು ಈ ಶಿಕ್ಷಾಗಿಂತ ಅಪ್ಡೇಟ್ ಆಗಿರುತ್ತದೆ” ಎನ್ನುತ್ತಾರೆ ಪ್ರೊ. ಅಕ್ಷಯ್ ಮಾಶಲ್ಕೇಕರ್.
ಇದನ್ನೂ ಓದಿ: Ayodhya Ram Temple: ರಾಮಮಂದಿರ ನಿರ್ಮಾಣಕ್ಕೆ ಮೈಸೂರಿನ ಶಿಲೆಗಳು; ಈಗಾಗಲೇ ಅಯೋಧ್ಯೆ ತಲುಪಿವೆ 2 ಕಲ್ಲುಗಳು