ಕಲಬುರಗಿ: ಬಿಜೆಪಿ ಮುಖಂಡ, ವಿಧಾನಸಭೆ ಚುನಾವಣೆಯಲ್ಲಿ ಪ್ರಿಯಾಂಕ ಖರ್ಗೆ (Priyank Kharge) ವಿರುದ್ಧ ಸ್ಪರ್ಧಿಸಿದ್ದ ರೌಡಿಶೀಟರ್ (Rowdy sheeter) ಮಣಿಕಂಠ ರಾಥೋಡ್ ಇದೀಗ ಸಂಕಷ್ಟ ಎದುರಾಗಿದೆ.
ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ನನ್ನು ಪೊಲೀಸರು ರಾತ್ರೋರಾತ್ರಿ ಬಂಧಿಸಿ ಕರೆದೊಯ್ದಿದ್ದು, ರಾತ್ರಿಯೇ ರಾಠೋಡ್ ಸ್ಟೇಶನ್ ಜಾಮೀನು ಮೇಲೆ ಹೊರಬಂದಿದ್ದಾರೆ. ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಗಿದೆ. ಇದಲ್ಲದೆ ಕೊಲೆಯತ್ನ, ಕೊಲೆ ಬೆದರಿಕೆ, ಅಪಹರಣ, ಹಲ್ಲೆ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಮಣಿಕಂಠ ರಾಠೋಡ್ ಹೆಸರು ಇದೆ.
ಮಣಿಕಂಠ ರಾಠೋಡ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ನಿಂತಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬ ಸಾಫ್ ಮಾಡುವುದಾಗಿ (murder threat) ಮಣಿಕಂಠ ಹೇಳಿದ್ದ ಆಡಿಯೋ ಚುನಾವಣೆ ಸಂದರ್ಭದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. ಮಣಿಕಂಠ ರಿವಾಲ್ವರ್ ತಿರುಗಿಸುತ್ತಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಈಗ ಕೊಲೆ ಬೆದರಿಕೆ ಪ್ರಕರಣದ ತನಿಖೆಯೂ ಚುರುಕು ಪಡೆದುಕೊಂಡಿದೆ.
ಪ್ರಿಯಾಂಕ ಖರ್ಗೆ ಸಚಿವರಾದ ಬಳಿಕ ಕಲಬುರಗಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಚರ್ಚೆ ಮಾಡಿದ್ದರು. ಖುದ್ದು ನಾನೇ ದೂರು ಕೊಟ್ಟರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದರು. ʼʼಸುಳ್ಳು ಸುದ್ದಿ ಹಬ್ಬಿಸುವವರು, ಕೊಲೆ ಬೆದರಿಕೆ ಹಾಕುವವರು ಆರಾಮಾಗಿ ಬೀದಿಗಳಲ್ಲಿ ತಿರುಗಾಡುತ್ತಿದ್ದಾರೆ. ನನ್ನ ಕುಟುಂಬದ ಮೇಲೆ ಬೆದರಿಕೆ ಹಾಕಿದರನ್ನು ದೂರು ಕೊಟ್ಟರೂ ತನಿಖೆ ನಡೆಸದೆ ಯಾಕೆ ಸುಮ್ಮನೆ ಬಿಟ್ಟಿದ್ದೀರಿ?ʼʼ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಈ ಪ್ರಕರಣದಲ್ಲಿ ನ್ಯಾಯಾಲಯದಿಂದ ಮಣಿಕಂಠ ರಾಠೋಡ್ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಆದಾಗ್ಯೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಕಂಠ ರಾಠೋಡ್‌ಗೆ ಚಿತ್ತಾಪೂರ ಪೊಲೀಸರು ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ: Karnataka Politics: ಯತೀಂದ್ರ ಸಿದ್ದರಾಮಯ್ಯ ಮಾತ್ರ ಅಲ್ಲ, ಪ್ರಿಯಾಂಕ್ ಖರ್ಗೆ ಕೂಡಾ SHADOW CM!