ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡುವ ಸಮಿತಿಯ ಸಭೆಯಲ್ಲಿ, ಒಟ್ಟು ₹34,115 ಕೋಟಿ ಮೊತ್ತದ ಬಂಡವಾಳ ಹೂಡಿಕೆಯ 14 ಉದ್ಯಮಗಳ ಸ್ಥಾಪನೆಗೆ ಅನುಮೋದನೆ ನೀಡಲಾಯಿತು. ಇದರಿಂದ 13,308 ಜನರಿಗೆ ಉದ್ಯೋಗ (Job Creation) ದೊರೆಯುವ ನಿರೀಕ್ಷೆ ಇದೆ.
ಈ ಬಗ್ಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಮಾಹಿತಿ ನೀಡಿದ್ದು, ಹೆಚ್ಚುವರಿ ರೂ. 13,911 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡುವ ಫಾಕ್ಸ್‌ಕಾನ್‌ನ ಪ್ರಸ್ತಾವನೆಯನ್ನು ಸಮಿತಿಯು ಅನುಮೋದಿಸಿದೆ. ಫಾಕ್ಸ್‌ಕಾನ್, ಈಗಾಗಲೇ ರಾಜ್ಯದಲ್ಲಿ ರೂ 8,000 ಕೋಟಿ ಬಂಡವಾಳ ಹೂಡಿಕೆ ಮಾಡಲು ಅನುಮೋದನೆ ಪಡೆದಿದೆ ಎಂದು ತಿಳಿಸಿದರು.
ಜೆಎಸ್‌ಡಬ್ಲ್ಯು ರಿನ್ಯೂ ಎನರ್ಜಿ ಫೋರ್ ಲಿಮಿಟೆಡ್ (4,960 ಕೋಟಿ ರೂ.), ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್ (3,804 ಕೋಟಿ ರೂ.), ಟೊಯೊಟಾ ಕಿರ್ಲೋಸ್ಕರ್ ಮೋಟರ್ ಪ್ರೈವೇಟ್ ಲಿಮಿಟೆಡ್ (3237.30 ಕೋಟಿ ರೂ.), ಟಿಆರ್‌ಐಎಲ್ ಬೆಂಗಳೂರು ರಿಯಲ್ ಎಸ್ಟೇಟ್ ಸಿಕ್ಸ್ ಲಿಮಿಟೆಡ್ (3273 ಕೋಟಿ ರೂ. ಹೂಡಿಕೆ), ಜಾನಕಿ ಕಾರ್ಪ್ ಲಿಮಿಟೆಡ್ (607 ಕೋಟಿ ರೂ. ಮೊತ್ತದ ಹೆಚ್ಚುವರಿ ಹೂಡಿಕೆ) ಪ್ರಸ್ತಾವನೆಗಳು ’ಎಸ್‌ಎಚ್‌ಎಲ್‌ಸಿಸಿ’ ಅನುಮೋದನೆ ಪಡೆದಿರುವ ದೊಡ್ಡ ಮೊತ್ತದ ಬಂಡವಾಳ ಹೂಡಿಕೆ ಯೋಜನೆಗಳಲ್ಲಿ ಸೇರಿವೆ ಎಂದು ಸಚಿವರು ವಿವರಿಸಿದರು.
“ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 4 ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳಿಂದ ಒಟ್ಟು 9,461 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಆಗಲಿದೆ. ಇವುಗಳಿಂದ ಈ ಪ್ರದೇಶದಲ್ಲಿ 3538 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಸರ್ಕಾರದ ಕಡೆಯಿಂದ ನಡೆಯುತ್ತಿರುವ ಇಂತಹ ಸಂಘಟಿತ ಪ್ರಯತ್ನಗಳು ’ಬೆಂಗಳೂರಿನ ಆಚೆ’ ಉಪಕ್ರಮದ ಭಾಗವಾಗಿವೆ” ಎಂದು ಸಚಿವ ಎಂ.ಬಿ.ಪಾಟೀಲ ಮಾಹಿತಿ ನೀಡಿದರು.
ಇದನ್ನೂ ಓದಿ | Female Foeticide: ಹೆಣ್ಣು ಭ್ರೂಣ ಹತ್ಯೆ ತಡೆಗೆ ರಾಜ್ಯ ಮಟ್ಟದ ಟಾಸ್ಕ್‌ಫೋರ್ಸ್: ದಿನೇಶ್ ಗುಂಡೂರಾವ್
ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ , ಸಚಿವರಾದ ಚೆಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ, ನಾಗೇಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯೆಲ್, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ಶಾಲಿನಿ ರಜನೀಶ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ