Site icon Vistara News

Sadashiva Commission Protest | ಸರ್ಕಾರದ ಏಕಮುಖ ಶಿಫಾರಸಿಗೆ ವಿರೋಧ; ರಾಜಧಾನಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ

Sadashiva Commission Protest at freedom park

ಬೆಂಗಳೂರು: ಕೇಂದ್ರ ಸರ್ಕಾರವು ನ್ಯಾ ಸದಾಶಿವ ಆಯೋಗದ ವರದಿಯನ್ನು (Sadashiva Commission Protest) ಸಾರ್ವಜನಿಕವಾಗಿ ಚರ್ಚಿಸದೆ ಏಕಮುಖವಾಗಿ ಶಿಫಾರಸು ಮಾಡಲು ಹೊರಟಿರುವುದನ್ನು ವಿರೋಧಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು. ಆಯೋಗದ ವರದಿಯು ಅವಾಸ್ತವಿಕ ಮತ್ತು ಅವೈಜ್ಞಾನಿಕ ಅಂಶಗಳನ್ನು ಒಳಗೊಂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮಂಗಳವಾರ ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ಭೋವಿ, ಬಂಜಾರ, ಕೊರಮ ಹಾಗೂ ಅರೆ ಅಲೆಮಾರಿ ಸಮುದಾಯದ ನೂರಾರು ಜನರು‌ ಅರೆಬೆತ್ತಲಾಗಿ ಪ್ರತಿಭಟನೆಯಲ್ಲಿ ಭಾಗಿಯಾದರು. ಮೀಸಲಾತಿ ಭಿಕ್ಷೆಯಲ್ಲ, ಅದು ನಮ್ಮ ಜನ್ಮಸಿದ್ಧ ಹಕ್ಕು ಎಂದು ಒತ್ತಾಯಿಸಿದರು.

ಆಯೋಗ ವರದಿಗೆ ವಿರೋಧ ಯಾಕೆ?
2005ರಲ್ಲಿ ಕೆಲ ಸಮುದಾಯಗಳ ಸ್ಥಿತಿಗತಿಗಳ ವರದಿ ಅಧ್ಯಯನಕ್ಕೆ ರಚಿಸಿದ್ದ ಸದಾಶಿವ ಆಯೋಗವನ್ನು ಶಿಫಾರಸ್ಸು ಮಾಡಲು ಹೊರಟಿರುವುದಕ್ಕೆ ಭೋವಿ, ಬಂಜಾರ, ಕೊರಚ, ಕೊರಮ ಸೇರಿದಂತೆ ವಿವಿಧ ಅಲೆಮಾರಿ ಸಮುದಾಯಗಳು ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿವೆ.
ಆಯೋಗ ಸರಿಯಾಗಿ ಅಧ್ಯಯನ ನಡೆಸದೇ ವರದಿ ತಯಾರಿಸಿದೆ ಎಂದು ಮೀಸಲಾತಿ ಸಂರಕ್ಷಣಾ ಒಕ್ಕೂಟ ಕಿಡಿಕಾರುತ್ತಿದೆ. ಸಾರ್ವಜನಿಕರ ಗಮನಕ್ಕೆ ತಾರದೇ, ನಾಲ್ಕು ಗೋಡೆ ಮಧ್ಯೆ ಕೂತು ವರದಿ ಮಾಡಿದ್ದಾರೆ. ಇದರಿಂದ ನಮ್ಮ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸದಾಶಿವ ಆಯೋಗ ಜಾರಿಗೆ ಬಂದರೆ 99 ಸಮುದಾಯಗಳ ಮೀಸಲಾತಿಗೆ ಕಂಟಕ ಎದುರಾಗುತ್ತೆ ಎಂಬ ಆತಂಕ ವ್ಯಕ್ತಪಡಿಸಿದರು.

ಸರ್ಕಾರ ಇತ್ತೀಚೆಗಷ್ಟೇ ಆಯೋಗದ ಸಾಧ್ಯಾಸಾಧ್ಯತೆಗಳನ್ನು ಚರ್ಚಿಸಲು ಸಚಿವ ಸಂಪುಟ ಉಪಸಮಿತಿ ರಚನೆ ಮಾಡಿತ್ತು. ಈ ಸಮಿತಿಗೆ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅಧ್ಯಕ್ಷರಾಗಿದ್ದರು. ಈ ಬೆಳವಣಿಗೆಯಿಂದ 99 ಸಮುದಾಯಗಳ ಮುಖಂಡರಿಗೆ ಸರ್ಕಾರದ ಒಳತಂತ್ರದ ಬಗ್ಗೆ ಅನುಮಾನ ಮೂಡಿದೆ. ಹೀಗಾಗಿ ಬೃಹತ್​ ಪ್ರತಿಭಟನೆ ನಡೆಸಿ ಸಮುದಾಯಗಳ ಶಕ್ತಿಪ್ರದರ್ಶನ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಸಚಿವ ಆರ್‌ ಅಶೋಕ್‌
ಪ್ರತಿಭಟನೆ ಬಿಸಿ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಕಂದಾಯ ಸಚಿವ ಆರ್‌ ಅಶೋಕ್​ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು. ನಮ್ಮ ಸರ್ಕಾರ ಯಾವುದೇ ಅನ್ಯಾಯ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

ಒಟ್ಟಾರೆ, ಒಂದರ ಹಿಂದೆ ಒಂದು ಸಮುದಾಯಗಳು ಸರ್ಕಾರದ ವಿರುದ್ಧ ಮೀಸಲಾತಿ ಅಸ್ತ್ರ ಪ್ರಯೋಗ ಮಾಡುತ್ತಿವೆ. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎಂಬಂತೆ ಸಚಿವರು​ ಭರವಸೆ ನೀಡಿ ಪ್ರತಿಭಟನೆ ತಣ್ಣಗಾಗುವಂತೆ ಮಾಡಿದ್ದಾರೆ. ಒಂದು ವೇಳೆ ಸರ್ಕಾರ ಆ ಸಮುದಾಯಗಳ ಬೇಡಿಕೆ ಈಡೇರದೆ ಹೋದರೆ ಮತ್ತೆ ಪ್ರತಿಭಟನೆ ಕಿಡಿ ಹೆಚ್ಚಾಗಲಿದೆ.

ವಾಹನ ಸವಾರರು ಸುಸ್ತು
ಸಮುದಾಯಗಳ ಪ್ರತಿಭಟನೆ ಕಾವು ಓಕಳೀಪುರ, ಮಾಗಡಿ ರಸ್ತೆ, ಶೇಷಾದ್ರಿ ರಸ್ತೆ, ಗೂಡ್‌ಶೆಡ್ ರೋಡ್ ಸೇರಿ ಸುತ್ತ ಮುತ್ತ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಮೆಜೆಸ್ಟಿಕ್‌ನಿಂದ ಕೆ.ಆರ್.ಸರ್ಕಲ್ ಮಾರ್ಗವಾಗಿ ಬರುವ ವಾಹನಗಳನ್ನು ರೇಸ್ ಕೋರ್ಸ್ ರೋಡ್‌ಗೆ ಡೈವರ್ಟ್ ಮಾಡಲಾಗಿತ್ತು. ಎರಡು ಮೂರು ಕಿ.ಮೀ ಟ್ರಾಫಿಕ್ ಜಾಮ್ ಆಗಿ ಜನರು ನಿಂತಲ್ಲೇ ನಿಲ್ಲುವಂತಾಯಿತು.

ಇದನ್ನೂ ಓದಿ | Pathaan Movie | ಪಠಾಣ್‌ ಸಿನಿಮಾದ ನಗ್ನತೆಯನ್ನು ಭಾರತೀಯ ಸಿನಿಮಾಗಳಲ್ಲಿ ಪ್ರದರ್ಶಿಸಬಾರದು: ಅನಂತ್‌ನಾಗ್

Exit mobile version