ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಸೇರಿದಂತೆ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆಗಾಗಿ ಪೊಲೀಸ್ ಇಲಾಖೆ ಸೇಫ್ ಸಿಟಿ ಪ್ರಾಜೆಕ್ಟ್ ಅನ್ನು ಜಾರಿಗೆ ತರುತ್ತಿದೆ. ಈ ಯೋಜನೆಯಡಿ ಐದು ಕೋಟಿ ರೂ. ವೆಚ್ಚದಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.
ಸೇಫ್ ಸಿಟಿ ಪ್ರಾಜೆಕ್ಟ್ ಅಡಿ ಕಾನೂನು ಉಲ್ಲಂಘಿಸುವವರು, ಅಪರಾಧ ಕೃತ್ಯ ನಡೆಸುವವರ ವಿರುದ್ದ ಹದ್ದಿನ ಕಣ್ಣು ಇಡಲಾಗುತ್ತದೆ, ಕಮೀಷನರೇಟ್ ವ್ಯಾಪ್ತಿ ಸೇರಿದಂತೆ, ಕೇರಳ ಗಡಿ, ಪ್ರಮುಖ ಸ್ಥಳಗಳಲ್ಲಿ ಅಟೊಮ್ಯಾಟಿಕ್ ನಂಬರ್ ಪ್ಲೇಟ್ ರೀಡರ್ ಕ್ಯಾಮೆರಾ ಅಳವಡಿಸಲಾಗುತ್ತದೆ. ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳ ಪ್ರವೇಶ, ನಕಲಿ ನಂಬರ್ ಪ್ಲೇಟ್ ಹಾಕಿದ ವಾಹನಗಳ ಪಕ್ಕಾ ಮಾಹಿತಿಗಳು ಇಲಾಖೆಗೆ ಸಿಗಲಿವೆ.
ಅಪರಾಧಗಳಿಗೆ ಸಾಕ್ಷಿ
ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಖಾಸಗಿ ಕಟ್ಟಡಗಳಲ್ಲಿ ಹಾಕಿರುವ ಸಿ.ಸಿ ಕ್ಯಾಮೆರಾ ಸೇರಿದಂತೆ ಒಟ್ಟು 18 ಸಾವಿರ ಸಿ.ಸಿ ಕ್ಯಾಮೆರಾಗಳಿವೆ. ಸಂಘಟಿತ ಅಪರಾಧಗಳು ನಡೆದಾಗ ಈ ಸಿಸಿ ಕ್ಯಾಮೆರಾಗಳಿಂದಲೇ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತದೆ. ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯಡಿಯೂ ಸಿ.ಸಿ ಕ್ಯಾಮೆರಾ ಅಳವಡಿಸುತ್ತಿದ್ದು ಹೈ ಸ್ಪೀಡ್ ಕ್ಯಾಮೆರಾ. ಫ್ಲ್ಯಾಶ್ ಕ್ಯಾಮೆರಾ ಹಾಕಲಾಗುತ್ತಿದೆ. ಇದರ ಮೂಲಕ ಸೀಟ್ ಬೆಲ್ಟ್ ಹಾಕದೇ ವಾಹನ ಚಾಲನೆ, ಹೆಲ್ಮೆಟ್ ಹಾಕದೇ ಸವಾರಿ, ತ್ರಿಬಲ್ ರೈಡಿಂಗ್ ಸೇರಿದಂತೆ ನಾಲ್ಕೈದು ಸಂಚಾರ ನಿಯಮ ಉಲ್ಲಂಘನೆ ಪತ್ತೆ ಆಗಲಿದೆ.
ಪರಿವಾಹನ್‌ಗೆ ಕನೆಕ್ಟ್
ಅಟೋಮ್ಯಾಟಿಕ್ ನಂಬರ್‌ಪ್ಲೇಟ್ ರೀಡರ್ ಕ್ಯಾಮೆರಾ ಸಾರಿಗೆ ಇಲಾಖೆಯ ಪರಿವಾಹನ್ ಸಾಫ್ಟ್‌ವೇರ್‌ಗೆ ಲಿಂಕ್ ಆಗಿರಲಿದ್ದು ಪ್ರತಿಯೊಂದು ವಾಹನಗಳ ನಂಬರ್ ಪ್ಲೇಟ್ ಸ್ಕ್ಯಾನ್ ಆಗಿ ಇಲಾಖೆಗೆ ಮಾಹಿತಿ ಸಿಗಲಿದೆ. ಇದರಿಂದ ಫೇಕ್ ನಂಬರ್ ಪ್ಲೇಟ್ ಹಾಕಿ ಅಪರಾಧ ಕೃತ್ಯ ನಡೆಸುವವರು ಸಹ ಅಂದರ್ ಆಗಲಿದ್ದಾರೆ. ಒಂದು ದಿನದಲ್ಲಿ ಎಂಟ್ರಿ, ಎಕ್ಸಿಟ್ ಆದ ವಾಹನಗಳ ಸಂಪೂರ್ಣ ಮಾಹಿತಿ ಬೇಕೆಂದರೂ ಸಿಗಲಿದೆ. ಅತಿ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘಿಸಿಯೂ ದಂಡ ಕಟ್ಟದ ವಾಹನಗಳ ಬಗ್ಗೆಯೂ ಅಲರ್ಟ್ ಮಾಡಲಿದೆ. ದಂಡದ ಚಲನ್‌ನ್ನು ಪ್ರಿಂಟ್ ಮಾಡಿ ಇಲಾಖೆಗೆ ಇಲಾಖೆಗೆ ತಲುಪಿಸಲಾಗುತ್ತದೆ.
ಇದನ್ನೂ ಓದಿ: ಮರೆಯಲಾಗದ ಮೈಸೂರಿನ ಮಹಾರಾಜ; ನಾಲ್ವಡಿ ಕೃಷ್ಣರಾಜ ಒಡೆಯಾರ್