ಸಾಗರ: ಮನೆ ಮನೆಗೆ ಪೈಪ್‍ಗಳ ಮೂಲಕ ಗ್ಯಾಸ್ ಸಂಪರ್ಕ ಕಲ್ಪಿಸುವ ಯೋಜನೆ ಅನುಷ್ಠಾನ ಕುರಿತು ಶುಕ್ರವಾರ (ಡಿ.೩೦) ಸಾಗರ ನಗರಸಭೆಯಲ್ಲಿ (Sagar News) ಬಿಸಿಬಿಸಿ ಚರ್ಚೆ ನಡೆದು, ಅಂತಿಮವಾಗಿ ತಾತ್ಕಾಲಿಕವಾಗಿ ಪೈಪ್ ಮತ್ತು ಮೀಟರ್ ಅಳವಡಿಸಲು ಒಪ್ಪಿಗೆ ಸೂಚಿಸಿದೆ.
ಈಗಾಗಲೇ ಯೋಜನೆ ಅನುಷ್ಠಾನಗೊಂಡಿರುವ ನಗರಗಳನ್ನು ವೀಕ್ಷಣೆ ಮಾಡಿ ಪೂರ್ಣ ಪ್ರಮಾಣದ ಅನುಮತಿ ನೀಡುವ ನಿರ್ಣಯವನ್ನು ನಗರಸಭೆ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗಿದೆ.
ವಿಷಯ ಕುರಿತು ಮಾತನಾಡಿದ ಶಾಸಕ ಹಾಲಪ್ಪ ಹರತಾಳು, ಯೋಜನೆ ಅನುಷ್ಠಾನಕ್ಕೂ ಮೊದಲು ಸ್ಥಳೀಯ ಸಂಸ್ಥೆಗಳ ಒಪ್ಪಿಗೆ ಪಡೆಯುವುದು ಕಡ್ಡಾಯ. ಈಗಾಗಲೇ ಗ್ಯಾಸ್ ಪೈಪ್ ಅಳವಡಿಸಿರುವ ಊರುಗಳಿಗೆ ನಗರಸಭೆ ನಿಯೋಗ ಪ್ರವಾಸ ಮಾಡಿ ಯೋಜನೆ ಸಾಧಕ ಬಾಧಕಗಳ ಕುರಿತು ಪರಿಶೀಲನೆ ನಡೆಸಲಿದೆ. ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಇದಾಗಿದ್ದು, ಸಾರ್ವಜನಿಕರಿಗೆ ಉಪಯುಕ್ತವಾಗುವ ರೀತಿಯಲ್ಲಿ ಅನುಷ್ಠಾನಕ್ಕೆ ತರಲು ಸಲಹೆ ನೀಡಿದರು.
ಇದನ್ನೂ ಓದಿ | Amit Shah | ಸಂಸದೆ ಸುಮಲತಾರನ್ನೂ BJP ಲೆಕ್ಕಕ್ಕೆ ಸೇರಿಸಿಕೊಂಡ ಅಮಿತ್ ಶಾ!: JDS-Congress ವಿರುದ್ಧ ವಾಗ್ದಾಳಿ
ಬಿಜೆಪಿ ಸದಸ್ಯ ಟಿ.ಡಿ.ಮೇಘರಾಜ್ ಮಾತನಾಡಿ, ಈಗಾಗಲೇ ಯೋಜನೆ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಪ್ರಾಥಮಿಕ ಕೆಲಸವನ್ನು ಕಂಪನಿಯು ಪೂರ್ಣಗೊಳಿಸಿದೆ. ಇದಕ್ಕೂ ಮೊದಲು ನಗರಸಭೆಯಿಂದ ಯಾವುದೇ ಪರವಾನಗಿ ಪಡೆದಿಲ್ಲ. ಗ್ಯಾಸ್ ಪೈಪ್ ಅಳವಡಿಸಲು ಗುಂಡಿ ತೆಗೆಯುವುದರಿಂದ ರಸ್ತೆ ಹೊಂಡಗುಂಡಿ ಆಗುತ್ತದೆ. ಶಾಸಕರು, ನಗರಸಭೆ ಆಡಳಿತವು ಸರ್ಕಾರದಿಂದ ಕಷ್ಟಪಟ್ಟು ಅನುದಾನ ತಂದು ರಸ್ತೆ, ಚರಂಡಿ ನಿರ್ಮಿಸಲಾಗಿದೆ. ಯೋಜನೆ ಅನುಷ್ಠಾನದಿಂದ ನಗರಸಭೆಗೆ ಏನು ಲಾಭ ಎನ್ನುವುದು ತಿಳಿಸಿ ಎಂದರು.
ವಿರೋಧ ಪಕ್ಷದ ಸದಸ್ಯರಾದ ಗಣಪತಿ ಮಂಡಗಳಲೆ, ಎನ್.ಲಲಿತಮ್ಮ, ಸೈಯದ್ ಜಾಕೀರ್, ಉಮೇಶ್ ಮಾತನಾಡಿ, ಈಗಾಗಲೇ ಒಳ ಚರಂಡಿ ಯೋಜನೆಯಡಿ ಸಾಕಷ್ಟು ರಸ್ತೆಗಳನ್ನು ಅಗೆಯಲಾಗಿದ್ದು, ಈ ತನಕ ಟಾರ್ ಮಾಡಿಲ್ಲ. ಈಗ ಗ್ಯಾಸ್ ಪೈಪ್‍ಲೈನ್ ಅಳವಡಿಕೆ ಹೆಸರಿನಲ್ಲಿ ಮತ್ತೆ ರಸ್ತೆ ಗುಂಡಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ, ನಗರಸಭೆ ಒಪ್ಪಿಗೆಯನ್ನು ಸಹ ಪಡೆಯದೆ ಈಗಾಗಲೇ ಕೆಲವು ಮನೆಗಳಿಗೆ ಪೈಪ್‍ಲೈನ್ ಅಳವಡಿಸಲು ಪರವಾನಿಗೆ ನೀಡಿದವರು ಯಾರು ಎಂದು ಕೇಳಿದರು.
ಇದನ್ನೂ ಓದಿ | Teacher Transfer | ಮೊದಲು ಬಡ್ತಿ ನೀಡಿ ನಂತರ ವರ್ಗಾವಣೆ ಪ್ರಕ್ರಿಯೆ ನಡೆಸಿ: ಶಿಕ್ಷಕರ ಸಂಘ ಒತ್ತಾಯ
ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, ಯೋಜನೆಯ ಸಾಧಕ ಬಾಧಕ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ. ಯೋಜನೆಗೆ ತಾತ್ಕಾಲಿಕ ಒಪ್ಪಿಗೆಯನ್ನು ಸಭೆ ನೀಡುತ್ತಿದ್ದು, ಈಗಾಗಲೇ ಕಂಪನಿ ಬೇರೆ ಬೇರೆ ಊರುಗಳಲ್ಲಿ ಮಾಡಿರುವ ಕೆಲಸವನ್ನು ಗಮನಿಸಿ, ನಗರಸಭೆ ನಿಯೋಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ನಂತರ ಇದನ್ನು ಪೈಲೆಟ್ ಪ್ರಾಜೆಕ್ಟ್ ಆಗಿ ಪರಿಗಣಿಸಿ ನಗರವ್ಯಾಪ್ತಿಯ 15000 ಮನೆಗಳಿಗೂ ಪೈಪ್‍ಲೈನ್ ಅಳವಡಿಸಿ ಗ್ಯಾಸ್ ಸಂಪರ್ಕ ಕಲ್ಪಿಸಲು ಪೂರ್ಣ ಪ್ರಮಾಣದ ಒಪ್ಪಿಗೆ ನೀಡಲಾಗುತ್ತದೆ ಎಂದು ಹೇಳಿದರು.
ರಸ್ತೆ ಅಪಘಾತ ತಡೆಯಲು ಕಟ್ಟುನಿಟ್ಟಿನ ಸೂಚನೆ
ನಗರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಅಪಘಾತದ ಬಗ್ಗೆ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ ಶಾಸಕ ಹಾಲಪ್ಪ ಹರತಾಳು, ನಗರದ ಬೇರೆಬೇರೆ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಇಂತಹ ರಸ್ತೆಗಳಲ್ಲಿ ಸಂಬಂಧಪಟ್ಟ ಇಲಾಖೆಯು ಎಚ್ಚರಿಕೆ ನಾಮಫಲಕ ಅಳವಡಿಸಬೇಕು. ಮುಂದಿನ ಮೂರು ದಿನಗಳಲ್ಲಿ ರಸ್ತೆಯಲ್ಲಿ ಎಚ್ಚರಿಕೆ ನಾಮಫಲಕ, ಬ್ಯಾರಿಕೇಡ್‍ಗಳನ್ನು ಹಾಕಬೇಕು. ರಸ್ತೆಯಲ್ಲಿ ನಡೆಯುವ ಪಾದಾಚಾರಿಗಳು ಹೊಸ ನಿಯಮದ ಪ್ರಕಾರ ಬಲ ಭಾಗದಲ್ಲಿಯೇ ನಡೆದು ಹೋಗಬೇಕು. ಆಗ ಎದುರಿನಿಂದ ಬರುವ ವಾಹನದಿಂದ ಜೀವ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇಲಾಖೆಗಳು ವಿದ್ಯಾರ್ಥಿಗಳಲ್ಲಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಲಹೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷ ವಿ.ಮಹೇಶ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಸಾರಿಗೆ, ಪೊಲೀಸ್, ಪಿಡಬ್ಲ್ಯೂಡಿ ಸೇರಿದಂತೆ ನಗರಸಭೆ ಅಧಿಕಾರಿಗಳು, ಸದಸ್ಯರು ಹಾಜರಿದ್ದರು. ಇದೇ ಸಂದರ್ಭದಲ್ಲಿ ನಗರಸಭೆಯಿಂದ ಹೊರ ತಂದಿರುವ ಬಟ್ಟೆ ಚೀಲವನ್ನು ಶಾಸಕ ಹಾಲಪ್ಪ ಹರತಾಳು ಬಿಡುಗಡೆ ಮಾಡಿದರು.
ಇದನ್ನೂ ಓದಿ | Rishabh Pant | ಬೆಳಗಾಗುವ ಮೊದಲು ಮನೆ ತಲುಪಿ ಅಮ್ಮನಿಗೆ ಸರ್ಪ್ರೈಸ್ ಕೊಡಲು ಹೊರಟಿದ್ದರು ರಿಷಭ್