ಸಾಗರ: (Sagara News) ನದಿ, ಕೆರೆ ಕಟ್ಟೆಗಳನ್ನು ನಿರ್ಮಿಸಿ, ಶ್ರಮಿಕ ವರ್ಗದ ಆರಾಧ್ಯ ದೈವವಾಗಿ ಗುರುತಿಸಿಕೊಂಡಿರುವ ಶಿವಯೋಗಿ ಸಿದ್ಧರಾಮೇಶ್ವರರು ವಚನದ ಮೂಲಕ ನಾಡಿಗೆ ನೀಡಿದ ಸಂದೇಶ ಅನುಕರಣೀಯವಾದದ್ದು ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ತಾಲೂಕು ಆಡಳಿತದ ವತಿಯಿಂದ ಇಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಭಾನುವಾರ (ಜ.೧೫) ಆಯೋಜಿಸಲಾಗಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಯೋಗಿ ಸಿದ್ಧರಾಮೇಶ್ವರರು ಶ್ರಮ ಜೀವಿಗಳಿಗೆಲ್ಲ ಗುರುಗಳು. ಬಸವಣ್ಣನವರ ಸಮಕಾಲೀನರಾಗಿದ್ದ ಅವರು ಭಕ್ತಿ ಮಾರ್ಗದ ಮೂಲಕ ಕಾಯಕ ನಿಷ್ಠೆ ಪಾಲಿಸುವ ಸಂದೇಶ ನೀಡಿದ್ದಾರೆ. ಮನುಷ್ಯನಾಗಿ ಹುಟ್ಟಿ, ಶರಣರಾಗಿ ಬೆಳೆದು, ದೇವರಾಗಿ ಪೂಜಿಸಲ್ಪಡುತ್ತಿದ್ದಾರೆ. ಅವರ ಜಯಂತಿ ಆಚರಣೆ ಸಂದರ್ಭದಲ್ಲಿ ಅವರು ನೀಡಿದ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವತ್ತಾ ಗಮನ ಹರಿಸಬೇಕಾಗಿದೆ. ಶಿವಯೋಗಿ ಸಿದ್ಧರಾಮೇಶ್ವರರು ಸೇರಿದಂತೆ ಎಲ್ಲ ದಾರ್ಶನಿಕರನ್ನು ಜನಾಂಗವೊಂದಕ್ಕೆ ಸೀಮಿತಗೊಳಿಸದೆ ಅವರ ಆದರ್ಶವನ್ನು ಪ್ರತಿಯೊಬ್ಬರೂ ಅಳವಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ | Road Accident : ಬೈಕ್ ಸ್ಕಿಡ್ ಆಗಿ ಬಿಜೆಪಿ ಪ್ರಚಾರ ವಾಹನಕ್ಕೆ ಡಿಕ್ಕಿ; ಸವಾರ ಸಾವು
ಶಿವಯೋಗಿ ಸಿದ್ಧರಾಮೇಶ್ವರರ ಕುರಿತು ಉಪನ್ಯಾಸ ನೀಡಿದ ಇತಿಹಾಸ ತಜ್ಞ ಡಾ. ಕೆಳದಿ ವೆಂಕಟೇಶ್ ಜೋಯ್ಸ್, ಸಮಾಜದ ಉದ್ಧಾರಕ್ಕೆ ಶ್ರಮಿಸಿದ ಶಿವಯೋಗಿ ಸಿದ್ಧರಾಮೇಶ್ವರರು ಸಮ ಸಮಾಜ ನಿರ್ಮಾಣಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ವಚನ ಕ್ರಾಂತಿಯನ್ನು ನಾಡಿನಾದ್ಯಂತ ಪ್ರಸರಿಸುವ ಕೆಲಸವನ್ನು ಅಲ್ಲಮ ಪ್ರಭು ಮಾಡುತ್ತಾರೆ. ಆಗ ಅವರ ಈ ಕಾರ್ಯಕ್ಕೆ ಶಿವಯೋಗಿ ಸಿದ್ಧರಾಮೇಶ್ವರರು ಸಹಕಾರ ನೀಡುತ್ತಾ ಬಂದವರು. ಕಾಯಕ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುವ ಸಿದ್ಧರಾಮೇಶ್ವರರ ವಚನ ಸರ್ವಕಾಲೀಕ ಅನುಸರಿಸುವಂಥದ್ದು ಎಂದು ಹೇಳಿದರು.
ಇದನ್ನೂ ಓದಿ | Nirmala Sitharaman | 5 ಲಕ್ಷ ರೂ.ವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಇಲ್ಲ: ವಿತ್ತ ಸಚಿವೆ
ವೇದಿಕೆಯಲ್ಲಿ ಭೋವಿ ಸಮಾಜದ ಅಧ್ಯಕ್ಷ ವೆಂಕಟೇಶ್, ವೀರಶೈವ ನೊಳಂಬ ಸಮಾಜದ ಅಧ್ಯಕ್ಷ ಕಲ್ಲಪ್ಪ ಮೆಣಸಿನಾಳ್ ಉಪಸ್ಥಿತರಿದ್ದರು. ರಚನಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕ್ರಿಸ್ಟೋಫರ್ ಫರ್ನಾಂಡಿಸ್ ಸ್ವಾಗತಿಸಿದರು. ಮೋಹನ್ ವಂದಿಸಿ, ವಿ.ಟಿ.ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ | Varisu vs Thunivu | 5ನೇ ದಿನ ವಾರಿಸು, ತುನಿವು ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು? ರೇಸ್‌ನಲ್ಲಿ ಗೆದ್ದವರಾರು?