ಸಾಗರ: “ರೈತರ ಹತ್ತಿರ ದರ್ಪ ಮತ್ತು ದಬ್ಬಾಳಿಕೆಯಿಂದ ನಡೆದುಕೊಳ್ಳುವ ಡಿಸಿಸಿ ಬ್ಯಾಂಕ್ ಸ್ಥಳೀಯ ವ್ಯವಸ್ಥಾಪಕ ಚಂದ್ರಶೇಖರ್ ಅವರನ್ನು ತಕ್ಷಣ ಬೇರೆ ಕಡೆ ವರ್ಗಾವಣೆ ಮಾಡಬೇಕು” ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಮಂಜಪ್ಪ ಎಂ.ಬಿ. ಹಿರೇನೆಲ್ಲೂರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬುಧವಾರ (ಮಾ.29) ಮಾತನಾಡಿದ ಅವರು, “ರೈತರನ್ನು ಕೇವಲವಾಗಿ ನೋಡುತ್ತಿರುವ ವ್ಯವಸ್ಥಾಪಕ ಚಂದ್ರಶೇಖರ್ ಅವರನ್ನು ತಕ್ಷಣ ವರ್ಗಾವಣೆ ಮಾಡದೆ ಹೋದಲ್ಲಿ ರೈತ ಸಂಘದ ವತಿಯಿಂದ ಜಿಲ್ಲಾ ಡಿಸಿಸಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
“ಡಿಸಿಸಿ ಬ್ಯಾಂಕ್ ಹೆಸರಿಗೆ ಮಾತ್ರ ರೈತರ ಬ್ಯಾಂಕ್ ಆಗಿದೆ. ಆದರೆ ಇಲ್ಲಿನ ನಿಯಮಗಳು ರಾಷ್ಟ್ರೀಕೃತ ಬ್ಯಾಂಕ್‍ಗಳಿಗಿಂತ ಕಠಿಣವಾಗಿದೆ. ಮಾ. 27ರಂದು ನಾನು ಬ್ಯಾಂಕ್‍ಗೆ ಹೋಗಿ ವ್ಯವಸ್ಥಾಪಕ ಚಂದ್ರಶೇಖರ್ ಬಳಿ ಚೆಕ್ ಬುಕ್‍ಗೆ ಸಂಬಂಧಪಟ್ಟಂತೆ ಮಾಹಿತಿ ಕೇಳಿದ್ದೇನೆ. ಖಾತೆಯಲ್ಲಿ ಎರಡು ಸಾವಿರ ರೂ. ಇದ್ದರೆ ಮಾತ್ರ ಚೆಕ್ ಬುಕ್ ಕೊಡುವುದಾಗಿ ಹೇಳಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಒಂದು ಸಾವಿರ ರೂಪಾಯಿ ಇದ್ದು, ನಿಮ್ಮ ಬ್ಯಾಂಕ್‍ನಲ್ಲಿ ಎರಡು ಸಾವಿರ ಯಾಕೆ ಎಂದು ಪ್ರಶ್ನೆ ಮಾಡಿದ್ದಕ್ಕೆ ನಾನು ಹೇಳಿದಷ್ಟು ಕೇಳಿ, ಎಲ್ಲದಕ್ಕೂ ಉತ್ತರ ಕೊಡಲು ಆಗುವುದಿಲ್ಲ ಎಂದು ದಬ್ಬಾಳಿಕೆಯ ಉತ್ತರ ನೀಡಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ: Star Fashion: ‘ಜೆಂಡರ್ ಬಾರ್ಡರ್’ ಮುರಿದ ನಟ ಮಾಡೆಲ್ ವಿಜಯ್ ವರ್ಮಾ ಮೆಟಲ್ ಸೀರೆ ಕಹಾನಿ!
“ಇಂತಹ ವ್ಯವಸ್ಥಾಪಕರಿದ್ದರೆ ಬ್ಯಾಂಕ್‍ಗೆ ಕೆಟ್ಟ ಹೆಸರು ಬರುತ್ತದೆ. ಇಲ್ಲವೇ ರೈತರ ಜತೆ ಹೇಗೆ ವರ್ತನೆ ಮಾಡಬೇಕು ಎನ್ನುವ ಬಗ್ಗೆ ತಿಳಿವಳಿಕೆ ನೀಡಬೇಕು. ಇಲ್ಲವಾದಲ್ಲಿ ಡಿಸಿಸಿ ಬ್ಯಾಂಕ್ ಬಗ್ಗೆ ರೈತರು ಇರಿಸಿದ್ದ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ” ಎಂದರು. ಗೋಷ್ಠಿಯಲ್ಲಿ ಟಿ.ಕೆ.ರಮೇಶ್ ಐಗಿನಬೈಲು, ದೇವು ಆಲಳ್ಳಿ ಹಾಜರಿದ್ದರು.