ಸಾಗರ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ (journalists’ association) ಸದಸ್ಯರಾದ ಎಂ.ರಾಘವೇಂದ್ರ, ವಿ.ಶಂಕರ್ ಮತ್ತು ಇಮ್ರಾನ್ ಸಾಗರ್ ಅವರ ಮೇಲೆ ಸುಳ್ಳು ದೂರು ದಾಖಲು ಮಾಡಿರುವ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಸೋಮವಾರ (ಫೆ.೨೦) ಸಂಘದ ವತಿಯಿಂದ ಡಿವೈಎಸ್ಪಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
“ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಶಾಖೆಯ ಸಕ್ರಿಯ ಸದಸ್ಯರಾಗಿರುವ ಎಂ.ರಾಘವೇಂದ್ರ, ವಿ.ಶಂಕರ್ ಮತ್ತು ಇಮ್ರಾನ್ ಸಾಗರ್ ಅವರ ವಿರುದ್ಧ ಪೇಟೆ ಠಾಣೆಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ ಸುಳ್ಳು ದೂರು ದಾಖಲಿಸಿರುವುದನ್ನು ಸಂಘ ತೀವ್ರವಾಗಿ ಖಂಡಿಸುತ್ತದೆ. ನ್ಯಾಯಾಲಯದಲ್ಲಿ ಚೆಕ್‍ಬೌನ್ಸ್ ಕೇಸ್‍ಗೆ ಸಂಬಂಧಪಟ್ಟಂತೆ ಪತ್ರಕರ್ತರು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ರೂಪದಲ್ಲಿ ವಿಷಯ ಪ್ರಕಟಿಸಿದ್ದಾರೆಯೇ ವಿನಃ ಯಾರನ್ನೂ ವೈಯಕ್ತಿಕ ತೇಜೋವಧೆ ಮಾಡಿಲ್ಲ. ಆದರೆ, ಮಹಾಬಲೇಶ್ವರ ಕುಗ್ವೆ ಅವರು ತೀರ್ಪಿನಲ್ಲಿ ಆದೇಶಿಸಿದ ಮಾಹಿತಿಯನ್ನು ಮರೆಮಾಚಿ ಸುದ್ದಿ ಮಾಡಿದ ಪತ್ರಕರ್ತರ ವಿರುದ್ಧ ಸುಳ್ಳು ದೂರು ನೀಡಿದ್ದಾರೆ” ಎಂದು ಮನವಿಯಲ್ಲಿ ದೂರಲಾಗಿದೆ.
ಇದನ್ನೂ ಓದಿ: SK Bhagavan: ಬ್ರಾಹ್ಮಣ ವಿಧಿವಿಧಾನಗಳ ಅನುಸಾರ ನಿರ್ದೇಶಕ ಎಸ್.ಕೆ ಭಗವಾನ್ ಅಂತ್ಯಕ್ರಿಯೆ
“ನ್ಯಾಯಾಲಯದಲ್ಲಿ ನೀಡಿದ ತೀರ್ಪಿನ ಕುರಿತು ವರದಿ ಮಾಡುವುದು ಕಾನೂನಿನ ಪ್ರಕಾರ ತಪ್ಪಲ್ಲ. ಪೇಟೆ ಠಾಣೆ ಪೊಲೀಸರು ಪ್ರಕರಣದ ಸತ್ಯಾಸತ್ಯತೆಯನ್ನು ವಿಮರ್ಶೆ ಮಾಡದೆ ಸಂಘದ ಮೂವರು ಪತ್ರಕರ್ತರಿಗೆ ನೋಟಿಸ್ ನೀಡಿ ಸಮಜಾಯಿಷಿ ಕೇಳಿರುವುದು ಬೇಸರದ ಸಂಗತಿ. ಮಹಾಬಲೇಶ್ವರ ಕುಗ್ವೆ ನೀಡಿರುವ ದೂರನ್ನು ತಕ್ಷಣವೇ ಕೈಬಿಡಬೇಕು. ಸುಳ್ಳು ದೂರು ನೀಡಿರುವ ಮಹಾಬಲೇಶ್ವರ ಕುಗ್ವೆ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ: Sandalwood Star Fashion: ಬದಲಾದ ನ್ಯಾಚುರಲ್ ರಾ ಲುಕ್‌ನಲ್ಲಿ ಸ್ಯಾಂಡಲ್‌ವುಡ್ ನಟ ಅಭಿಮನ್ಯು ಕಾಶಿನಾಥ್
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಜಿ.ನಾಗೇಶ್, ಪ್ರಧಾನ ಕಾರ್ಯದರ್ಶಿ ಮಹೇಶ್ ಹೆಗಡೆ, ಉಪಾಧ್ಯಕ್ಷ ಲೋಕೇಶ ಕುಮಾರ್, ಖಜಾಂಚಿ ಎಂ.ಜಿ.ರಾಘವನ್, ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್, ಪ್ರಮುಖರಾದ ಎಂ.ರಾಘವೇಂದ್ರ, ವಿ.ಶಂಕರ್, ಇಮ್ರಾನ್ ಸಾಗರ್, ಗಿರೀಶ್ ರಾಯ್ಕರ್, ಉಮೇಶ್ ಮೊಗವೀರ, ಮಾ.ವೆಂ.ಸ.ಪ್ರಸಾದ್, ರಫೀಕ್ ಬ್ಯಾರಿ, ಜಮೀಲ್ ಸಾಗರ್ ಇನ್ನಿತರರು ಹಾಜರಿದ್ದರು.
ಇದನ್ನೂ ಓದಿ: NTR 30: ತಾರಕರತ್ನ ನಿಧನದಿಂದಾಗಿ ಎನ್‌ಟಿಆರ್ 30 ಸಿನಿಮಾದ ಈವೆಂಟ್ ಮುಂದೂಡಿಕೆ