ಸಾಗರ: “ಭತ್ತ ಖರೀದಿ ಹೆಸರಿನಲ್ಲಿ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ. ಸಣ್ಣಪುಟ್ಟ ಲೋಪವಿದ್ದರೂ ಭತ್ತವನ್ನು ಖರೀದಿ (paddy procurement) ಮಾಡದೆ ವಾಪಸ್ ಕಳಿಸುವ ಮೂಲಕ ರೈತರನ್ನು ಶೋಷಿಸುತ್ತಿದೆ” ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಬಿ. ಮಂಜಪ್ಪ ಹಿರೇನೆಲ್ಲೂರು ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ (ಮಾ.6) ಮಾತನಾಡಿದ ಅವರು, “ಭತ್ತದಲ್ಲಿ ಕಲ್ಲು, ಧೂಳು ಇದೆ ಎಂದು ಖರೀದಿ ಕೇಂದ್ರದಲ್ಲಿ ಭತ್ತ ನಿರಾಕರಿಸುತ್ತಿರುವುದರ ಜತೆಗೆ ಖಾಲಿ ಚೀಲಕ್ಕೆ ಹಣ ಮರುಪಾವತಿ ಮಾಡುವಲ್ಲಿಯೂ ರೈತರನ್ನು ಶೋಷಣೆ ಮಾಡಲಾಗುತ್ತಿದೆ” ಎಂದು ಹೇಳಿದರು.
“ರೈತರು ಭತ್ತವನ್ನು ಗದ್ದೆಯಲ್ಲಿ ಬೆಳೆಯುತ್ತಾರೆ. ಅಲ್ಪ ಸ್ವಲ್ಪ ಧೂಳು, ಕಲ್ಲು ಸಹಜವಾಗಿ ಬರುತ್ತದೆ. ಆದರೆ ಖರೀದಿ ಕೇಂದ್ರದಲ್ಲಿ ವಿಧಿಸಿರುವ ನಿಯಮಗಳು ಭತ್ತವನ್ನು ಮಾರಾಟ ಮಾಡಲು ಸಾಧ್ಯವೇ ಇಲ್ಲ ಎನ್ನುವಂತೆ ಆಗಿದೆ. ಖರೀದಿ ಕೇಂದ್ರದಲ್ಲಿ ವಿಶ್ಲೇಷಣಾ ಪಟ್ಟಿಯ ಎಫ್.ಎ.ಕ್ಯೂ. ಗುಣಮಟ್ಟದ ಪ್ರಕಾರ ಭತ್ತ ಖರೀದಿ ಮಾಡುತ್ತಿರುವುದರಿಂದ ರೈತರು ಮಾರಾಟಕ್ಕೆ ತಂದ ಭತ್ತವನ್ನು ವಾಪಸ್ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಪ್ರತಿದಿನ ಐದರಿಂದ ಹತ್ತು ರೈತರು ಖರೀದಿ ಕೇಂದ್ರದ ನಿಯಮಾವಳಿ ಪ್ರಕಾರ ಭತ್ತ ಮಾರಾಟ ಮಾಡಲು ಸಾಧ್ಯವಾಗದೆ ಖಾಸಗಿ ಮಾರಾಟಗಾರರನ್ನು ಅವಲಂಭಿಸುವ ಸ್ಥಿತಿ ಇದೆ” ಎಂದರು.
ಇದನ್ನೂ ಓದಿ: Holi 2023 : ಉತ್ತರ ಕರ್ನಾಟಕದಲ್ಲಿ ಹೋಳಿ ಸಂಭ್ರಮ ಜೋರು; ಬಗೆಬಗೆಯಲ್ಲಿ ಆಚರಣೆ
“ರೈತರಿಗೆ ಖಾಲಿ ಚೀಲದಲ್ಲಿ ಸಹ ವಂಚನೆ ಮಾಡಲಾಗುತ್ತಿದೆ. ರೈತರು ಒಂದು ಕ್ವಿಂಟಾಲ್‍ಗೆ ಎರಡು ಖಾಲಿ ಚೀಲ ಕೊಡಬೇಕಾಗಿದ್ದು, ಒಂದು ಚೀಲಕ್ಕೆ 42 ರೂಪಾಯಿಯಂತೆ 84 ರೂಪಾಯಿ ಕೊಟ್ಟು ರೈತರು ಚೀಲ ಖರೀದಿಸುತ್ತಿದ್ದಾರೆ. ಆದರೆ, ಖರೀದಿ ಕೇಂದ್ರದಲ್ಲಿ ರೈತರ ಒಂದು ಗೋಣಿ ಚೀಲಕ್ಕೆ ರೂ. 3 ದರ ನಿಗದಿ ಮಾಡಲಾಗಿದೆ. ರೈತರಿಗೆ ಅಲ್ಲಿಯೂ ವಂಚನೆ ಮಾಡಲಾಗುತ್ತಿದೆ. ಸರ್ಕಾರ ಮತ್ತು ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಖರೀದಿ ಕೇಂದ್ರದಲ್ಲಿನ ನಿಯಮಾವಳಿಗಳನ್ನು ಸರಳೀಕರಣಗೊಳಿಸಬೇಕು. ರಾಜ್ಯದ ಎರಡು ಮೂರು ಜಿಲ್ಲೆಗಳಲ್ಲಿ ಭತ್ತಕ್ಕೆ 500 ರೂ. ಸಹಾಯ ಧನ ನೀಡಲಾಗುತ್ತಿದ್ದು, ಅದನ್ನು ಶಿವಮೊಗ್ಗ ಜಿಲ್ಲೆಗೂ ವಿಸ್ತರಣೆ ಮಾಡಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: Abhishek Ambareesh: ಭಾವಿ ಪತ್ನಿ ಜನುಮದಿನದಂದು ರೊಮ್ಯಾಂಟಿಕ್ ಫೋಟೊಗಳನ್ನು ಹಂಚಿಕೊಂಡ ಅಭಿಷೇಕ್ ಅಂಬರೀಶ್
“ರಾಜ್ಯದ 224 ಜನ ಶಾಸಕರೂ ರೈತರ ಪರವಾಗಿ ಇಲ್ಲ. ಭತ್ತ ಖರೀದಿ ಕೇಂದ್ರದಲ್ಲಿ ರೈತರಿಗೆ ಇಷ್ಟೊಂದು ಶೋಷಣೆಯಾಗುತ್ತಿದ್ದರೂ ಶಾಸಕರು ಚಕಾರ ಎತ್ತಿಲ್ಲ. ಇಂತಹ ರೈತ ವಿರೋಧಿ ಶಾಸಕರನ್ನು ಮತದಾರರು ಮುಂದಿನ ಬಾರಿ ಆಯ್ಕೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು” ಎಂದು ಹೇಳಿದರು. ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಐಗಿನಬೈಲು, ಸಂಚಾಲಕ ಕಾನುಗೋಡು ದಿನೇಶ್, ಆಲಳ್ಳಿ ದೇವು ಹಾಜರಿದ್ದರು.
ಇದನ್ನೂ ಓದಿ: WPL 2023 : ಬಟರ್ ಚಿಕನ್ ಆಸೆಗೆ ಮ್ಯಾಚ್ ಗೆಲ್ಲಿಸಿದ್ದ ಗ್ರೇಸ್ ಹ್ಯಾರಿಸ್!