Site icon Vistara News

Sagara News: ಎಲ್.ಟಿ. ತಿಮ್ಮಪ್ಪ ಹೆಗಡೆ ಅವರದ್ದು ಅನುಕರಣೀಯ ವ್ಯಕ್ತಿತ್ವ: ಕಾಗೋಡು ತಿಮ್ಮಪ್ಪ

Thimmappa Hegde Tributes Former MLA

#image_title

ಸಾಗರ: ಅತ್ಯಂತ ಸರಳ ಮತ್ತು ಸಜ್ಜನಿಕೆಯಿಂದ ಜೀವನ ನಡೆಸಿದ ರಾಜಕಾರಣಿ ಎಲ್.ಟಿ. ತಿಮ್ಮಪ್ಪ ಹೆಗಡೆ ಅವರದ್ದಾಗಿತ್ತು. ಅಲ್ಲದೆ, ಅವರದ್ದು ಅನುಕರಣೀಯ ವ್ಯಕ್ತಿತ್ವ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಇಲ್ಲಿನ ನಗರಸಭೆ ರಂಗ ಮಂದಿರದಲ್ಲಿ ಮಂಗಳವಾರ (ಜ.೩೧) ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ, ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ, ದಿ. ತೋಟಗಾರ್ಸ್ ಕ್ರೆಡಿಟ್ ಸೊಸೈಟಿ ವತಿಯಿಂದ ಏರ್ಪಡಿಸಲಾಗಿದ್ದ ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಹಾಗೂ ಹಿರಿಯ ಸಹಕಾರಿ ಧುರೀಣ ಎಲ್.ಟಿ.ತಿಮ್ಮಪ್ಪ ಹೆಗಡೆ ಅವರ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇದನ್ನೂ ಓದಿ | IND VS NZ: ಟಾಸ್​ ಗೆದ್ದ ಭಾರತ; ಕಿವೀಸ್​ಗೆ ಬೌಲಿಂಗ್​ ಆಹ್ವಾನ

ಸಾರ್ವಜನಿಕ ಬದುಕಿನಲ್ಲಿ ಹೇಗಿರಬೇಕು ಎನ್ನುವುದನ್ನು ಎಲ್.ಟಿ.ತಿಮ್ಮಪ್ಪ ಹೆಗಡೆ ಬದುಕಿ ತೋರಿಸಿದ್ದಾರೆ. ಜನರ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಉಳಿಸಿಕೊಂಡು ಬಂದಿರುವ ಅವರ ಆದರ್ಶವನ್ನು ನಾವು ಪಾಲಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರುವಂತಾಗಬೇಕು ಎಂದು ಹೇಳಿದರು.

ಶಾಸಕ ಎಚ್. ಹರತಾಳು ಹಾಲಪ್ಪ ಮಾತನಾಡಿ, ನಾನು ಎಲ್.ಬಿ.ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಎಲ್.ಟಿ.ತಿಮ್ಮಪ್ಪ ಹೆಗಡೆ ಅವರು ಪ್ರತಿಷ್ಠಾನದ ಅಧ್ಯಕ್ಷರಾಗಿದ್ದರು. ಎಲ್.ಟಿ.ತಿಮ್ಮಪ್ಪ ಹೆಗಡೆ ಅವರದ್ದು ಪ್ರಭಾವಶಾಲಿ ವ್ಯಕ್ತಿತ್ವವಾಗಿದ್ದು, ನನ್ನನ್ನು ಸಹ ಆಕರ್ಷಿಸಿತ್ತು. ಗಣಪತಿ ಕೆರೆ ಅಭಿವೃದ್ಧಿ ಬಗ್ಗೆ ಅವರು ಶಾಸಕರಾಗಿದ್ದ ಸಂದರ್ಭದಲ್ಲಿಯೇ ಆಸಕ್ತಿ ವಹಿಸಿದ್ದರು. ಗಣಪತಿ ಕೆರೆ ಅಭಿವೃದ್ಧಿ ಹೊಂದಿದಾಗ ಬೋಟ್‍ನಲ್ಲಿ ನನ್ನ ಜತೆ ವಿಹಾರಕ್ಕೆ ಬಂದಾಗ ಅತ್ಯಂತ ಖುಷಿಪಟ್ಟಿದ್ದರು. ಶಾಸಕರಾದವರು ಬೆಂಗಳೂರಿನಲ್ಲಿಯೇ ವಾಸಿಸುವ ರಾಜಕಾರಣಿಗಳ ನಡುವೆ ಎಲ್.ಟಿ.ತಿಮ್ಮಪ್ಪ ಹೆಗಡೆ ಹಳ್ಳಿಯಲ್ಲೇ ಬದುಕು ಕಟ್ಟಿಕೊಂಡಿದ್ದು ಮಾದರಿಯಾಗಿದೆ ಎಂದು ತಿಳಿಸಿದರು.

ಕ್ರ್ಯಾಮ್ ಅಧ್ಯಕ್ಷ ಎಚ್.ಎಸ್.ಮಂಜಪ್ಪ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅವಿರತವಾಗಿ ತೊಡಗಿಸಿಕೊಂಡ ಹೆಗ್ಗಳಿಕೆ ಎಲ್.ಟಿ.ತಿಮ್ಮಪ್ಪ ಹೆಗಡೆ ಅವರಿಗೆ ಸೇರುತ್ತದೆ. ಎಲ್ಲ ಕ್ಷೇತ್ರಗಳಲ್ಲೂ ಅವರು ಬದ್ಧತೆಯಿಂದ ಕೆಲಸ ಮಾಡುತ್ತಿದ್ದರು. 70ರ ದಶಕದ ಪ್ರಾರಂಭದಿಂದ ಈತನಕ ಅಡಕೆ ಬೆಳೆಗಾರರ ಏಳಿಗೆಗಾಗಿ ಅವರು ತಮ್ಮ ಜೀವನವನ್ನು ಮುಡಿಪಾಗಿರಿಸಿದ್ದರು ಎಂದರು.

ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು. ಖಂಡಿಕಾ ಸೂರ್ಯನಾರಾಯಣ್, ವೈ.ಎನ್.ಸುಬ್ರಹ್ಮಣ್ಯ ಯಡಗೆರೆ, ಡಾ. ರಾಜನಂದಿನಿ ಕಾಗೋಡು, ಮಧುರಾ ಶಿವಾನಂದ್ ಇನ್ನಿತರರು ಮಾತನಾಡಿದರು.

ಇದನ್ನೂ ಓದಿ | Karnataka Election: ಸಿದ್ದರಾಮಯ್ಯ ಮುಂದಿನ ಸಿಎಂ ಆಗಲಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್

ಕಾರ್ಯಕ್ರಮದಲ್ಲಿ ಬಾಲಚಂದ್ರ ಭಟ್, ಕಿಶೋರ ಕುಮಾರ್ ಕೊಡ್ಗಿ, ಕೆ.ಸಿ.ದೇವಪ್ಪ, ಎಂ.ಹರನಾಥ ರಾವ್, ಟಿ.ಡಿ.ಮೇಘರಾಜ್, ಎಂ.ವಿ.ಮೋಹನ್, ಪ್ರಸನ್ನ ಕೆರೆಕೈ, ಪರಮೇಶ್ವರ ಅಡಗೋಡು, ಎಲ್.ಟಿ.ತಿಮ್ಮಪ್ಪ ಇನ್ನಿತರರು ಹಾಜರಿದ್ದರು. ದಿನೇಶ್ ಬರದವಳ್ಳಿ ಸ್ವಾಗತಿಸಿದರು. ಚೇತನರಾಜ್ ಕಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಂದ್ರ ವಂದಿಸಿದರು. ಹು.ಭಾ.ಅಶೋಕ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಿದುಷಿ ವಸುಧಾ ಶರ್ಮ ಎಲ್.ಟಿ.ತಿಮ್ಮಪ್ಪ ಹೆಗಡೆ ಕುರಿತು ರಚಿಸಿದ ಹಾಡನ್ನು ಹಾಡಿದರು.

Exit mobile version