Site icon Vistara News

Sagara News: ಎಂಎಸ್‍ಐಎಲ್ ಪರವಾನಗಿ ನೀಡದಿದ್ದರೂ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದ ಶಾಸಕ ಹಾಲಪ್ಪ

sagara MLA Haratalu Halappa

#image_title

ಸಾಗರ: ‘ನನ್ನ ಅವಧಿಯಲ್ಲಿ ಯಾವುದೇ ಎಂಎಸ್‍ಐಎಲ್ ಪರವಾನಗಿ ನೀಡಿಲ್ಲ. ಆದರೆ, ಪದೇಪದೆ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಯಾವ ಇಸವಿಯಲ್ಲಿ ಎಂಎಸ್‍ಐಎಲ್ ಮಳಿಗೆ ತೆರೆಯಲಾಗಿದೆ ಎನ್ನುವ ಮಾಹಿತಿ ಸ್ಪಷ್ಟವಾಗಿ ನೀಡಬೇಕು’ ಎಂದು ಶಾಸಕ ಎಚ್. ಹರತಾಳು ಹಾಲಪ್ಪ ಅವರು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ (ಜ.೩೧) ನಡೆದ ತಾಲೂಕು ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದರ್ಥದಲ್ಲಿ ಅಬಕಾರಿ ಇಲಾಖೆಯೇ ಎಂಎಸ್‍ಐಎಲ್‌ಗೆ ಶತ್ರು ಇದ್ದಂತೆ. ಎಂಎಸ್‍ಐಎಲ್‌ನಿಂದ ಯಾವುದೇ ರೀತಿಯ ಹಣ ಸಿಗುವುದಿಲ್ಲ ಎಂದು ಅಬಕಾರಿ ಅಧಿಕಾರಿಗಳು ಖಾಸಗಿ ಮದ್ಯದಂಗಡಿಗೆ ಬೆಂಬಲ ನೀಡುತ್ತಿದ್ದಾರೆ. ಇದರಿಂದ ಎಂಎಸ್‍ಐಎಲ್ ವಹಿವಾಟು ಕಡಿಮೆಯಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ | Thailand Open 2023: ಥಾಯ್ಲೆಂಡ್‌ ಓಪನ್​; ಹಿಂದೆ ಸರಿದ ಸಾತ್ವಿಕ್-ಚಿರಾಗ್ ಜೋಡಿ

ʻʻಹಾಲಪ್ಪ ಅನಧಿಕೃತವಾಗಿ ಎಂಎಸ್‍ಐಎಲ್ ಅಂಗಡಿ ಮಾಡಿದ್ದಾರೆ ಎಂದೂ ಅಪಪ್ರಚಾರ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಒಟ್ಟು ಆರು ಎಂಎಸ್‍ಐಎಲ್ ಮದ್ಯದಂಗಡಿ ಪ್ರಾರಂಭವಾಗಿದ್ದು, ಇದ್ಯಾವುದೂ ನನ್ನ ಶಾಸಕತ್ವದ ಅವಧಿಯಲ್ಲಿ ಪರವಾನಿಗೆ ಪಡೆದಿದ್ದಲ್ಲ. ಜಿಲ್ಲೆಯಲ್ಲಿ ಇರುವುದೇ 42 ಎಂಎಸ್‍ಐಎಲ್ ಮಳಿಗೆಯಾಗಿದ್ದು, ಕೆಲವರು ತಾಲೂಕಿನಲ್ಲಿಯೇ 59 ಎಂಎಸ್‍ಐಎಲ್ ಮದ್ಯದ ಮಳಿಗೆ ಇದೆ ಎಂದು ಸುಳ್ಳು ಹೇಳುತ್ತಿದ್ದಾರೆʼʼ ಎಂದರು.

ಇದನ್ನೂ ಓದಿ | LIC WhatsApp Services: ವಾಟ್ಸಾಪ್‌ನಲ್ಲೇ ನಿಮ್ಮ ಎಲ್ಐಸಿ ಪ್ರೀಮಿಯಂ ಮಾಹಿತಿ ತಿಳಿದುಕೊಳ್ಳಿ! ನೋಂದಣಿ ಹೇಗೆ?

ತಾಲೂಕಿನ ಚಿಕ್ಕಮತ್ತೂರು ಬಳಿ ಯಾರೋ ಏಳು ವಿದ್ಯುತ್ ಕಂಬಗಳನ್ನು ಮುರಿದಿದ್ದಾರೆ. ಮೆಸ್ಕಾಂ ಅವರ ವಿರುದ್ಧ ಏಕೆ ಈವರೆಗೆ ಕ್ರಮ ತೆಗೆದುಕೊಂಡಿಲ್ಲ ಎಂದು ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಕಂಬ ಮುರಿದು ಹಾಕಿದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದೆ ಹೋದರೆ ಅಧಿಕಾರಿ ವಿರುದ್ಧ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕೆಡಿಪಿ ಸದಸ್ಯರಾದ ಮಂಜಯ್ಯ ಜೈನ್, ಗೌತಮ್ ಕೆ.ಎಸ್., ದೇವೇಂದ್ರಪ್ಪ ಮಧ್ಯ ಪ್ರವೇಶ ಮಾಡಿ ಮಾತನಾಡುತ್ತಾ ಕಂಬ ಮುರಿದವರ ವಿರುದ್ಧ ಎಫ್.ಐ.ಆರ್. ದಾಖಲಿಸಿ ತಕ್ಷಣ ಬಂಧಿಸುವ ಜೊತೆಗೆ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿದರು.

ಇದನ್ನೂ ಓದಿ | IMF Report : ಭಾರತ 2023ರಲ್ಲಿ ಪ್ರಬಲ ಆರ್ಥಿಕತೆಯಾಗಲಿದೆ: ಐಎಂಎಫ್‌ ಭವಿಷ್ಯ

ತಾಲೂಕಿನಲ್ಲಿ ಮಂಗನ ಕಾಯಿಲೆಗೆ ಸಂಬಂಧಪಟ್ಟಂತೆ ಮುಂಜಾಗೃತಾ ಕ್ರಮ ವಹಿಸಬೇಕು. ತಾಲೂಕು ಪಂಚಾಯಿತಿ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಗ್ರಾಮಾಂತರ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಸೂಚನೆ ನೀಡಿದ ಶಾಸಕರು, ಗ್ರಾಮಾಂತರ ಪ್ರದೇಶಗಳ ರಸ್ತೆ ಪಕ್ಕದ ಮರಗಳಿಗೆ ಫ್ಲೆಕ್ಸ್ ಅಳವಡಿಸಲು ಮೊಳೆ ಹೊಡೆಯಲಾಗುತ್ತಿದೆ. ಇದರಿಂದ ಮರಗಳು ಸಾಯುವ ಸಾಧ್ಯತೆ ಇದ್ದು, ತಕ್ಷಣ ಅಂತಹವರ ವಿರುದ್ಧ ಕ್ರಮ ಜರುಗಿಸಲು ಸೂಚನೆ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಾ ಕಮ್ಮಾರ್, ಸಾಮಾಜಿಕ ಅರಣ್ಯದ ಸಹಾಯಕ ಅರಣ್ಯಾಧಿಕಾರಿ ಯೋಗೀಶ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ | Asaram Bapu: ಅತ್ಯಾಚಾರ ಪ್ರಕರಣದಲ್ಲಿ ಆಸಾರಾಮ್ ಬಾಪುಗೆ ಜೀವಾವಧಿ ಶಿಕ್ಷೆ, ಜತೆಗೆ 50 ಸಾವಿರ ರೂ. ದಂಡ

Exit mobile version