Site icon Vistara News

Sagara News: ವಸ್ತುನಿಷ್ಠ ವರದಿಗೆ ಶಾಸಕ ಹಾಲಪ್ಪ ಮತ್ತವರ ಬೆಂಬಲಿಗರಿಂದ ಪ್ರಶ್ನೆ; ಸಿಎಂಗೆ ಮನವಿ

Journalists Association sagara

#image_title

ಸಾಗರ: ಶಾಸಕ ಹಾಲಪ್ಪ ಹರತಾಳು ಮತ್ತವರ ಬೆಂಬಲಿಗರು ವಸ್ತುನಿಷ್ಠ ವರದಿ ಮಾಡುತ್ತಿರುವ ಪತ್ರಕರ್ತರನ್ನು ಪ್ರಶ್ನೆ ಮಾಡುತ್ತಿರುವುದು, ನಿಮ್ಮ ವಿರುದ್ಧ ಕಚೇರಿಗೆ ಪತ್ರ ಬರೆಯುತ್ತೇನೆ ಎಂದು ಹೆದರಿಸುತ್ತಿರುವ ನೀತಿಯನ್ನು ಖಂಡಿಸಿ ಶುಕ್ರವಾರ (ಮಾ.24) ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ (Journalists Association) ಸಾಗರ ಶಾಖೆ ವತಿಯಿಂದ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್, “ಪತ್ರಕರ್ತರು ವಸ್ತುನಿಷ್ಠವಾಗಿ ವರದಿ ಮಾಡುವುದೇ ತಪ್ಪು ಎನ್ನುವ ರೀತಿಯಲ್ಲಿ ಶಾಸಕ ಹರತಾಳು ಹಾಲಪ್ಪ ಅವರು ವರ್ತನೆ ಮಾಡುತ್ತಿದ್ದಾರೆ. ಚುನಾವಣೆಗೆ ಸಂಬಂಧಪಟ್ಟಂತೆ ಪರ ವಿರೋಧದ ಘಟನೆಗಳ ಬಗ್ಗೆ ವರದಿ ಮಾಡುವುದು ಪತ್ರಕರ್ತರ ಆದ್ಯ ಕರ್ತವ್ಯ. ತಮ್ಮ ವಿರುದ್ಧ ಸುದ್ದಿ ಮಾಡುತ್ತಿದ್ದಾರೆ ಎಂದು ಪತ್ರಕರ್ತರನ್ನು ಪ್ರಶ್ನೆ ಮಾಡಿ ಅವರಿಗೆ ಬೆದರಿಕೆ ಹಾಕುವುದು ಖಂಡನೀಯ. ಎಲ್ಲ ರಾಜಕೀಯ ಪಕ್ಷಗಳು ಪತ್ರಕರ್ತರ ಬಗ್ಗೆ ಗೌರವಾಧರಗಳಿಂದ ನಡೆದುಕೊಳ್ಳಬೇಕು. ಶಾಸಕರು ತಮ್ಮ ಬೆಂಬಲಿಗರಿಗೆ ಎಚ್ಚರಿಕೆ ನೀಡಬೇಕು. ಪತ್ರಕರ್ತರು ವರದಿ ಮಾಡಿದಾಗ ಫೋನಾಯಿಸಿ ಅವರನ್ನು ಪ್ರಶ್ನಿಸುವುದು, ಬೆದರಿಕೆ ಹಾಕುವುದನ್ನು ಕೈಬಿಡದೆ ಹೋದಲ್ಲಿ ಸಂಘ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Allu Arjun: ಗೋಲ್ಡನ್‌ ಹೇರ್‌ನಲ್ಲಿ ʻಸ್ಟೈಲಿಶ್ ಸ್ಟಾರ್‌ʼ; ಅಲ್ಲು ಹೊಸ ಲುಕ್‌ಗೆ ಫ್ಯಾನ್ಸ್‌ ಫಿದಾ

ಸಂಘದ ಕಾರ್ಯದರ್ಶಿ ಮಹೇಶ್ ಹೆಗಡೆ ಮಾತನಾಡಿ, “ವರದಾಮೂಲದಲ್ಲಿ ಶಾಸಕರಿಂದ ನೋವು ಅನುಭವಿಸಿದವರು ನಡೆಸುತ್ತಿದ್ದ ಸಭೆಯ ವರದಿಯನ್ನು ಎಲ್ಲ ಪತ್ರಿಕೆಗಳು ಪ್ರಕಟಿಸಿವೆ. ಆದರೆ, ಶಾಸಕರು ನನ್ನನ್ನು ಕಾರ್ಯಕ್ರಮವೊಂದರಲ್ಲಿ ತಡೆದು ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು. ನೀವು ಬಿಜೆಪಿ ಕಾರ್ಯಕರ್ತರು ಇದ್ದರು ಎಂದು ವರದಿ ಮಾಡಿದ್ದೀರಿ. ನೀವು ತಪ್ಪು ವರದಿ ಮಾಡಿದ್ದೀರೆಂದು ನಿಮ್ಮ ಕಚೇರಿಗೆ ಪತ್ರ ಬರೆದರೆ ನಿಮ್ಮ ಪರಿಸ್ಥಿತಿ ಏನಾಗುತ್ತದೆ ಗೊತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರ ಎದುರು ಶಾಸಕರು ನನ್ನನ್ನು ಈ ರೀತಿ ಪ್ರಶ್ನೆ ಮಾಡಿದ್ದು ನನಗೆ ತೀರ ಅವಮಾನವಾಗಿದೆ. ಹಾಲಪ್ಪ ಶಾಸಕರಾದ ಮೇಲೆ ಮೂರು ಬಾರಿ ನನ್ನ ವಿರುದ್ಧ ಪತ್ರಿಕೆಗೆ ಪತ್ರ ಬರೆದು ದೂರು ನೀಡಿದ್ದಾರೆ” ಎಂದು ಹೇಳಿದರು.

ಇದನ್ನೂ ಓದಿ: Karnataka Election 2023: ಕೆ.ಆರ್‌.ಪೇಟೆಯಲ್ಲಿ ಜೆಡಿಎಸ್‌ಗೆ ಬಿಗ್‌ ಶಾಕ್‌; ಪಕ್ಷ ತೊರೆದ ದೇವರಾಜ್‌, ಕೃಷ್ಣೇಗೌಡ

ಸಂಘದ ಅಧ್ಯಕ್ಷ ಜಿ.ನಾಗೇಶ್ ಮಾತನಾಡಿ, “ಪ್ರಸ್ತುತ ದಿನಮಾನಗಳಲ್ಲಿ ವಸ್ತುನಿಷ್ಠ ವರದಿ ಮಾಡುವುದೇ ತಪ್ಪು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಬೆದರಿಕೆ ಮೂಲಕ ಪತ್ರಕರ್ತರನ್ನು ಮಣಿಸಲು ಸಾಧ್ಯವಿಲ್ಲ. ವಸ್ತುಸ್ಥಿತಿ ಬರೆಯುವುದು ಪತ್ರಕರ್ತರ ಕರ್ತವ್ಯ. ಒಂದೊಮ್ಮೆ ನಮ್ಮ ವರದಿಯಿಂದ ನಿಮ್ಮ ಮಾನಹಾನಿಯಾಗಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಿ. ಅನಗತ್ಯವಾಗಿ ಪತ್ರಕರ್ತರನ್ನು ಬೆದರಿಸುವುದು, ಬರವಣಿಗೆ ಸ್ವಾತಂತ್ರ್ಯ ಕಿತ್ತುಕೊಳ್ಳುವ ಪ್ರಯತ್ನವನ್ನು ಶಾಸಕರೂ ಸೇರಿದಂತೆ ಯಾರೇ ಮಾಡಿದರೂ ಸಂಘಟನೆ ತನ್ನದೇ ಚೌಕಟ್ಟಿನಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ” ಎಂದರು.

ಇದನ್ನೂ ಓದಿ: Police Constable: ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಗೆ ಬೆಂಗಳೂರು ಪೊಲೀಸ್ ಕಾನ್ಸ್‌ಟೇಬಲ್ ಎಚ್‌.ಎಂ. ಲೋಕೇಶ್ ಆಯ್ಕೆ

ಸಂಘದ ಲೋಕೇಶ ಕುಮಾರ್, ರವಿ ನಾಯ್ಡು, ಎಂ.ಜಿ.ರಾಘವನ್, ಇಮ್ರಾನ್ ಸಾಗರ್, ಗಿರೀಶ್ ರಾಯ್ಕರ್, ಅಖಿಲೇಶ್ ಚಿಪ್ಳಿ, ನಾಗರಾಜ್, ವೆಂಕಟೇಶ್ ಸಂಪ, ಎಲ್.ಜಿ.ನಾಗರಾಜ್, ಶಿವಕುಮಾರ್ ಗೌಡ, ಬಿ.ಡಿ.ರವಿಕುಮಾರ್ ಚಂದ್ರಶೇಖರ್, ಉಮೇಶ್ ಮೊಗವೀರ, ವಿ.ಶಂಕರ್, ಮಾ.ವೆಂ.ಸ.ಪ್ರಸಾದ್, ರಫೀಕ್ ಬ್ಯಾರಿ ಇನ್ನಿತರರು ಹಾಜರಿದ್ದರು.

ಇದನ್ನೂ ಓದಿ: ಕೆನಡಾದಲ್ಲಿ ಖಲಿಸ್ತಾನಿಗಳ ದುಷ್ಕೃತ್ಯ; ಮಹಾತ್ಮ ಗಾಂಧಿ ಪ್ರತಿಮೆ ವಿರೂಪ, ಭಾರತ ವಿರೋಧಿ ಗೀಚುಬರಹ

Exit mobile version