Site icon Vistara News

Sagara News: 93 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್

Madhura Shivanand Municipal Corporation president sagara

#image_title

ಸಾಗರ: ಇಲ್ಲಿನ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಮಧುರಾ ಶಿವಾನಂದ್ ಅವರು 93 ಲಕ್ಷ ರೂ. ಉಳಿತಾಯ ಬಜೆಟ್ (savings budget) ಅನ್ನು ಗುರುವಾರ (ಫೆ.೨೩) ಮಂಡಿಸಿದ್ದಾರೆ.

2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಒಟ್ಟು 43.37 ಕೋಟಿ ರೂ. ಗಾತ್ರದ ಆಯವ್ಯಯ ಮಂಡಿಸುವ ಜೊತೆಗೆ ವೆಚ್ಚದ ಬಾಬ್ತಿನಲ್ಲಿ 42.44 ಕೋಟಿ ರೂ. ಘೋಷಣೆ ಮಾಡಿದ್ದಾರೆ.

“ಬಜೆಟ್‍ನಲ್ಲಿ ಪ್ರಮುಖವಾಗಿ ನಗರಸಭೆ ಸ್ವಂತ ಮೂಲದಿಂದ 9.44 ಕೋಟಿ ರೂ., ರಾಜಸ್ವ ಅನುದಾನ 10.18 ಕೋಟಿ ರೂ., ವಿಶೇಷ ಅನುದಾನ 12.37 ಕೋಟಿ ರೂ. ಆಗಿದ್ದು, ವೆಚ್ಚದ ವಿಭಾಗದಲ್ಲಿ 19.44 ಕೋಟಿ ರೂ. ರಾಜಸ್ವ ಪಾವತಿ, 23 ಕೋಟಿ ರೂ. ಬಂಡವಾಳ ಪಾವತಿ ಯಾದಿಯಲ್ಲಿ ಸೇರಿದೆ ಎಂದು ತಿಳಿಸಿದ ಅವರು, ಆಸ್ತಿ ತೆರಿಗೆಯಿಂದ 4 ಕೋಟಿ, ನೀರಿನ ತೆರಿಗೆಯಿಂದ 1 ಕೋಟಿ, ಘನ ತ್ಯಾಜ್ಯ ನಿರ್ವಹಣಾ ಶುಲ್ಕ 65 ಲಕ್ಷ ರೂ. ವಾಣಿಜ್ಯ ಮಳಿಗೆ ಬಾಡಿಗೆ 55 ಲಕ್ಷ ರೂ., ಅಭಿವೃದ್ಧಿ ಶುಲ್ಕ 23.50 ಲಕ್ಷ ರೂ., ಉದ್ದಿಮೆ ಪರವಾನಿಗೆ 15 ಲಕ್ಷ ರೂ. ಸಂಗ್ರಹಿಸುವ ನಿರೀಕ್ಷೆ ಹೊಂದಲಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: Kiara Sidharth Wedding : ಮದುವೆಯ ಸಂಗೀತ ಕಾರ್ಯಕ್ರಮಕ್ಕೆ ಕಿಯಾರಾ ತೊಟ್ಟಿದ್ದ ಲೆಹೆಂಗಾದ ವಿಶೇಷತೆ ಏನು ಗೊತ್ತಾ?

“ರಾಜ್ಯ ಸರ್ಕಾರದಿಂದ ನೌಕರರ ವೇತನ ಅನುದಾನ 450 ಲಕ್ಷ ರೂ., ಬೀದಿ ದೀಪ, ನೀರು ಸರಬರಾಜು ವಿದ್ಯುತ್ ನಿರ್ವಹಣೆ ಅನುದಾನ 467 ಲಕ್ಷ ರೂ., ಎಸ್.ಎಫ್.ಸಿ. ಯೋಜನೆಯಡಿ 65 ಲಕ್ಷ ರೂ. ಸೇರಿದಂತೆ ವಿವಿಧ ಬಾಬ್ತಿನಲ್ಲಿ 1018 ಲಕ್ಷ ರೂ. ರಾಜಸ್ವ ಅನುದಾನ ನಿರೀಕ್ಷೆ ಮಾಡಲಾಗಿದೆ. 15ನೇ ಹಣಕಾಸು ಯೋಜನೆಯಡಿ ಕೇಂದ್ರ ಸರ್ಕಾರದಿಂದ 216 ಲಕ್ಷ ರೂ., ರಾಜ್ಯ ಸರ್ಕಾರದಿಂದ 800 ಲಕ್ಷ ರೂ., ಸ್ವಚ್ಛ ಭಾರತ್ ಯೋಜನೆಯಡಿ 212 ಲಕ್ಷ ರೂ. ನಿರೀಕ್ಷೆ ಮಾಡಲಾಗಿದೆ” ಎಂದರು.

“ಬಜೆಟ್‍ನಲ್ಲಿ ಪ್ರಮುಖವಾಗಿ ನೌಕರರಿಗೆ ವಸತಿ ಗೃಹ, ರಿಪೇರಿಗಾಗಿ 50 ಲಕ್ಷ ರೂ., ಖಾಸಗಿ ಆಸ್ಪತ್ರೆ ಸಹಯೋಗದೊಂದಿಗೆ ಆರೋಗ್ಯ ಮೇಳಕ್ಕಾಗಿ 5 ಲಕ್ಷ ರೂ., ಬೀದಿ ದೀಪ, ನೀರು ಸರಬರಾಜು ವಿದ್ಯುತ್ ನಿರ್ವಹಣೆಗೆ 467 ಲಕ್ಷ ರೂ., ಶೇ. 24.10 ಯೋಜನೆಯಡಿ ಪರಿಶಿಷ್ಟ ಜಾತಿ ಪಂಗಡದ ಸಮಗ್ರ ಅಭಿವೃದ್ಧಿಗೆ 57 ಲಕ್ಷ ರೂ., ಪೌರ ಕಾರ್ಮಿಕರ ಬೆಳಗಿನ ಉಪಾಹಾರ, ಸುರಕ್ಷಾ ಸಲಕರಣೆಗೆ 30 ಲಕ್ಷ ರೂ., ನೀರು ಸರಬರಾಜು ವಿಭಾಗದ ನಿರ್ವಹಣೆಗೆ 59.50 ಲಕ್ಷ ರೂ., ರಸ್ತೆ, ಚರಂಡಿ ಅಭಿವೃದ್ಧಿಗೆ 75 ಲಕ್ಷ ರೂ., ಉದ್ಯಾನವನ ನಿರ್ವಹಣೆಗೆ 15 ಲಕ್ಷ ರೂ. ಮೀಸಲಿರಿಸಲಾಗಿದೆ. ನಗರದ ಆಟದ ಮೈದಾನ ಅಭಿವೃದ್ಧಿಗೆ 25 ಲಕ್ಷ ರೂ., ಸೋಲಾರ್ ವಿದ್ಯುದ್ದೀಪ ಅಳವಡಿಕೆಗೆ 60 ಲಕ್ಷ ರೂ., ಸಾರ್ವಜನಿಕ ಶೌಚಾಲಯ ನಿರ್ಮಿಸಲು 30 ಲಕ್ಷ ರೂ., ಗೋಪಾಲ ಗೌಡ ಕ್ರೀಡಾಂಗಣ ಅಭಿವೃದ್ಧಿಗೆ 50 ಲಕ್ಷ ರೂ. ಮೀಸಲಿರಿಸುವುದಾಗಿ ತಿಳಿಸಿದ ಅವರು, ನಗರದ ಸಮಗ್ರ ಅಭಿವೃದ್ಧಿಯ ಹಿನ್ನೆಲೆಯಲ್ಲಿ 93 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದ್ದಾಗಿ” ಹೇಳಿದರು.

ಇದನ್ನೂ ಓದಿ: Mrs Chatterjee Vs Norway: ರಾಣಿ ಮುಖರ್ಜಿ ಅಭಿನಯದ ಮಿಸೆಸ್‌ ಚಟರ್ಜಿ Vs ನಾರ್ವೆ ಟ್ರೈಲರ್‌ ಔಟ್‌!

ಪುಸ್ತಕದ ಬದನೆಕಾಯಿ

ವಿಪಕ್ಷ ನಾಯಕ ಗಣಪತಿ ಮಂಡಗಳಲೆ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿ, “ಹಾಲಿ ಬಜೆಟ್ ಪುಸ್ತಕದ ಬದನೆಕಾಯಿಯಾಗಿದ್ದು ಉಪಯೋಗಕ್ಕೆ ಬರುವಂತಹದ್ದಲ್ಲ. ಹಿಂದಿನ ಸಾಲಿನಲ್ಲಿ ಮಂಡಿಸಿದ ಬಜೆಟ್‍ನ ಬಹುತೇಕ ಅಂಶ ಅನುಷ್ಠಾನಕ್ಕೆ ತಂದಿಲ್ಲ” ಎಂದು ಹೇಳಿದರು.

ಸರ್ವಸ್ಪರ್ಶಿ ಬಜೆಟ್

ಬಿಜೆಪಿ ಸದಸ್ಯ ಗಣೇಶ್ ಪ್ರಸಾದ್ ಬಜೆಟ್ ಕುರಿತು ಮಾತನಾಡುತ್ತಾ, “2023-24ನೇ ಸಾಲಿನ ಬಜೆಟ್ ಸರ್ವವ್ಯಾಪಿ ಸರ್ವಸ್ಪರ್ಶಿ ಸಾರ್ವಜನಿಕ ಬಜೆಟ್ ಆಗಿದೆ. ಬಜೆಟ್‍ನಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ 20 ಸಾವಿರ ರೂಪಾಯಿ ಪ್ರೋತ್ಸಾಹ ಧನ ಘೋಷಣೆ ಮಾಡಬೇಕು” ಎಂದು ಒತ್ತಾಯಿಸಿದರು.

ಇದನ್ನೂ ಓದಿ: BJP Karnataka: ಇಂದ್ರಮ್ಮಾ ಅಂತ ಭಾವುಕರಾಗಿ ಓಟ್‌ ಹಾಕಬೇಡಿ: ಸಮಾವೇಶದಲ್ಲಿ ಸಚಿವ ಅನಂದ ಸಿಂಗ್‌ ಕರೆ

ನಿರೀಕ್ಷೆ ಹುಸಿಯಾಗಿದೆ

ಕಾಂಗ್ರೆಸ್‌ ಸದಸ್ಯೆ ಎನ್.ಲಲಿತಮ್ಮ ಮಾತನಾಡಿ, “ಅಧ್ಯಕ್ಷೆ ಮಧುರಾ ಶಿವಾನಂದ್ ಅವರು ಉತ್ತಮ ಬಜೆಟ್ ನೀಡುತ್ತಾರೆ ಎಂದು ಜನರು ನಿರೀಕ್ಷೆ ಮಾಡಿದ್ದು ಹುಸಿಯಾಗಿದೆ. ಇದು ಅಂಕಿಅಂಶಗಳ ಬಜೆಟ್ ವಿನಃ ಕಾರ್ಯಗತವಾಗುವ ಬಜೆಟ್ ಅಲ್ಲ. ಹಿಂದಿನ ಬಾರಿ ಮಂಡಿಸಿದ ಬಜೆಟ್ ಅಂಶವನ್ನೇ ನೀವು ಜಾರಿಗೆ ತಂದಿಲ್ಲ. ಬಜೆಟ್‍ನಲ್ಲಿ ಮೂಲಭೂತ ಸೌಲಭ್ಯಕ್ಕೆ ಆದ್ಯತೆ ನೀಡಿಲ್ಲ” ಎಂದು ದೂರಿದರು.

ಹಿಂದಿನ ಬಾರಿ ಘೋಷಣೆ ಮಾಡಿದ್ದು ಏನಾಯ್ತು?

ಸದಸ್ಯ ತಸ್ರೀಫ್ ಇಬ್ರಾಹಿಂ ಮಾತನಾಡಿ, “ಕಳೆದ ಸಾಲಿನಲ್ಲಿ ಅಭಿವೃದ್ಧಿಗಾಗಿ 23 ಕೋಟಿ ರೂ. ಬಜೆಟ್‍ನಲ್ಲಿ ಮೀಸಲು ಇಡಲಾಗಿತ್ತು. ಈ ಪೈಕಿ ಕೇವಲ 7 ಕೋಟಿ ರೂ. ಖರ್ಚು ಮಾಡಲಾಗಿದೆ. ನಗರದ ಜನರನ್ನು ದಿಕ್ಕುತಪ್ಪಿಸುವ ಪ್ರಯತ್ನ ಮಾಡಬಾರದು. ಹಿಂದಿನ ಅವಧಿಯಲ್ಲಿ ಮೀಸಲಿಟ್ಟ ಹಣ ಏಕೆ ಖರ್ಚು ಮಾಡಿಲ್ಲ ಎನ್ನುವುದನ್ನು ಜನರಿಗೆ ತಿಳಿಸಿ” ಎಂದು ಒತ್ತಾಯಿಸಿದರು.

ಕಾರ್ಮಿಕ ಪರವಾದ ಬಜೆಟ್

ಬಿಜೆಪಿ ಸದಸ್ಯ ಆರ್.ಶ್ರೀನಿವಾಸ್ ಮೇಸ್ತ್ರಿ ಮಾತನಾಡಿ, “ಬಜೆಟ್‍ನಲ್ಲಿ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ಮೂಲಕ ಅಧ್ಯಕ್ಷರು ಕಾರ್ಮಿಕ ಪರ ನಿಲುವನ್ನು ವ್ಯಕ್ತಪಡಿಸಿದ್ದಕ್ಕೆ ಕಾರ್ಮಿಕರ ಪರವಾಗಿ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಮುಖ್ಯವಾಗಿ ಕಟ್ಟಡ ಕಾರ್ಮಿಕರು ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಬಿದ್ದು ಅವಘಡ ಉಂಟಾದರೆ ಅವರಿಗೆ ಪರಿಹಾರ ನೀಡಲು 30 ಲಕ್ಷ ರೂ. ಮೀಸಲಿರಿಸಿರುವುದು ಅಭಿನಂದಾರ್ಹ ಸಂಗತಿ” ಎಂದರು.
ಪೌರಾಯುಕ್ತ ಎಚ್.ಕೆ.ನಾಗಪ್ಪ, ನಗರಸಭೆ ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ: Indian Olympic Association: ಹಾಲಿ ಮತ್ತು ಮಾಜಿ ಕ್ರೀಡಾಪಟುಗಳಿಗೆ ವೈದ್ಯಕೀಯ ವಿಮೆ ಒದಗಿಸಲು ಮುಂದಾದ ಐಒಎ

Exit mobile version