Site icon Vistara News

Sagara News: ಅಳಿಯ ಗೋಪಾಲಕೃಷ್ಣ ಬೇಳೂರು ಪರವಾಗಿ ಕ್ಷೇತ್ರಾದ್ಯಂತ ಪ್ರಚಾರ ನಡೆಸಿ ಗೆಲ್ಲಿಸುವುದೇ ನನ್ನ ಗುರಿ: ಕಾಗೋಡು ತಿಮ್ಮಪ್ಪ‌

Kagodu Thimmappa sagara Gopalakrishna Belur

#image_title

ಸಾಗರ: “ಅಳಿಯ ಗೋಪಾಲಕೃಷ್ಣ ಬೇಳೂರು ಪರವಾಗಿ ಕ್ಷೇತ್ರದಾದ್ಯಂತ ಪ್ರಚಾರ ನಡೆಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದೇ ನನ್ನ ಮುಂದಿರುವ ಗುರಿ” ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

ಇಲ್ಲಿನ ಜೋಸೆಫ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು‌ ಅವರನ್ನು ಬುಧವಾರ (ಮಾ.29) ಭೇಟಿ ಮಾಡಿದ ನಂತರ ಪತ್ರಕರ್ತರ ಜತೆ ಮಾತನಾಡಿದ ಅವರು, ಪಕ್ಷದ ವಿರುದ್ಧ ಬಂಡಾಯ ಎದ್ದಿರುವವರ ಕಾಲು ಹಿಡಿದು ಪಕ್ಷದ ಪರವಾಗಿ ಕೆಲಸ ಮಾಡುವಂತೆ ಮನವಿ ಮಾಡಲಾಗುತ್ತದೆ” ಎಂದು ಹೇಳಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ. ಗಣಪತಿ ಕೆರೆ ಒಂದು ದಂಡೆ ಮಾತ್ರ ಅಭಿವೃದ್ಧಿಯಾಗಿದ್ದು, ಅದನ್ನೇ ಪರಿಪೂರ್ಣ ಅಭಿವೃದ್ಧಿ ಎಂದು ಶಾಸಕ ಹಾಲಪ್ಪ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬೇಳೂರು ಅವರು ಪಕ್ಷದಿಂದ ಟಿಕೆಟ್ ಪಡೆದು ಬಂದಿದ್ದು ಸಂತೋಷ ತಂದಿದೆ. ಜನರಲ್ಲಿ, ಕಾರ್ಯಕರ್ತರಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎನ್ನುವ ಉತ್ಸಾಹ ಇದೆ. ಕಾಂಗ್ರೆಸ್ ಪಕ್ಷ ನನ್ನ ಮಾತೃ ಪಕ್ಷ ಜತೆಗೆ ನನ್ನ ಅಳಿಯನೇ ಅಭ್ಯರ್ಥಿ ಆಗಿರುವುದರಿಂದ ಶತಾಯಗತಾಯ ಗೆಲ್ಲಿಸಲು ಪ್ರಯತ್ನಿಸುತ್ತೇನೆ” ಎಂದು ಹೇಳಿದರು.

ಇದನ್ನೂ ಓದಿ: Wayanad Bypolls: ರಾಹುಲ್‌ ಅನರ್ಹತೆಯಿಂದ ತೆರವಾದ ವಯನಾಡು ಕ್ಷೇತ್ರಕ್ಕೆ ಉಪ ಚುನಾವಣೆ ಇಲ್ಲ, ಆಯೋಗ ಹೇಳಿದ್ದೇನು?

ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಮಾತನಾಡಿ, “ಕಾಂಗ್ರೆಸ್ ಭೀಷ್ಮ ಇಲ್ಲಿರುವಾಗ ಗೆಲುವು ಸುಲಭ. ಪಕ್ಷದಲ್ಲಿ ಟಿ‌ಕೆಟ್‍ಗೆ ಸಂಬಂಧಪಟ್ಟ ಸಣ್ಣಪುಟ್ಟ ಗೊಂದಲ ಇದ್ದು, ಅದನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ. ಕ್ಷೇತ್ರ ವ್ಯಾಪ್ತಿಯಲ್ಲಿ ಕಾಗೋಡು ಮತ್ತು ನಾನು ತಂದ ಕಾಮಗಾರಿಗಳನ್ನು ತಾವೇ ತಂದಿದ್ದು ಎಂದು ಶಾಸಕರು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಕುಡಿಯುವ ನೀರು, ಮಿನಿ ವಿಧಾನಸೌಧ ಕಾಗೋಡು ಮತ್ತು ನನ್ನ ಅವಧಿಯಲ್ಲಿ ತಂದಿದ್ದು, 70 ಕೋಟಿ ರೂ. ಶರಾವತಿ ನೀರು ಸಾಗರಕ್ಕೆ ತರುವ ಯೋಜನೆ ಜಾರಿಗೆ ತರಲಾಗಿತ್ತು. ಈತನಕ ಗ್ರಾಮೀಣ ಭಾಗಕ್ಕೆ ನೀರು ಕೊಡಲು ಇವರ ಕೈಯಲ್ಲಿ ಸಾಧ್ಯವಾಗಿಲ್ಲ” ಎಂದು ದೂರಿದರು.

“ಜನರಿಗೆ ಒಂದು ನಿವೇಶನವನ್ನು ಹಾಲಿ ಶಾಸಕರು ಕೊಟ್ಟಿಲ್ಲ. ರಸ್ತೆ ಮಾಡಿದ್ದೇವೆ ಎಂದು ಪ್ರಚಾರ ಪಡೆಯುತ್ತಿದ್ದು, ಕೇವಲ 100 ರಿಂದ 300 ಮೀ. ರಸ್ತೆ ಮಾಡಿದ್ದೇ ಸಾಧನೆಯಲ್ಲ. ಸಾಗರವನ್ನು ಗೋವಾ ಮಾಡುವ ಕೆಲಸದಲ್ಲಿ ಶಾಸಕರು ನಿರತರಾಗಿದ್ದು, ಗಣಪತಿ ಕೆರೆಯನ್ನು ಈಜುಕೊಳ ಮಾಡಿ ಅದಕ್ಕೊಂದು ಕ್ರೂಸರ್ ಬಿಟ್ಟರೆ ಪ್ರವಾಸಿಗರು ಗೋವಾಕ್ಕೆ ಹೋಗುವುದು ಬೇಡ ಎಂದು ವ್ಯಂಗ್ಯವಾಗಿ ನುಡಿದ ಬೇಳೂರು, ಹಾಲಪ್ಪ ಅವಧಿಯಲ್ಲಿ ಯಾವ ಪ್ರವಾಸಿ ಕ್ಷೇತ್ರವೂ ಅಭಿವೃದ್ಧಿಯಾಗಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: Vitamin C Benefits: ವಿಟಮಿನ್‌ ಸಿ ನಮಗೇಕೆ ಬೇಕು? ಇಲ್ಲಿವೆ ಕಾರಣಗಳು

ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರಾದ ಬಿ.ಎ.ಇಂದೂಧರ ಗೌಡ, ತಾರಾಮೂರ್ತಿ, ಡಿ.ದಿನೇಶ್, ಅಶೋಕ ಬೇಳೂರು, ಮಹಾರಾಜ ಕೆಳದಿ, ಗಣಪತಿ ಮಂಡಗಳಲೆ, ಮೈಕೆಲ್ ಡಿಸೋಜ ಇನ್ನಿತರರು ಹಾಜರಿದ್ದರು.

Exit mobile version