ಸಾಗರ: ಹೊಸನಗರ ತಾಲೂಕಿನಲ್ಲಿ ಕೆಎಫ್‌ಡಿ (ಮಂಗನ ಕಾಯಿಲೆ) ಸೋಂಕಿನ ಒಂದು ಪ್ರಕರಣ ದಾಖಲಾಗಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ಅಗತ್ಯ ಮುಂಜಾಗ್ರತೆ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ” ಎಂದು ಶಾಸಕ ಎಚ್.ಹರತಾಳು ಹಾಲಪ್ಪ ತಿಳಿಸಿದರು.
ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಕೆಎಫ್‍ಡಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳ ಜತೆ ಸೋಮವಾರ (ಫೆ.೬) ಸಭೆ ನಡೆಸಿ ಮಾತನಾಡಿದ ಅವರು, “ಕೆಎಫ್‍ಡಿ ಪ್ರಕರಣ ಸಂಪೂರ್ಣ ನಿಯಂತ್ರಣದಲ್ಲಿದೆ. ಬೇಸಿಗೆ ಸಮೀಪಿಸುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಂದಾಯ, ಗ್ರಾಮ ಪಂಚಾಯಿತಿ, ಪಶುಪಾಲನಾ ಇಲಾಖೆ, ಅರಣ್ಯ ಇಲಾಖೆ ಸಮನ್ವಯತೆ ಸಾಧಿಸಲು ತಿಳಿಸಲಾಗಿದೆ” ಎಂದರು.
ಇದನ್ನೂ ಓದಿ: Geetha Bharathi Bhat: 30 ಕೆಜಿ ತೂಕ ಇಳಿಸಿಕೊಂಡ ʻಬ್ರಹ್ಮಗಂಟುʼ ಗುಂಡಮ್ಮ
“ಮಾರಿಕಾಂಬ ಜಾತ್ರೆಯ ಹಿನ್ನೆಲೆಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಲು ಸೂಚನೆ ನೀಡಲಾಗಿದೆ. ವಿದ್ಯುತ್ ಮತ್ತು ಸ್ವಚ್ಛತೆ ಬಗ್ಗೆ ಗಮನಹರಿಸಲಾಗಿದೆ. ಜಾತ್ರೆಯ ಯಶಸ್ಸಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ. ಜಾತ್ರೆಯ ಸಂದರ್ಭದಲ್ಲಿ ವಾಹನ ನಿಲುಗಡೆಗೆ ಬೇರೆ ಬೇರೆ ಭಾಗದಲ್ಲಿ ಸ್ಥಳವನ್ನು ಗುರುತಿಸಲಾಗಿದೆ. ಜಾತ್ರೆ ಮುಗಿಯುವ ತನಕ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಪರಿಸ್ಥಿತಿ ನಿಭಾಯಿಸಲು ಸೂಚನೆ ನೀಡಲಾಗಿದೆ” ಎಂದು ಹೇಳಿದರು.
“ಅಂಬಾರಗುಡ್ಡ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡಿರುವ ಮಾಹಿತಿ ಇದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಬಗರ್ ಹುಕುಂ ಹಕ್ಕುಪತ್ರ ಕೊಡಲು ಇನ್ನೂ ಕೆಲವು ಜನರಿಗೆ ಅವಕಾಶವಿದ್ದು, ಅದನ್ನು ನೀಡಲಾಗುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: Karnataka Election : ಸಿದ್ದರಾಮಯ್ಯ ಹೊಸಪೇಟೆಯಿಂದ ಸ್ಪರ್ಧಿಸಿದರೆ ಹೊಲ ಮನೆ ಮಾರಿ ಕೋಟಿ ರೂ. ಕೊಡ್ತೇನೆ ಎಂದ ಅಭಿಮಾನಿ
ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ, ಸಾಮಾಜಿಕ ಅರಣ್ಯ ವಿಭಾಗದ ಯೋಗೇಶ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ನಾಗೇಶ್ ಬ್ಯಾಲಾಳ್ ಉಪಸ್ಥಿತರಿದ್ದರು.