Site icon Vistara News

Sagara News: ಸರ್ಕಾರದ ಧೋರಣೆ ಖಂಡಿಸಿ ಮಲೆನಾಡು ರೈತ ಹೋರಾಟ ಸಮಿತಿಯಿಂದ ಕರಪತ್ರ ಜಾಗೃತಿ ಅಭಿಯಾನ

ti.n.srinivas sagara Awareness Campaign

#image_title

ಸಾಗರ: “ಹಿಂದಿನ ಸರ್ಕಾರಗಳು ರೈತರಿಗೆ ಹಕ್ಕುಪತ್ರ ಕೊಟ್ಟಿದ್ದರೆ, ಬಿಜೆಪಿ ಸರ್ಕಾರವು ನ್ಯಾಯಾಲಯದ ಆದೇಶವನ್ನು ಮುಂದಿರಿಸಿಕೊಂಡು ಕೊಟ್ಟಿರುವ ಹಕ್ಕುಪತ್ರವನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಸರ್ಕಾರದ ಧೋರಣೆಯನ್ನು ಖಂಡಿಸಿ ಮಲೆನಾಡು ರೈತ ಹೋರಾಟ ಸಮಿತಿಯ ವತಿಯಿಂದ ಶಿವಮೊಗ್ಗ (Shivamogga) ಜಿಲ್ಲಾದ್ಯಂತ ಕರಪತ್ರ ಮೂಲಕ ಜಾಗೃತಿ ಅಭಿಯಾನವನ್ನು (Awareness Campaign) ಶನಿವಾರದಿಂದ (ಫೆ.೧೮) ಕೈಗೊಳ್ಳಲಾಗುತ್ತಿದೆ” ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ತಿಳಿಸಿದರು.

ಶನಿವಾರ (ಫೆ.೧೮) ನಡೆದ ಪತ್ರಿಕಾಗೋಷ್ಠಿಯಲ್ಲಿ ಜಾಗೃತಿ ಅಭಿಯಾನ ಕುರಿತ ಕರಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, “ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ, ಶರಾವತಿ ಮುಳುಗಡೆ ಸಂತ್ರಸ್ತರು, ಬಗರ್‌ ಹುಕುಂ ಸಾಗುವಳಿದಾರರು, ಅರಣ್ಯ ಭೂಮಿ ವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಕರಪತ್ರ ಅಭಿಯಾನ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿ: Cheetahs From South Africa: ದಕ್ಷಿಣ ಆಫ್ರಿಕಾದಿಂದ 10 ತಾಸು ಪ್ರಯಾಣ ಮಾಡಿ ಭಾರತ ತಲುಪಿದ 12 ಚೀತಾಗಳು

“ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಅವರು ತಾವು ಮುಳುಗಡೆ ಸಂತ್ರಸ್ತರು ಎಂದು ಭಾಷಣ ಮಾಡುತ್ತಾರೆ. ಆದರೆ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡಿಸುವ ಬಗ್ಗೆ ಅವರು ಕಾಳಜಿ ವಹಿಸಿಲ್ಲ. ವಿಧಾನಸಭೆಯಲ್ಲಿ ಮಾತನಾಡಿದರೆ ಸಾಕಾಗುವುದಿಲ್ಲ. ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಆದೇಶ ಮಾಡಿಸುವತ್ತ ಗಮನ ಹರಿಸಬೇಕು. ಮುಖ್ಯಮಂತ್ರಿಗಳ ಮನವೊಲಿಸುವಲ್ಲಿ ವಿಫಲವಾಗಿರುವ ಹರತಾಳು ಹಾಲಪ್ಪ ಅವರು ಶರಾವತಿ ಮುಳುಗಡೆ ಅಮಾಯಕ ರೈತರನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿರುವುದು ಶಾಸಕರ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಕೆರೆ ಹಬ್ಬ, ಮದ್ಯದಂಗಡಿಗೆ ಪರವಾನಿಗೆ ಕೊಡಿಸುವಲ್ಲಿ ಹೆಚ್ಚು ಆಸಕ್ತಿ ತೋರಿಸುವ ಶಾಸಕ ಹಾಲಪ್ಪ ಅವರಿಗೆ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡಿಸುವ, ಅಂಬಾರ ಗುಡ್ಡ ಪ್ರದೇಶದಲ್ಲಿ ಸ್ಥಾನಿಕ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿರುವ ಬಗ್ಗೆ ಗೊತ್ತಿಲ್ಲವೇ” ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ: Maha Shivaratri 2023: ಧಾರವಾಡ ಸೋಮೇಶ್ವರನ ಗರ್ಭಗುಡಿ ಪ್ರವೇಶಕ್ಕೆ ಅವಕಾಶ; ಐತಿಹಾಸಿಕ ತ್ರಿಕುಟೇಶ್ವರನಿಗೆ ವಿಶೇಷ ಪೂಜೆ

“ಸರ್ಕಾರಕ್ಕೆ ಮತ್ತು ಶಾಸಕರಿಗೆ ತಾಕತ್ತು ಇದ್ದರೆ ಫೆ. 27ರಂದು ಶಿವಮೊಗ್ಗಕ್ಕೆ ಬರುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದಲೇ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡಿಸುವ ಮೂಲಕ ತಮ್ಮ ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕು. ಅಂಬಾರ ಗುಡ್ಡವನ್ನು ಜೀವವೈವಿಧ್ಯತಾ ತಾಣವಾಗಿ ಘೋಷಣೆ ಮಾಡಿರುವುದನ್ನು ತಕ್ಷಣ ಕೈಬಿಡಬೇಕು. ಭೂಹಕ್ಕಿನ ಅತಂತ್ರ ಸ್ಥಿತಿಯಲ್ಲಿರುವ ಸಾಗರ ಕ್ಷೇತ್ರದ ರೈತರ ಬಗ್ಗೆ ಸರ್ಕಾರಕ್ಕಾಗಲೀ, ಶಾಸಕರಿಗಾಗಲೀ ಕಾಳಜಿ ಇಲ್ಲ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕು ನೀಡದೆ ಹೋದಲ್ಲಿ ಸಮಿತಿಯು ಉಗ್ರವಾಗಿ ಪ್ರತಿಭಟನೆ ನಡೆಸುವುದರ ಜೊತೆಗೆ ಜೈಲು ಭರೋಗೂ ಸಿದ್ಧರಿದ್ದೇವೆ” ಎಂದು ಎಚ್ಚರಿಕೆ ನೀಡಿದರು. ಗೋಷ್ಠಿಯಲ್ಲಿ ಧರ್ಮೇಂದ್ರ ಶಿರವಾಳ, ಎಸ್.ಕೃಷ್ಣಮೂರ್ತಿ, ಶ್ರೀಧರ ನಾರಗೋಡು, ಪ್ರೇಮ್ ಸಿಂಗ್, ರಂಗನಾಥ್ ಹಾಜರಿದ್ದರು.

Exit mobile version