Site icon Vistara News

Sagara News: ಶಿವಮೊಗ್ಗಕ್ಕೆ ಪಿಎಂ ಮೋದಿ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡಿಸುವಂತೆ ತೀ.ನ. ಶ್ರೀನಿವಾಸ್ ಒತ್ತಾಯ

TN Srinivas sagara

#image_title

ಸಾಗರ: ಪ್ರಧಾನಿ ನರೇಂದ್ರ ಮೋದಿ ಫೆ. 27ಕ್ಕೆ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡಿಸುವ ಮೂಲಕ ಬಿಜೆಪಿ ತನ್ನ ಮಾತು ಉಳಿಸಿಕೊಳ್ಳಬೇಕು ಎಂದು ಮಲೆನಾಡು ರೈತ ಹೋರಾಟ ವೇದಿಕೆಯ ಜಿಲ್ಲಾ ಸಂಚಾಲಕ ತೀ.ನ. ಶ್ರೀನಿವಾಸ್ ಒತ್ತಾಯಿಸಿದ್ದಾರೆ.

ನಗರದಲ್ಲಿ ಗುರುವಾರ (ಫೆ.೨) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ತಾಂಡಾದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿದ ಮಾದರಿಯಲ್ಲೇ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಶರಾವತಿ ಮುಳುಗಡೆ ಸಂತ್ರಸ್ತರಿಗೂ ಹಕ್ಕುಪತ್ರ ವಿತರಿಸಿ ಎಂದು ಹೇಳಿದರು.

ಬಿಜೆಪಿಯ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ನಂ. 1 ಸುಳ್ಳುಗಾರರು. ಒಂದೂವರೆ ವರ್ಷಗಳ ಹಿಂದೆ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ಸಭೆ ನಡೆಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದ್ದರು. ಹೈಕೋರ್ಟ್ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ಪ್ರಕರಣವನ್ನು ರದ್ದುಪಡಿಸಿತ್ತು. ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಕನಿಷ್ಠ ಕೆಲಸವೂ ಮಾಡಿಲ್ಲ. ಯಡಿಯೂರಪ್ಪ ಅವರು ಶಿವಮೊಗ್ಗದಲ್ಲಿ ಸಭೆ ನಡೆಸಿ 20 ದಿನದೊಳಗೆ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಎಪ್ಪತ್ತು ದಿನವಾದರೂ ತಮ್ಮ ಮಾತು ಯಡಿಯೂರಪ್ಪ ಅವರು ಉಳಿಸಿಕೊಂಡಿಲ್ಲ. ಮೂರು ಬಾರಿ ಶಾಸಕರಾಗಿರುವ ಹರತಾಳು ಹಾಲಪ್ಪ ಅವರು ಸರ್ಕಾರದ ಮೇಲೆ ಒತ್ತಡ ತಂದು ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಸಾಧ್ಯವಾಗದೆ ಧರ್ಮಸ್ಥಳಕ್ಕೆ ಸಂತ್ರಸ್ತರನ್ನು ಕರೆದುಕೊಂಡು ಹೋಗಿರುವುದು ಅವರ ಅಸಹಾಯಕತೆ, ಅಸಮರ್ಥತೆಗೆ ಸಾಕ್ಷಿಯಾಗಿದೆ. ರಾಜ್ಯ ಸರ್ಕಾರ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡದೆ ಹೋದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರಪತ್ರದ ಅಭಿಯಾನದ ಮೂಲಕ ಆಡಳಿತ ಮತ್ತು ವಿಪಕ್ಷಗಳ ವಿರುದ್ಧ ಜನಾಂದೋಲನ ರೂಪಿಸಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ | Kannada New Movie: ನಾಳೆ ರಾಜ್ಯಾದ್ಯಂತ ಪ್ರಥಮ್‌ ಅಭಿನಯದ ʻನಟ ಭಯಂಕರʼ ಸಿನಿಮಾ ರಿಲೀಸ್‌

ಶಾಸಕ ಹರತಾಳು ಹಾಲಪ್ಪ ಅವರಿಗೆ ಕೆರೆಹಬ್ಬ ಮಾಡುವ ನೈತಿಕ ಹಕ್ಕಿಲ್ಲ. ಕೆರೆ ಒತ್ತುವರಿ ಜಾಗದಲ್ಲಿ ತಾವೇ ನಿವೇಶನ ಖರೀದಿ ಮಾಡಿ ಒತ್ತುವರಿ ಮುಚ್ಚಿ ಹಾಕಲು ಕೆರೆಹಬ್ಬ ಆಚರಿಸುತ್ತಿದ್ದಾರೆ. ಶರಾವತಿ ನದಿ ನೀರನ್ನು ಕೆರೆಗೆ ಬೀಡುವ ಮೂಲಕ ಜನರಿಗೆ ಕುಡಿಯುವ ನೀರನ್ನು ಕೊಡದೆ ವಂಚಿಸಲಾಗುತ್ತಿದೆ. ಕೆರೆ ಒತ್ತುವರಿದಾರರ ಪಟ್ಟಿಯಲ್ಲಿ ತಮ್ಮ ಹೆಸರು ಬಂದಿರುವುದಕ್ಕೆ ಶಾಸಕರು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಮಿತಿಯ ತಾಲೂಕು ಸಂಚಾಲಕ ಧರ್ಮೇಂದ್ರ ಶಿರವಾಳ ಹಾಜರಿದ್ದರು.

ಇದನ್ನೂ ಓದಿ | Stock Market Crash: ಡ್ಯೂರೆಕ್ಸ್ ಜಾಹೀರಾತಿನಲ್ಲಿ ಬಳಸಲಾದ ಮ್ಯೂಚುಯಲ್ ಫಂಡ್ ಡಿಸ್‌ಕ್ಲೇಮರ್‌‌ನ ‘ಮ್ಯೂಚುಯಲ್ ಫನ್’ ವೈರಲ್

Exit mobile version