Site icon Vistara News

Sagara News: ಮುಳುಗಡೆ ಸಂತ್ರಸ್ತರಿಗೆ ಕೇವಲ 9,900 ಎಕರೆ ಜಮೀನು ಸಾಕಾ?: ಮಲ್ಲಿಕಾರ್ಜುನ ಹಕ್ರೆ ಪ್ರಶ್ನೆ

Mallikarjun Hakre sagara

#image_title

ಸಾಗರ: “ಜಿಲ್ಲೆಯಲ್ಲಿ ಮುಳುಗಡೆ ಸಂತ್ರಸ್ತರ ಕುಟುಂಬ ಸಾವಿರಾರು ಇದೆ. ಆದರೆ, ರಾಜ್ಯ ಸರ್ಕಾರ ಕೇವಲ 9,900 ಎಕರೆ ಜಮೀನು ಮಂಜೂರಾತಿಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಅವೈಜ್ಞಾನಿಕವಾಗಿದೆ” ಎಂದು ಸಾಗರ (Sagara News) ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ (ಫೆ.೭) ಮಾತನಾಡಿದ ಅವರು, “ಜಿಲ್ಲೆಯಲ್ಲಿ ಮುಳುಗಡೆ ಸಂತ್ರಸ್ತರಿಗೆ ನೀಡಲು ಕನಿಷ್ಠ 50 ಸಾವಿರ ಎಕರೆ ಜಮೀನು ಮೀಸಲಿಟ್ಟು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿತ್ತು. ಆದರೆ ಜಿಲ್ಲೆಯ ಶಾಸಕರು, ಸಂಸದರು ಸಂಪೂರ್ಣ ವಿಫಲವಾಗಿದ್ದಾರೆ” ಎಂದು ಹೇಳಿದರು.

“1962ರಲ್ಲಿ ಮುಳುಗಡೆ ಸಂತ್ರಸ್ತರಿಗೆ 9,900 ಎಕರೆ ಜಮೀನು ಹಂಚಿಕೆಗಾಗಿ ಮೀಸಲು ಇರಿಸಲಾಗಿತ್ತು. ಅದು ಹಂಚಿಕೆ ಮಾಡಿರಲಿಲ್ಲ. 2017ರಲ್ಲಿ ಸಂತ್ರಸ್ತರಿಗೆ ಜಮೀನು ಮಂಜೂರು ಮಾಡದ ವಿಷಯವನ್ನು ನಾನು ಕಂದಾಯ ಸಚಿವ ರಮಾನಾಥ ರೈ ನೇತೃತ್ವದಲ್ಲಿ ನಡೆದ ಸಂಪುಟ ಉಪ ಸಮಿತಿಯ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೆನು. ಹಿರಿಯ ಅಧಿಕಾರಿ ಮದನ್ ಗೋಪಾಲ್ ಅವರಿಗೆ ವಿಷಯ ಮನವರಿಕೆ ಮಾಡಿಕೊಡಲಾಗಿತ್ತು. ಅಂದು ಶಾಸಕರಾಗಿದ್ದ ಹರತಾಳು ಹಾಲಪ್ಪ ಮುಳುಗಡೆ ಸಂತ್ರಸ್ತ ರೈತರು ಎಂದು ಹೇಳಿಕೊಂಡು ನ್ಯಾಯ ದೊರಕಿಸಿ ಕೊಡುವಲ್ಲಿ ವಿಫಲವಾಗಿದ್ದಾರೆ. ಶಾಸನ ಸಭೆಯಲ್ಲಿ ಮುಳುಗಡೆ ಸಂತ್ರಸ್ತರ ಪರವಾಗಿ ಹರತಾಳು ಹಾಲಪ್ಪ ಧ್ವನಿ ಎತ್ತಿಲ್ಲ ಎಂದು ದೂರಿದ ಅವರು, ಭೂ ಗುತ್ತಿಗೆ ಯೋಜನೆಯನ್ನು ಶಿವಮೊಗ್ಗ ಜಿಲ್ಲೆಗೂ ವಿಸ್ತರಿಸುವ ನಿಟ್ಟಿನಲ್ಲಿ ಶಾಸಕರು ಸದನದಲ್ಲಿ ಧ್ವನಿ ಎತ್ತಲಿ” ಎಂದು ಒತ್ತಾಯಿಸಿದರು.

ಇದನ್ನೂ ಓದಿ: Jailer Movie: ಶೂಟಿಂಗ್‌ ಸೆಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ರಜನಿಕಾಂತ್‌-ಮೋಹನ್‌ಲಾಲ್‌

“ಮಾರ್ಕೆಟ್ ರಸ್ತೆಗೆ ತರಾತುರಿಯಲ್ಲಿ ವಾಜಪೇಯಿ ರಸ್ತೆ ಎಂದು ಹೆಸರಿಸಲಾಗಿದೆ. ವಾಜಪೇಯಿ ಅವರ ಬಗ್ಗೆ ನಮಗೆಲ್ಲ ಗೌರವ ಇದೆ. ಅವರ ಹೆಸರನ್ನು ನೂತನವಾಗಿ ನಿರ್ಮಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಗೆ ಇರಿಸಿ, ಮಾರ್ಕೆಟ್ ರಸ್ತೆಗೆ ಕೆಳದಿ ರಾಣಿ ಚೆನ್ನಮ್ಮಾಜಿ ರಸ್ತೆ ಎಂದು ನಾಮಕರಣ ಮಾಡುವುದು ಔಚಿತ್ಯಪೂರ್ಣ ಅನಿಸುತ್ತಿದೆ. ಏಕೆಂದರೆ 263 ವರ್ಷ ರಾಜ್ಯಾಡಳಿತ ನೀಡಿದ ಕೆಳದಿ ಅರಸರು ನಾಡಿಗೆ ನೀಡಿದ ಕೊಡುಗೆ ಅಮೂಲ್ಯವಾದದ್ದು. ಕೆಳದಿ ರಾಜರು ಇದನ್ನು ರಾಜಮಾರ್ಗವಾಗಿ ಉಪಯೋಗಿಸುತ್ತಿದ್ದರು. ಇಂತಹ ಮಾರ್ಗಕ್ಕೆ ಕೆಳದಿ ರಾಣಿ ಚೆನ್ನಮ್ಮಾಜಿ ಮಾರ್ಗ ಎಂದು ನಾಮಕರಣ ಮಾಡುವ ಜೊತೆಗೆ ಶಿವಪ್ಪ ನಾಯಕ ವೃತ್ತದಿಂದ ಇಕ್ಕೇರಿ ವೃತ್ತದವರೆಗಿನ ರಸ್ತೆಗೆ ಕೆಳದಿ ಶಿವಪ್ಪ ನಾಯಕ ರಸ್ತೆ ಎಂದು ನಾಮಕರಣ ಮಾಡಲಿ” ಎಂದು ಒತ್ತಾಯಿಸಿದರು.

ಇದನ್ನೂ ಓದಿ: Sidharth Kiara Wedding: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್ ಮಲ್ಹೋತ್ರಾ- ಕಿಯಾರಾ ಅಡ್ವಾಣಿ

“ಬಡವರ ಆಹಾರಕ್ಕೆ ಆಶಾಕಿರಣವಾಗಿದ್ದ ಇಂದಿರಾ ಕ್ಯಾಂಟೀನ್ ಸಾಗರದಲ್ಲಿ ಸಂಪೂರ್ಣ ವಿಫಲವಾಗಿದೆ. ಶಾಸಕರು ಇದರ ಬಗ್ಗೆ ಕನಿಷ್ಟ ಆಸಕ್ತಿಯನ್ನೂ ತೋರಿಸದೇ ಇರುವುದರಿಂದ ಸಾಗರದಲ್ಲಿ ಇಂದಿರಾ ಕ್ಯಾಂಟಿನ್ ಯೋಜನೆ ಮೂಲೆ ಗುಂಪಾಗಲು ಕಾರಣವಾಗಿದೆ. ಇಂದಿರಾ ಕ್ಯಾಂಟಿನ್ ಪುನಶ್ಚೇತನಕ್ಕೆ ಒತ್ತು ನೀಡಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾನುವಾರುಗಳು ಬೀದಿಲ್ಲಿಯೇ ಇವೆ. ಜನರು ರಸ್ತೆಯಲ್ಲಿ ಜಾನುವಾರುಗಳನ್ನು ಬಿಟ್ಟು ಹೋಗುತ್ತಿದ್ದಾರೆ. ರಾಜ್ಯ ಸರ್ಕಾರ ಜಾನುವಾರು ಸಾಕುವವರಿಗೆ ಶೇ. 50 ಆರ್ಥಿಕ ನೆರವು ಘೋಷಣೆ ಮಾಡಬೇಕು. ಶಾಸಕರು ಗೋವಿನ ಬಗ್ಗೆ ವರ್ಣನೆ ಮಾಡುವುದಕ್ಕಿಂತ ಗೋವು ಸಂರಕ್ಷಣೆಗೆ ಒತ್ತು ನೀಡಲು ಅನುದಾನ ಮೀಸಲಿಡುವಂತೆ ಸದನದಲ್ಲಿ ಸರ್ಕಾರದ ಗಮನ ಸೆಳೆಯಲಿ” ಎಂದರು.

ನಾನೂ ಆಕಾಂಕ್ಷಿ : “ನಾನು ಸಹ ಮುಂದಿನ ವಿಧಾನ ಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ನನ್ನ ಪರವಾಗಿ ಹೆಚ್ಚು ಒಲವು ವ್ಯಕ್ತವಾಗಿದೆ. ಪಕ್ಷ ನನ್ನ ಸ್ಪರ್ಧೆಗೆ ಅವಕಾಶ ಕಲ್ಪಿಸುತ್ತದೆ ಎನ್ನುವ ಭರವಸೆ ಇದೆ” ಎಂದರು. ಗೋಷ್ಠಿಯಲ್ಲಿ ಮಹ್ಮದ್ ಖಾಸಿಂ, ಸ್ವಾಮಿಗೌಡ, ನಾಗರಾಜ್ ಮಜ್ಜಿಗೆರೆ, ಮೋಹನ್, ಕೃಷ್ಣಮೂರ್ತಿ, ನಾರಾಯಣ, ಗುರುಪ್ರಸಾದ್, ಜಯಂತ್, ಪಿ.ಕೆ.ನಾರಾಯಣ, ರಾಮು ಕುರುವರಿ ಹಾಜರಿದ್ದರು.

ಇದನ್ನೂ ಓದಿ: Parliament Budget Session: ಮೋದಿ ವಿದೇಶಿ ಪ್ರವಾಸಕ್ಕೆ ಹೋದಾಗಲೆಲ್ಲ, ಅದಾನಿ ಕಂಪನಿಗಳಿಗೆ ಲಾಭ!

Exit mobile version