ಸಾಗರ: ಕೋಳಿ ಅಂಗಡಿ ಮಾಲೀಕರೊಬ್ಬರಿಂದ ಇತ್ತೀಚೆಗೆ ಲಂಚ ಪಡೆಯುವಾಗ ರೆಡ್‍ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಕಾರ್ಗಲ್-ಜೋಗ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಸಿ. ಹರೀಶ್ ಗೌಡ ಸದಸ್ಯತ್ವವನ್ನು ವಜಾಗೊಳಿಸಲಾಗಿದೆ.
ಜೋಗದ 8ನೇ ವಾರ್ಡ್ ಸದಸ್ಯ ಹರೀಶ್ ಗೌಡ ಬಜಾರ್ ಲೈನ್‍ನ ಕೋಳಿ ಅಂಗಡಿ ಮಾಲೀಕ ಅಹ್ಮದ್ ಅಬ್ದುಲ್ ಬಾಕಿ ಎಂಬುವವರಿಗೆ ಪರವಾನಿಗೆ ಮಾಡಿಸಿಕೊಡುವುದಾಗಿ 50 ಸಾವಿರ ರೂ. ಲಂಚ ಕೇಳಿದ್ದರು. ಮನೆಯಲ್ಲಿ ಲಂಚದ ಹಣ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದರು.
ಈ ಸಂದರ್ಭದಲ್ಲಿ ಗಾಬರಿಗೊಳಗಾದ ಹರೀಶ್ ಗೌಡ ಹಣವನ್ನು ಗ್ಯಾಸ್ ಸ್ಟೌ ಮೇಲೆ ಇರಿಸಿ ಸುಟ್ಟು ಹಾಕುವ ಪ್ರಯತ್ನ ಮಾಡಿದ್ದರು. ಆಗ ಶಿವಮೊಗ್ಗ ಲೋಕಾಯುಕ್ತ ಪೊಲೀಸರು ಇದನ್ನು ತಡೆದು, ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಕರ್ನಾಟಕ ಪುರಸಭಾ ಕಾಯ್ದೆಯನ್ವಯ ತಕ್ಷಣ ಜಾರಿಗೆ ಬರುವಂತೆ ಹರೀಶ್ ಗೌಡ ಅವರನ್ನು ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ | Rishabh Pant | ರಿಷಭ್ ಪಂತ್ ಪುನಶ್ಚೇತನದ ಅವಧಿಯನ್ನು ಮಾಹಿತಿ ಪ್ರಕಟಿಸಿದ ಮುಂಬಯಿ ವೈದ್ಯರು