ಸಾಗರ: ಸೊರಬ ತಾಲೂಕಿನ ತಾಳಗುಪ್ಪದ ಕೆರೆಹಳ್ಳಿ ಗ್ರಾಮದ ಆರು ರೈತರ 20 ಎಕರೆ ಜಮೀನು ವ್ಯಾಪ್ತಿಯಲ್ಲಿ ಗುಂಡಿ ತೆಗೆದು ಒಕ್ಕಲೆಬ್ಬಿಸಲು ಮುಂದಾಗಿರುವ ಅರಣ್ಯ ಇಲಾಖೆಯ (forest department) ಕ್ರಮವನ್ನು ಖಂಡಿಸಿ ಗುರುವಾರ (ಮಾ.23) ಮಲೆನಾಡು ರೈತ ಹೋರಾಟ ಸಮಿತಿ ವತಿಯಿಂದ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಯೋಜಕ ತೀ.ನ.ಶ್ರೀನಿವಾಸ್, “ಮಲೆನಾಡು ರೈತರಿಗೆ ಬಿಜೆಪಿ ಸರ್ಕಾರ ಶಾಪವಾಗಿದೆ. ತಾಳಗುಪ್ಪ ಹೋಬಳಿಯ ಕೆರೆಹಳ್ಳಿ ಗ್ರಾಮದ 6 ರೈತರ ಸುಮಾರು 20 ಎಕರೆ ಜಮೀನು, ಮನೆ ಇರುವ ಜಾಗಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಏಕಾಏಕಿ ಗುಂಡಿ ತೆಗೆದು ಒಕ್ಕಲೆಬ್ಬಿಸಲು ನಡೆಸಿರುವ ಪ್ರಯತ್ನ ತೀವ್ರ ಖಂಡನೀಯ. ಕಳೆದ 30 ವರ್ಷಗಳಿಂದ ಫಸಲು ಬರುತ್ತಿದ್ದ ತೋಟವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸಂಪೂರ್ಣ ನಾಶ ಮಾಡಿರುವುದು ಕ್ರೂರ ನಡವಳಿಕೆ” ಎಂದು ಕಿಡಿಕಾರಿದರು.
ಇದನ್ನೂ ಓದಿ: MP Pratapasimha : ಆ ಭಾಗ್ಯ ಕೊಟ್ಟೆ ಈ ಭಾಗ್ಯ ಕೊಟ್ಟೆ ಎನ್ನುವ ಸಿದ್ದರಾಮಯ್ಯಗೆ ಕ್ಷೇತ್ರ ಭಾಗ್ಯವೇ ಇಲ್ಲ ಎಂದ ಪ್ರತಾಪ್‌ಸಿಂಹ
ಮುಖ್ಯಮಂತ್ರಿಗಳು ಶಿವಮೊಗ್ಗಕ್ಕೆ ಬಂದಾಗ ರೈತರನ್ನು ಒಕ್ಕಲೆಬ್ಬಿಸಲ್ಲ ಎಂದಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನ್ನ ಜೀವ ಇರುವವರೆಗೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಹೇಳಿದ್ದರು. ಆದರೆ ಇಬ್ಬರೂ ನೀಡಿದ ಹೇಳಿಕೆ ಹುಸಿಯಾಗಿದೆ. ಸೊರಬ ಕ್ಷೇತ್ರದ ಹಾಲಿ ಶಾಸಕ ಕುಮಾರ ಬಂಗಾರಪ್ಪ, ಮಾಜಿ ಶಾಸಕ ಮಧು ಬಂಗಾರಪ್ಪ ರೈತರ ತೋಟ ನಾಶ ಮಾಡಿರುವುದರ ಬಗ್ಗೆ ಕನಿಷ್ಠ ಹೇಳಿಕೆಯನ್ನೂ ನೀಡಿಲ್ಲ. ಒಕ್ಕಲೆಬ್ಬಿಸಿರುವ ರೈತರ ಪೈಕಿ ಇಬ್ಬರಿಗೆ ಹಕ್ಕುಪತ್ರ ಇದೆ. ಇನ್ನು ನಾಲ್ಕು ಜನರ ಅರ್ಜಿಯನ್ನು ಜಿಲ್ಲಾಧಿಕಾರಿಗಳು ಒಕ್ಕಲೆಬ್ಬಿಸುವ ಉದ್ದೇಶದಿಂದಲೇ ವಜಾ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ತಪ್ಪಿತಸ್ಥ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಅರಣ್ಯ ಇಲಾಖೆ ದೌರ್ಜನ್ಯ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಜಿಲ್ಲಾದ್ಯಂತ ಜನಜಾಗೃತಿ ಮೂಡಿಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: Cow protection : ವಯಸ್ಸಾದ ಗೋವುಗಳ ರಕ್ಷಣೆ ಸರ್ಕಾರ, ಸರ್ಮಾಜದ ಜವಾಬ್ದಾರಿ ಎಂದ ಸಿಎಂ ಬೊಮ್ಮಾಯಿ
ಮಹಮ್ಮದ್ ಖಾಸಿಂ, ಚಂದ್ರಪ್ಪ ಆರ್.ಬಿ., ರತ್ನಾಕರ್, ಸುಬ್ರಹ್ಮಣ್ಯ, ಆರೀಫ್, ವಿಶ್ವನಾಥ ಗೌಡ ಅದರಂತೆ, ಜೋಸೆಫ್, ರಹಮತುಲ್ಲಾ, ಯೋಗೇಂದ್ರ, ಎಲ್.ವಿ.ಸುಭಾಷ್, ಥಾಮಸ್ ಇನ್ನಿತರರು ಹಾಜರಿದ್ದರು.