ಸಾಗರ: ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಮನೆ ಮೇಲೆ ದಾಳಿ ನಡೆಸಿ ಕಲ್ಲು ಮತ್ತು ಚಪ್ಪಲಿ ತೂರಾಟ ನಡೆಸಿದ್ದನ್ನು ಖಂಡಿಸಿ ಮಂಗಳವಾರ (ಮಾ.28) ಅಖಿಲ ಭಾರತ ವೀರಶೈವ ಮಹಾಸಭಾ ಸಾಗರ ಶಾಖೆಯ ವತಿಯಿಂದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಕ್ಷರ ಸಾಗರ ಸೌಹಾರ್ದ ಅಧ್ಯಕ್ಷ ದಿನೇಶ್ ಬರದವಳ್ಳಿ, “ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆ ಮೇಲೆ ದಾಳಿ ನಡೆಸಿದ ಕೃತ್ಯವನ್ನು ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ. ಬಂಜಾರ, ಬೋವಿ ಸಮಾಜಕ್ಕೆ ಯಡಿಯೂರಪ್ಪನವರು, ಸಂಸದ ಬಿ.ವೈ. ರಾಘವೇಂದ್ರ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಂಜಾರ ಸಮಾಜದ ಅಭಿವೃದ್ಧಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಿ ಸೇವಾಲಾಲ ಮಠಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ರಾಜಾಹುಲಿ ಯಡಿಯೂರಪ್ಪ ಅವರ ಮನೆ ಮೇಲೆ ದಾಳಿ ನಡೆಸಿರುವುದರ ಹಿಂದೆ ವಿರೋಧ ಪಕ್ಷದ ಕೈವಾಡವಿದೆ. ಯಡಿಯೂರಪ್ಪ ಅವರ ಮನೆ ಮೇಲೆ ದಾಳಿ ನಡೆಸಿದವರ ಮೇಲೆ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಮನವಿ ಮಾಡಿದ್ದು ಅವರ ಔದಾರ್ಯತೆಗೆ ಸಾಕ್ಷಿಯಾಗಿದೆ. ಹಿಂದಿನಿಂದಲೂ ಕಾಂಗ್ರೆಸ್ ಪಕ್ಷ ವೀರಶೈವ ಸಮಾಜವನ್ನು ತುಷ್ಟೀಕರಣ ಮಾಡುತ್ತಿದೆ. ಯಡಿಯೂರಪ್ಪ ಅವರ ಮೇಲೆ ಇಂತಹ ಕೃತ್ಯ ಎಸಗುವವರನ್ನು ಸಮಾಜ ಎಂದಿಗೂ ಕ್ಷಮಿಸುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: Fraud Case: ಮೇಕೆ ಮಾಂಸ ತಿಂದು ದುಡ್ಡು ಕೊಡದೇ ಮೋಸ ಮಾಡಿದ್ರಾ ನಲಪಾಡ್ ಗ್ಯಾಂಗ್?
ವೀರಶೈವ ಸಮಾಜದ ಇನ್ನೊಬ್ಬ ಪ್ರಮುಖ ಸತೀಶ್ ಗೌಡ ಅದರಂತೆ ಮಾತನಾಡಿ, “ಬಿ.ಎಸ್.ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿರುವುದರ ಹಿಂದೆ ಮಾಜಿ ಮುಖ್ಯಮಂತ್ರಿಯೊಬ್ಬರ ಪುತ್ರನ ಕೈವಾಡ ಇದೆ ಎಂಬ ಚರ್ಚೆ ನಡೆಯುತ್ತಿದ್ದು, ಕಲ್ಲು ತೂರಾಟ ನಡೆಸಿದವರನ್ನು, ಇದಕ್ಕೆ ಪ್ರೇರಣೆ ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶೇಖರಪ್ಪ ಗೌಡ, ಮೈತ್ರಿ ಪಾಟೀಲ್, ವೀರೇಶ್ ಶೆಡ್ತಿಕೊಪ್ಪ, ಗಿರೀಶ್ ಕೆರೆಹಿತ್ಲು, ಕುಮಾರ ಗೌಡ ಕೊಪ್ಪ, ಚಂದ್ರಶೇಖರ್, ಶಾಂತಪ್ಪ ಗೌಡ, ಬಿ.ಎಚ್.ಲಿಂಗರಾಜ್, ಕೆ.ವಿ. ಪ್ರವೀಣ್ ಇನ್ನಿತರರು ಹಾಜರಿದ್ದರು.