Site icon Vistara News

38 ಸಾವಿರ ಎಕರೆ ಕೃಷಿ ಭೂಮಿಯನ್ನು ಅರಣ್ಯ ಭೂಮಿ ಎಂದು ಘೋಷಿಸುವ ಜಿಲ್ಲಾಡಳಿತದ ಕ್ರಮ ಖಂಡನೀಯ: ತೀ.ನ.ಶ್ರೀನಿವಾಸ್

tinsrinivas Farmers Struggle Committee sagara

#image_title

ಸಾಗರ: “ಹೈಕೋರ್ಟ್ ಆದೇಶದ ಹೆಸರಿನಲ್ಲಿ ಜಿಲ್ಲೆಯಲ್ಲಿ 38 ಸಾವಿರ ಎಕರೆ ಭೂಮಿಯನ್ನು ಅರಣ್ಯ ಭೂಮಿ (forest land) ಎಂದು ಘೋಷಣೆ ಮಾಡಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮ ಖಂಡನೀಯ” ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ (ಮಾ.16) ಮಾತನಾಡಿದ ಅವರು, “ಈಗಾಗಲೇ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ನ್ಯಾಯಾಲಯದ ಆದೇಶವನ್ನು ಹಿಡಿದುಕೊಂಡು ಐದಾರು ದಶಕಗಳಿಂದ ಕೃಷಿ ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ” ಎಂದರು.

“ಅರಣ್ಯ ಎಂದು ಘೋಷಣೆ ಮಾಡಲು ಮುಂದಾಗಿರುವ ಸುಮಾರು 25 ಸಾವಿರ ಎಕರೆ ಪ್ರದೇಶದಲ್ಲಿ ರೈತರು 50-60 ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸುತ್ತಿದ್ದು ಹಕ್ಕು ಪತ್ರವನ್ನು ಹೊಂದಿದ್ದಾರೆ. ಪಹಣಿಯಲ್ಲಿ ಅವರ ಹೆಸರು ಇದ್ದು, ಕೃಷಿ ಅಭಿವೃದ್ಧಿಗೆ ಬ್ಯಾಂಕ್‍ಗಳಿಂದ ಸಾಲಸೋಲ ಮಾಡಿದ್ದು, ಬೋರ್‌ ವೆಲ್ ಸಹ ತೆಗೆಸಿಕೊಂಡಿದ್ದಾರೆ. ಹಿಂದೆ ತಹಶೀಲ್ದಾರ್ ಅವರು ದರ್ಖಾಸ್ತು ಎಂದು ಹಕ್ಕು ಪತ್ರ ಸಹ ನೀಡಿದ್ದಾರೆ. ಕಂದಾಯ ಇಲಾಖೆ ಹಕ್ಕು ಪತ್ರ ನೀಡಿದ ಭೂಮಿಯನ್ನು ಅರಣ್ಯ ಇಲಾಖೆಯು ಏಕಾಏಕಿ ನಮ್ಮದು ಎಂದು ಗಡಿ ಗುರುತಿಸಲು ಮುಂದಾಗಿರುವ ಕ್ರಮ ಮಲೆನಾಡನ್ನು ಸ್ಮಶಾನವಾಗಿಸುವ ಪ್ರಯತ್ನವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರನ್ನು ನೇಣುಗಂಬದ ಎದುರು ನಿಲ್ಲಿಸುತ್ತಿದೆ” ಎಂದು ದೂರಿದರು.

ಇದನ್ನೂ ಓದಿ: ಪ್ರಧಾನಿ ಕಾರ್ಯಾಲಯದ ಅಧಿಕಾರಿಯೆಂದು ಕಾಶ್ಮೀರದಲ್ಲಿ ಝಡ್​ ಪ್ಲಸ್​ ಭದ್ರತೆ ಪಡೆದಿದ್ದವ ಅರೆಸ್ಟ್​; ಇವನೆಂಥಾ ಸ್ಮಾರ್ಟ್​ ವಂಚಕ!

“ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಜೀವ ಇರುವ ತನಕ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಹೇಳುತ್ತಾರೆ. ಅವರು ನೂರು ವರ್ಷ ಬದುಕಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಆದರೆ ರೈತರನ್ನು ಒಕ್ಕಲೆಬ್ಬಿಸಲು ಕೇಂದ್ರ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಅವರು ತಕ್ಷಣ ಗಮನ ಹರಿಸಬೇಕು. ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು 15 ದಿನದೊಳಗೆ ಪರಿಹಾರ ಮಾಡುತ್ತೇವೆ ಎಂದು ಶಿವಮೊಗ್ಗದಲ್ಲಿ ನವೆಂಬರ್ 18 ರಂದು ಹೇಳಿದ್ದರು. ನೂರು ದಿನ ಕಳೆದರೂ ಸಮಸ್ಯೆ ಬಗೆಹರಿಸಿಲ್ಲ. ಜೋಗ ಜಲಪಾತ ಪ್ರದೇಶವನ್ನು ಕೇಂದ್ರ ಅರಣ್ಯ ಮಂತ್ರಾಲಯದ ಒಪ್ಪಿಗೆ ಪಡೆಯದೇ ಅಭಿವೃದ್ಧಿಪಡಿಸಲಾಗುತ್ತಿದೆ. ನೂರಾರು ಮರಗಳನ್ನು ಕಡಿತಲೆ ಮಾಡಲಾಗಿದೆ. ಸುಮಾರು 300 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯುತ್ತಿದ್ದು ಹಣ ಹೊಡೆಯುವ ತಂತ್ರ ಇದಾಗಿದೆ” ಎಂದರು.

ಇದನ್ನೂ ಓದಿ: IND VS AUS: ಮೊದಲ ಏಕದಿನ ಪಂದ್ಯಕ್ಕೆ ಆರಂಭಿಕ ಆಟಗಾರರನ್ನು ಹೆಸರಿಸಿದ ನಾಯಕ ಹಾರ್ದಿಕ್​ ಪಾಂಡ್ಯ

ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್‍ನಿಂದ ರೈತರಿಗೆ ನ್ಯಾಯ ಸಿಗುವುದಿಲ್ಲ ಎನ್ನುವುದು ನನಗೆ ಗ್ಯಾರೆಂಟಿಯಾಗಿದ್ದು, ಈ ಹಿನ್ನೆಲೆಯಲ್ಲಿ ರೈತರ ಪ್ರತಿನಿಧಿಯಾಗಿ ಪಕ್ಷೇತರನಾಗಿ ಸಾಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಕ್ಷೇತ್ರದ ಜನರು ಹಾಲಪ್ಪ, ಕಾಗೋಡು ತಿಮ್ಮಪ್ಪ, ಗೋಪಾಲಕೃಷ್ಣ ಅವರ ಆಡಳಿತ ನೋಡಿದ್ದಾರೆ. ಇವರಿಂದ ತಮ್ಮ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಹೊಸ ಮುಖವನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಮನೆ ಮನೆಗೆ ಭೇಟಿ ನೀಡಿ ಗೆಲುವಿಗೆ ಶ್ರಮಿಸಲಾಗುತ್ತದೆ. ಮಾ. 17ರಂದು ಬಿಜೆಪಿ ನಡೆಸುತ್ತಿರುವ ಕಾರ್ಯಕ್ರಮವು ರೈತರ, ಮುಳುಗಡೆ ಸಂತ್ರಸ್ತರ ಶವ ಯಾತ್ರೆಯಾಗಿದೆ” ಎಂದು ಹೇಳಿದರು. ಗೋಷ್ಠಿಯಲ್ಲಿ ಸುಭಾಷ್ ಎಲ್.ವಿ., ಕೃಷ್ಣಮೂರ್ತಿ, ಗೋಪಾಲಕೃಷ್ಣ, ಟೀಟೂ ಸಾಗರ್ ಹಾಜರಿದ್ದರು.

ಇದನ್ನೂ ಓದಿ: Puneeth Rajkumar: ಅಪ್ಪು ಸಮಾಧಿ ದರ್ಶನಕ್ಕೆ ಬಂದ 80ರ ವೃದ್ಧ, 19 ದಿನಗಳ ನವಜಾತ ಶಿಶು ಜತೆ ಬಂದ ತಾಯಿ!

Exit mobile version