ಸಾಗರ: ಇಲ್ಲಿನ ತುಮರಿ ಗ್ರಾಪಂ ವ್ಯಾಪ್ತಿಯ ಏಳಿಗೆ ಗ್ರಾಮವು ಶರಾವತಿ ಹಿನ್ನೀರಿನಲ್ಲಿರುವ ದುರ್ಗಮ ಪ್ರದೇಶವಾಗಿದೆ. ಇಲ್ಲಿರುವ ಏಳಿಗೆ ಕಿರಿಯ ಪ್ರಾಥಮಿಕ ಶಾಲೆಯು ಅವ್ಯವಸ್ಥೆಯಿಂದ ಕೂಡಿದೆ. ಮಕ್ಕಳಿಗೆ ಮೂಲ ಸೌಕರ್ಯವೇ ಇಲ್ಲ ಎಂಬಂತಾಗಿದೆ. ಕೇಳುವವರೇ ಇಲ್ಲ ಎಂಬಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈಗ ಈ ಶಾಲೆಯ ಶೌಚಾಲಯದ ಬಾಗಿಲೇ ಮುರಿದು ಹೋಗಿದೆ. ಈ ಕಾರಣಕ್ಕಾಗಿ ಮಕ್ಕಳಿಗೆ ಸೀರೆಯ ಮರೆಯನ್ನು ಮಾಡಿಕೊಡಲಾಗಿದ್ದು, ಅದರ ಹಿಂದೆ ಶೌಚ ಮಾಡಬೇಕಾದ ದುಸ್ಥಿತಿ ಉಂಟಾಗಿದೆ. ಸರಿಯಾದ ನೀರಿನ ವ್ಯವಸ್ಥೆ ಕೂಡ ಇಲ್ಲದಿರುವುದರಿಂದ ಬಯಲೇ ಶೌಚಾಲಯವಾಗಿದೆ.
ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರು ಈ ಶಾಲೆಯ ಕಟ್ಟಡಗಳು ದುಸ್ಥಿತಿಯಲ್ಲಿದ್ದು, ಹೆಂಚುಗಳು ಒಡೆದಿವೆ. 10 ವರ್ಷಗಳಿಂದ ಶಾಲೆಯಲ್ಲಿ ಕಾಯಂ ಶಿಕ್ಷಕರಿಲ್ಲ. ಬಿಸಿಯೂಟಕ್ಕೂ ಶುದ್ಧ ನೀರಿನ ಕೊರತೆ ಇದ್ದು, ಅಡುಗೆಗೆ ಗುಡ್ಡದಿಂದ ಹರಿಯುವ ನೀರೇ ಗತಿಯಾಗಿದೆ.
ಗುಡ್ಡಗಾಡಿನ ಪರಿಶಿಷ್ಟರ ಜಾತಿಯ ಕೂಲಿಕಾರ್ಮಿಕರ ಮಕ್ಕಳೇ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವ್ಯವಸ್ಥೆಯಿಂದ ಬೇಸತ್ತ ಗ್ರಾಮಸ್ಥರು ದೂರದ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಪಾಲಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಈ ಬಗ್ಗೆ ಡಿಡಿಪಿಐ ಅವರನ್ನು ಪ್ರಶ್ನೆ ಮಾಡಿದರೆ ಎಲ್ಲ ಸೌಕರ್ಯಗಳನ್ನು ಒದಗಿಸಿದ್ದೇವೆ. ಶೌಚಾಲಯಕ್ಕೆ ಹೊಸ ಬಾಗಿಲನ್ನು ಹಾಕಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | Elephant Attack | ಚಿತ್ತೂರು ಗಡಿ ಭಾಗದಲ್ಲಿ 22 ಕಾಡಾನೆಗಳು ಪ್ರತ್ಯಕ್ಷ; ಸ್ಥಳೀಯರಲ್ಲಿ ಹೆಚ್ಚಿದ ಆತಂಕ