Site icon Vistara News

Sahakara Ratna Award | 69ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ 54 ಸಹಕಾರಿಗಳಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ

Sahakara Ratna Award

ಬೆಂಗಳೂರು: ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಬೆಂಗಳೂರು ವಿಭಾಗದ 9 ಜಿಲ್ಲೆಗಳ 54 ಸಹಕಾರಿಗಳಿಗೆ ‘ಸಹಕಾರ ರತ್ನ’ ಪ್ರಶಸ್ತಿಯನ್ನು (Sahakara Ratna Award) ಪ್ರದಾನ ಮಾಡಲಾಯಿತು. ಕೆಂಗೇರಿ ಉಪನಗರದ ಗಣೇಶ ಮೈದಾನದಲ್ಲಿ ಹಮ್ಮಿಕೊಂಡಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿದರು.

ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಗೋಪೂಜೆ ನೆರವೇರಿಸಿ ಸಹಕಾರಿ ಧ್ವಜಾರೋಹಣ ಮಾಡಲಾಯಿತು. ಇದೇ ವೇಳೆ ಯಶಸ್ವಿನಿ ಯೋಜನೆಯ ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ್ ವಿತರಿಸಲಾಯಿತು. ಬಳಿಕ ಸಹಕಾರ ಪತ್ರಿಕೆ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ | Bharatiya Janata Party | ಬೃಹತ್‌ ನವಶಕ್ತಿ ಸಮಾವೇಶಕ್ಕೆ ಫುಲ್‌ ರೆಡಿ, ವೇದಿಕೆಯಲ್ಲೇ ವಾಲ್ಮೀಕಿ ಪುತ್ಥಳಿ

ನಂತರ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಹಕಾರ ಕ್ಷೇತ್ರದಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಸಹಕಾರ ಕ್ಷೇತ್ರ ಬಹಳ ದೊಡ್ಡ ಕ್ಷೇತ್ರ. ಸಹಕಾರಿ ರತ್ನ ಪ್ರಶಸ್ತಿ ಪಡೆದ ಹಿರಿಯರು, ಸಹಕಾರಿ ಕ್ಷೇತ್ರದ ಏಳಿಗೆಗೆ ಅಪಾರವಾಗಿ ಶ್ರಮಿಸಿದ್ದಾರೆ ಎಂದರು.

ಸಹಕಾರಿ ಕ್ಷೇತ್ರದಲ್ಲಿನ ಸವಾಲುಗಳನ್ನು ಮೆಟ್ಡಿನಿಂತು ಜನಜೀವನಕ್ಕೆ ಬೇಕಾದ ಕೊಡುಗೆಗಳನ್ನು ಕೊಡಲು ಸಹಕಾರಿ ಸಪ್ತಾಹ ಕಾರ್ಯಕ್ರಮ ಸಹಕಾರಿಯಾಗಲಿ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಉತ್ತಮ ಸಲಹೆಗಳನ್ನು ನೀಡಲು ಈ ಸಹಕಾರ ಸಪ್ತಾಹ ಕಾರ್ಯಕ್ರಮ ಸಾಕ್ಷಿಯಾಗಬೇಕು. ಸಹಕಾರಿ ಸಂಘಗಳು ಜನತೆಯ ವಿಶ್ವಾಸ ಗಳಿಸುವುದರ ಜೊತೆಗೆ ಭಾವನಾತ್ಮಕ ಸಂಬಂಧ ಹೊಂದಿವೆ ಎಂದು ಹೇಳಿದರು.

ಸಹಕಾರಿ ಸಂಘಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ, ರಾಜ್ಯದ 6 ಸಾವಿರಕ್ಕಿಂತ ಹೆಚ್ಚು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ, ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ಸಹಾಯ, ಯಶಸ್ವಿನಿ ಯೋಜನೆ ಮರುಜಾರಿ, 33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಸಾಲ ವಿತರಣೆಗೆ ಸೋಮಶೇಖರ್ ಅವರು ಸಾಕಷ್ಟು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ನ.14ರಿಂದ 20ರವರೆಗೆ ಪ್ರತಿ ವರ್ಷ ಏಳು ದಿನಗಳ ಕಾಲ ಸಹಕಾರ ಸಪ್ತಾಹ ಆಚರಣೆ ಮಾಡಲಾಗುತ್ತದೆ. 20 ವರ್ಷಕ್ಕೂ ಹೆಚ್ಚು ಕಾಲದಿಂದ ಸಹಕಾರ ಸಪ್ತಾಹ ಮಾಡಿಕೊಂಡು ಬಂದಿದ್ದೇನೆ. ಸಹಕಾರ ಮಹಾಮಂಡಳ ಮಾತೃ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಸಹಕಾರಿ ಕ್ಷೇತ್ರವನ್ನು ಮುನ್ನಡೆಸುವಲ್ಲಿ ಜಿ.ಟಿ.ದೇವೇಗೌಡ ಅವರು ಸಾಕಷ್ಟು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸಹಕಾರದಿಂದ ಸಹಕಾರ ಸಚಿವರಾಗಿ ಕೆಲಸ ಮಾಡುತ್ತಿದ್ದೇನೆ. ಬಸವರಾಜ್ ಬೊಮ್ಮಾಯಿ ಅವರ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಅತಿಹೆಚ್ಚು ಸಾಲ ನೀಡಿದೆ. ನಮ್ಮ ನೆಚ್ಚಿನ ನಾಯಕರಾದ ಬಿ.ಎಸ್. ಯಡಿಯೂರಪ್ಪ ಅವರು 5700 ಕೋಟಿ ರೂ. ಸಾಲಮನ್ನಾ ಮಾಡಿದ್ದರು ಎಂದು ತಿಳಿಸಿದರು.

ಯಶಸ್ವಿನಿ ಯೋಜನೆಯನ್ನು ಬಿಜೆಪಿ ಸರ್ಕಾರ ಅದನ್ನು ಮರುಜಾರಿ ಮಾಡಿದೆ. ಈ ಮೂಲಕ ಲಕ್ಷಾಂತರ ರೈತರಿಗೆ ಅನುಕೂಲ ಆಗಲಿದೆ. ಹಾಲು ಪೂರೈಸುವ ರೈತರಿಗೆ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಮುಖಾಂತರ
ಸಾಲಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಯಶವಂತಪುರ ಕ್ಷೇತ್ರದ ಡಾಂಬರೀಕರಣಕ್ಕೆ 200 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ರಾಜಕಾಲುವೆ ಸಮಸ್ಯೆ ಬಗೆಹರಿಸಲು 120 ಕೋಟಿ ಅನುದಾನ ಬಿಡುಗಡೆ ಆಗಿದೆ. ವಿಶ್ವೇಶ್ವರಯ್ಯ, ಬನಶಂಕರಿ 6ನೇ ಹಂತದ ಅಭಿವೃದ್ಧಿಗೆ 208 ಕೋಟಿ ಹಣ ಬಿಡುಗಡೆಯಾಗಿದೆ. ಕಾವೇರಿ ನೀರು ಪೂರೈಕೆ ಕಾಮಗಾರಿ ಆರಂಭವಾಗಿದೆ. ಮಂಚನಬೆಲೆಯಿಂದ 72 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಕಾಮಗಾರಿ ಕೈಗೆತ್ತುಕೊಳ್ಳಲಾಗಿದೆ ಎಂದು ಹೇಳಿದರು. ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಸೇರಿ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ | Voter Data | ಮತದಾರರ ಪಟ್ಟಿಯಲ್ಲಿ ಅಕ್ರಮ ಕುರಿತು ಸಿಎಂ ಬೊಮ್ಮಾಯಿ ಸ್ಪಷ್ಟನೆ; ಅವರು ಹೇಳಿದ್ದೇನು?

Exit mobile version