Site icon Vistara News

Yellapur News: ಯಲ್ಲಾಪುರದಲ್ಲಿ ಡಿ. 9, 10 ರಂದು ಜಿಲ್ಲಾ ಮಟ್ಟದ ಸಾಹಿತ್ಯ-ಗಮಕ ಅಧಿವೇಶನ

sahitya and gamaka adhiveshana

ಯಲ್ಲಾಪುರ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ (Akhil Bharatiya Sahitya Parishad) ಶಿರಸಿ ಜಿಲ್ಲಾ ಘಟಕ, ಅ.ಭಾ.ಸಾ.ಪ ಯಲ್ಲಾಪುರ ಸಮಿತಿ ಹಾಗೂ ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷದ್‌ ವತಿಯಿಂದ ಡಿಸೆಂಬರ್‌ 9 ಮತ್ತು 10 ರಂದು ಎರಡು ದಿನಗಳ ಜಿಲ್ಲಾ ಮಟ್ಟದ ʼಸಾಹಿತ್ಯ ಮತ್ತು ಗಮಕ ಅಧಿವೇಶನʼವನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಎಪಿಎಂಸಿ ಅಡಿಕೆ ಭವನದಲ್ಲಿ (Yellapur News) ಆಯೋಜಿಸಲಾಗಿದೆ.

ಈ ಅಧಿವೇಶನದಲ್ಲಿ ವೈಚಾರಿಕ ಗೋಷ್ಠಿ, ಸಮ್ಮಾನ, ಪ್ರಶಸ್ತಿ ವಿತರಣೆ, ಬಹುಭಾಷಾ ಕವಿಗೋಷ್ಠಿ, ತಾಳಮದ್ದಳೆ, ಗಮಕ ವಾಚನ, ಗಮಕ ಗೋಷ್ಠಿ, ಕವನ ಸಂಕಲನ ಬಿಡುಗಡೆ, ಪ್ರಸಿದ್ಧ ಕವಿಗಳ ಕಾವ್ಯ ಗಾಯನ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.

ಉದ್ಘಾಟನಾ ಸಮಾರಂಭ

ಡಿ.9ರಂದು ಬೆಳಗ್ಗೆ 9.45 ರಿಂದ 11.30 ರವರೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೆಂಗಳೂರಿನ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ ಉದ್ಘಾಟನೆ ನೆರವೇರಿಸಲಿದ್ದು, ಶಿರಸಿಯ ಜನಮಾಧ್ಯಮ ದೈನಿಕದ ಗೌರವ ಸಂಪಾದಕ ಅಶೋಕ ಹಾಸ್ಯಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಅಭ್ಯಾಗತರಾಗಿ ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷತ್ತು ಅಧ್ಯಕ್ಷೆ ಗಂಗಮ್ಮಾ ಕೇಶವಮೂರ್ತಿ, ಅ.ಭಾ.ಸಾ.ಪ. ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ ನರೂರು, ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಆಗಮಿಸಲಿದ್ದಾರೆ. ಮಲೆನಾಡು ಕೃಷಿ ಸಹಕಾರ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಅ.ಭಾ.ಸಾ.ಪ ಶಿರಸಿ ಕಾರ್ಯಕಾರಿ ಸದಸ್ಯ ಜಗದೀಶ ಬಂಡಾರಿ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ | Prerane Column : ವಿದ್ಯಾಭ್ಯಾಸ ಎಂದರೆ ದುಡ್ಡು ಮಾಡುವ ದಂಧೆಯ ಅಡಿಪಾಯವೇ?

ಗಮಕ ವಾಚನ

ಬೆಳಗ್ಗೆ 11.45ರಿಂದ ಮಧ್ಯಾಹ್ನ 12.45ರವರೆಗೆ ʼಜೈಮಿನಿ ಭಾರತದ ಯಮನ ವಿವಾಹʼ ಗಮಕ ವಾಚನ ನಡೆಯಲಿದೆ. ಬೆಂಗಳೂರಿನ ಗಂಗಮ್ಮಾ ಕೇಶವ ಮೂರ್ತಿ ಗಮಕ ವಾಚನ ಮಾಡಲಿದ್ದು, ವಿನಾಯಕ ಶಿವಮೊಗ್ಗ ವ್ಯಾಖ್ಯಾನ ನೀಡಲಿದ್ದಾರೆ. ಈ ವೇಳೆ ವೆಂಕಟರಮಣ ಮಠ ಅಧ್ಯಕ್ಷ ವಿನಾಯಕ ಪೈ, ಪ್ರಖ್ಯಾತ ಕಾಷ್ಠ ಕಲಾವಿದ ಸಂತೋಷ ಗುಡಿಗಾರ ಉಪಸ್ಥಿತರಿರಲಿದ್ದಾರೆ.

ಸ್ವರ್ಣಿಮ ಭಾರತಿ ಸಾಹಿತ್ಯ ಸಮ್ಮಾನ್, ಶ್ರೀ ವನರಾಗ ಶರ್ಮಾ ಪ್ರಶಸ್ತಿ ಪ್ರದಾನ

ಮಧ್ಯಾಹ್ನ 12.45ರಿಂದ 1.30ರವರೆಗೆ ಸ್ವರ್ಣಿಮ ಭಾರತಿ ಸಾಹಿತ್ಯ ಸಮ್ಮಾನ್, ಶ್ರೀ ವನರಾಗ ಶರ್ಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. 2021ನೇ ಸಾಲಿನ ಪ್ರಶಸ್ತಿಯನ್ನು ಟಿ.ಎಂ.ರಮೇಶ ಸಿದ್ದಾಪುರ (ದಶಕದ ಕಥೆಗಳು ಕಥಾ ಸಂಕಲನ), ಡಾ. ಶೋಭಾ ನಾಯಕ ಬೆಳಗಾವಿ (ಶಯ್ಯಾಗೃಹದ ಸುದ್ದಿಗಳು ಕವನ ಸಂಕಲನ) ಮತ್ತು 2022ನೇ ಸಾಲಿನ ಪ್ರಶಸ್ತಿಯನ್ನು ಗಂಗಾಧರ ಕೊಳಗಿ ಸಿದ್ದಾಪುರ (ಮಿಸ್ಟ್‌ಕಾಲ್‌ ಕಥಾ ಸಂಕಲನ), ಡಾಲಿ ವಿಜಯಕುಮಾರ ಪಾವಗಡ (ನೆಲ್ಲು ಎಸೆಯಬೇಡ ಕವನ ಸಂಕಲನ) ಅವರಿಗೆ ಪ್ರದಾನ ಮಾಡಲಾಗುತ್ತದೆ.

ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಮಾತೃಭೂಮಿ ಸೇವಾ ಪ್ರತಿಷ್ಠಾನ ಅಧ್ಯಕ್ಷ ಶ್ರೀರಂಗ ಕಟ್ಟಿ, ನಾಗರೀಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಉಪಸ್ಥಿತರಿರಲಿದ್ದಾರೆ. ನಂತರ 1.30 ರಿಂದ 2.30ರವರೆಗೆ ಭೋಜನ ವಿರಾಮ ಇರಲಿದೆ.

ಗಮಕ ಗೋಷ್ಠಿ, ಸಾಹಿತ್ಯ ಗೋಷ್ಠಿ, ಗಮಕ ವಾಚನ

ಮಧ್ಯಾಹ್ನ 2.30ರಿಂದ 3.15ರವರೆಗೆ ಗಮಕ ಗೋಷ್ಠಿ ಇರಲಿದೆ. ಗಂಗಮ್ಮಾ ಕೇಶವ ಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರಿನ ತೆಕ್ಕೆರೆ ಸುಬ್ರಹ್ಮಣ್ಯ ಭಟ್ಟ, ಎಂ.ಎಸ್.ವಿನಾಯಕ ಶಿವಮೊಗ್ಗ ವ್ಯಾಖ್ಯಾನ ನೀಡಲಿದ್ದಾರೆ.

ಮಧ್ಯಾಹ್ನ 3.15ರಿಂದ 4.15ಕ್ಕೆ ʼಸಂಸ್ಕೃತ ಸಾಹಿತ್ಯದಲ್ಲಿ ಪರಿಸರʼ ವಿಷಯದ ಕುರಿತು ಸಾಹಿತ್ಯ ಗೋಷ್ಠಿ ನಡೆಯಲಿದೆ. ವಿದ್ವಾನ್ ರಾಜಶೇಖರ ಧೂಳಿ ಅಧ್ಯಕ್ಷತೆ ವಹಿಸಲಿದ್ದು, ಡಾ. ನವೀನ ಗಂಗೋತ್ರಿ ಕೊಯಿಮುತ್ತೂರು ಉಪನ್ಯಾಸ ನೀಡಲಿದ್ದು, ಯಲ್ಲಾಪುರದ ವೈಟಿಎಸ್‌ಎಸ್‌ ಅಧ್ಯಕ್ಷ ರವಿ ಶ್ಯಾನಭಾಗ, ಪ್ರಾ.ಶಾ.ಶಿ.ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ ಉಪಸ್ಥಿತರಿರಲಿದ್ದಾರೆ.

ನಂತರ 4.15ರಿಂದ 5.15ರವರೆಗೆ ಗಮಕ ವಾಚನ ನಡೆಯಲಿದ್ದು, ತೆಕ್ಕೆರೆ ಸುಬ್ರಹ್ಮಣ್ಯ ಭಟ್ಟ ಗಮಕ ವಾಚನ ಮಾಡಲಿದ್ದು, ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಾ ಜಿ.ಎಲ್.ಹೆಗಡೆ ಕುಮಟಾ ವ್ಯಾಖ್ಯಾನ ನೀಡಲಿದ್ದಾರೆ. ವಿಶ್ರಾಂತ ತಹಸೀಲ್ದಾರ್ ಡಿ.ಜಿ.ಹೆಗಡೆ, ಯಲ್ಲಾಪುರದ ತಂಗ ಸಹ್ಯಾದ್ರಿ ಅಧ್ಯಕ್ಷ ಡಿ.ಎನ್.ಗಾಂವ್ಕರ ಉಪಸ್ಥಿತರಿರಲಿದ್ದಾರೆ.

ತಾಳಮದ್ದಳೆ

ಸಂಜೆ 5.30ಕ್ಕೆ ವಾಮನ ಚರಿತ್ರೆ ತಾಳಮದ್ದಳೆ ಇರಲಿದ್ದು, ಹಿಮ್ಮೇಳದಲ್ಲಿ ವಿದ್ವಾನ್‌ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ, ನರಸಿಂಹ ಹಂಡ್ರಮನೆ, ಅರ್ಥದಾರಿಗಳಾಗಿ ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ, ಪ್ರೊ. ಎಂ.ಎನ್.ಹೆಗಡೆ, ವಿದ್ವಾನ್ ನಾರಾಯಣ ದೇಸಾಯಿ ಡಾ. ಡಿ.ಕೆ.ಗಾಂಕರ ಭಾಗವಹಿಸಲಿದ್ದಾರೆ.

ಡಿ. 10ರ ಕಾರ್ಯಕ್ರಮಗಳ ವಿವರ

ಬಹಭಾಷಾ ಕವಿಗೋಷ್ಠಿ

ಡಿ. 10ರಂದು ಬೆಳಗ್ಗೆ 9.30ರಿಂದ 10.30ಕ್ಕೆ ಬಹುಬಾಷಾ ಕವಿಗೋಷ್ಠಿ ನಡೆಯಲಿದೆ. ಮೈಸೂರಿನ ಪತ್ರಕರ್ತರು, ಸಾಹಿತಿ ಶಿವರಂಜಿನಿ ಶಿವಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಯಲ್ಲಾಪುರ ಕಸಾಪ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ, ಅಭಾಸಾಪ ಜಿಲ್ಲಾ ಕಾರ್ಯದರ‍್ಶಿ ಕೃಷ್ಣ ಪದಕಿ, ನಾಟಕ ರಚನಾಕಾರ ಬಿ.ವಿ.ಕೋಮಾರ ಉಪಸ್ಥಿತರಿರಲಿದ್ದಾರೆ. ಕವಿಗೋಷ್ಠಿಯಲ್ಲಿ ಸುಮಾರು 35 ಕವಿಗಳು ಕವನ ಸಾದರಪಡಿಸಲಿದ್ದಾರೆ.

ಗಮಕ ವಾಚನ

ಬೆಳಗ್ಗೆ 11. 45ರಿಂದ 12. 45ಕ್ಕೆ ಗಮಕ ವಾಚನ ನಡೆಯಲಿದೆ. ಮುಕ್ತಾ ಶಂಕರ ಗಮಕ ವಾಚನ ಮಾಡಲಿದ್ದು, ಪ್ರಶಾಮತ ಮೂಡಲಮನೆ ವ್ಯಾಖ್ಯಾನ ನೀಡಲಿದ್ದಾರೆ. ಯಲ್ಲಾಪುರ ಸ.ನೌ. ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ಪ್ರಾ.ಶಾ.ಶಿ.ಸಂ ಅಧ್ಯಕ್ಷ ಆರ್‌.ಆರ್‌.ಭಟ್ಟ ಉಪಸ್ಥಿತರಿರಲಿದ್ದಾರೆ.

12.45ರಿಂದ 1.30 ರವರೆಗೆ ʼಪರಿಸರ ಹೋರಾಟದಲ್ಲಿ ಸಾಹಿತ್ಯʼ ವಿಷಯ ಕುರಿತು ಗೋಷ್ಠಿ ನಡೆಯಲಿದೆ. ವೈಚಾರಿಕ ಪ್ರಮೋದ ಹೆಗಡೆ ಅಧ್ಯಕ್ಷತೆ ವಹಿಸಲಿದ್ದು, ಪರಿಸರ ತಜ್ಞ ಡಾ.ಕೇಶವ ಕೂರ್ಸೆ ಉಪನ್ಯಾಸ ನೀಡಲಿದ್ದು, ಬೀರಣ್ಣ ನಾಯಕ ಮೊಗಟಾ,‌ ವಿಕಾಸ ಅರ್ಬನ್‌ ಬ್ಯಾಂಕ್ ಅಧ್ಯಕ್ಷ ಮುರುಳಿ ಹೆಗ್ಗಡೆ ಉಪಸ್ಥಿತರಿರಲಿದ್ದಾರೆ.

ಪ್ರಸಿದ್ಧ ಕವಿಗಳ ಕಾವ್ಯಗಾಯನ

ಮಧ್ಯಾಹ್ನ 2.30ರಿಂದ 3ರವರೆಗೆ ಪ್ರಸಿದ್ಧ ಕವಿಗಳ ಕಾವ್ಯ ಗಾಯನ ಇರಲಿದೆ. ಸಿಂದೂರ ಎಂ ಹೆಗಡೆ, ಶ್ರೀರಾಮ ಭಟ್ಟ, ಪ್ರಭಾತ ಭಟ್ಟ. ಹರ್ಷಿತಾ ಭಟ್ಟ, ಪ್ರಣತಿ ಮೆಣಸುಮನೆ. ಕೌಸ್ತುಭ ಭಟ್ಟ. ತೇಜಸ್ ಹೆಗಡೆ, ಪ್ರಸಾದಿನಿ ಭಟ್ಟ ಅವರು ಕಾವ್ಯ ಗಾಯನ ಸಾದರಪಡಿಸಲಿದ್ದಾರೆ. ಆರ್.ಎನ್. ದುಂಡಿ, ಸ.ಸೇ.ಸ.ಸಂಘದ ಅಧ್ಯಕ್ಷ ಉಮೇಶ ಭಾಗ್ವತ ಉಪಸ್ಥಿತರಿರುವರು. ನಂತರ 3 ರಿಂದ 4ಗಂಟೆವರೆಗೆ ಗಮಕಿ ಭಾರತಿ ಭಟ್ಟ ನಿರ್ದೇಶನದಲ್ಲಿ ಗಮಕ ರೂಪಕ ಗಿರಿಜಾ ಕಲ್ಯಾಣ ನಡೆಯಲಿದೆ.

ಸಮಾರೋಪ ಸಮಾರಂಭ

ಸಂಜೆ 4.10ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಅಭಾಸಾಪ ರಾಜ್ಯ ಉಪಾಧ್ಯಕ್ಷ, ವಿಶ್ವದರ್ಶನ ಶಿಕ್ಷಣ ಸಂಸ್ಥೆ‌ ಅಧ್ಯಕ್ಷ, ವಿಸ್ತಾರ ನ್ಯೂಸ್‌ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ಚಿಂತಕ, ಬರಹಗಾರ ರೋಹಿತ್‌ ಚಕ್ರತೀರ್ಥ ಸಮಾರೋಪ ನುಡಿಗಳನ್ನಾಡಲಿದ್ದಾರೆ.

ಯಲ್ಲಾಪುರ ಟಿಎಂಎಸ್‌ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಪಿಕುಂಬ್ರಿ, ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ, ವಜ್ರಳ್ಳಿ ಸರ್ವೋದಯ ಶಿಕ್ಷಣ ಸಮಿತಿ ಅಧ್ಯಕ್ಷ ಡಿ. ಶಂಕರ ಭಟ್ಟ, ಅಭಾಸಾಪ ಕಾರವಾರದ ಜಿಲ್ಲಾ ಸಂಯೋಜಕ ರಾಜೇಂದ್ರ ಭಟ್ಟ, ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರೌ.ಶಾ.ಸ.ಪಿ.ಸಂಘ ಅಧ್ಯಕ್ಷ ಅಜಯ ನಾಯಕ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ | ದಶಮುಖ ಅಂಕಣ: ಬೆಳಗೆಂಬ ಬೆರಗು!

ಉತ್ತರ ಕನ್ನಡ ಗಮಕ ಕಲಾ ಪರಿಷತ್ತು ಅಧ್ಯಕ್ಷರಾದ ಮುಕ್ತಾ ಶಂಕರ, ಅ.ಭಾ.ಸಾ.ಪ ಶಿರಸಿ ಜಿಲ್ಲಾ ಸಂಯೋಜಕ ಗಣಪತಿ ಬೋಳಗುಡ್ಡೆ, ಜಿಲ್ಲಾ ಉಪಾಧ್ಯಕ್ಷ ಟಿ.ಶಂಕರ ಭಟ್ಟ, ಅ.ಭಾ.ಸಾ.ಪ ಯಲ್ಲಾಪುರ ಸಮಿತಿ ಅಧ್ಯಕ್ಷ ಗಣಪತಿ ಕಂಚಿಪಾಲ, ಕಾರ್ಯದರ್ಶಿ ಶ್ರೀರಾಮ ಲಾಲಗುಳಿ, ಸಹ ಕಾರ್ಯದರ್ಶಿ ಚಂದ್ರಶೇಖರ ಸಿ.ಎಸ್ ಮತ್ತಿತರರು ಭಾಗವಹಿಸಲಿದ್ದಾರೆ.

Exit mobile version