Site icon Vistara News

Sahitya Sammelana: ಜಾತಿ, ಧರ್ಮ ಮೀರಿರುವುದೇ ಸಾಹಿತ್ಯ: ಎಸ್.ಜಿ. ಸಿದ್ದರಾಮಯ್ಯ

sahitya sammelana shivamogga

#image_title

ಶಿವಮೊಗ್ಗ: ಸಾಹಿತ್ಯವೆಂಬುದು (Sahitya Sammelana) ಜಾತಿ ಧರ್ಮಗಳನ್ನು ಮೀರಿದೆ. ನೋವುಂಡವರ ನೆಲೆಗೆ ಹತ್ತಿರವಾಗಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಹಿತ್ಯಕ್ಕೆ ಭಾಷೆ ಎಂಬುದು ನೆಪ. ಅದರೊಳಗಿರುವ ವಿಶ್ವಕ್ಕೆ ಯಾವುದೇ ಅಡತಡೆಗಳಿಲ್ಲ. ಅದಕ್ಕಾಗಿಯೇ ವಾಲ್ಮೀಕಿ, ಟಾಲ್‌ಸ್ಟಾಯ್ ತಮ್ಮ ಸಾಹಿತ್ಯದ‌ ಮೂಲಕ ಹತ್ತಿರವಾಗುತ್ತಾರೆ. ಸಾಹಿತ್ಯವು ಸೋತವರಿಗೆ ಸಾಂತ್ವನ ನೀಡುತ್ತದೆ‌. ಸಂಸ್ಕೃತಿ, ಸಾಹಿತ್ಯ, ಕ್ರೀಡೆ ಎಲ್ಲರನ್ನೂ ಒಳಗೊಳ್ಳುವ ಶಕ್ತಿಯನ್ನು ಹೊಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕೆಲವರಿಗೆ ಸೀಮಿತವಾಗಿದ್ದ ಸಾಹಿತ್ಯವನ್ನು, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯ ಮೂಲಕ ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವ ಸಾಕ್ಷಿ ಪ್ರಜ್ಞೆ ಮೂಡಿಸಿದರು ಎಂದರು.

ಇದನ್ನೂ ಓದಿ: Crocodile attack: ರಾಯಚೂರಿನಲ್ಲಿ ಬಾಲಕನ ಮೇಲೆ ಮೊಸಳೆ ದಾಳಿ; ಸ್ಥಳೀಯರ ಸಮಯಪ್ರಜ್ಞೆಯಿಂದ ಬಚಾವ್‌

ದುಸ್ತರ ಕಾಲಘಟ್ಟದಲ್ಲಿ ಅದನ್ನು ಎದುರಿಸುವ ಮನಸ್ಸುಗಳನ್ನು ಬೆಂಬಲಿಸದಿದ್ದಲ್ಲಿ ಅದು ನಾವು ಮಾಡಿದ ದ್ರೋಹದಂತಾಗುತ್ತದೆ. ಜಾಗತಿಕ ನೆಲೆಯೊಳಗೆ ಎದುರಿಸುತ್ತಿರುವ ಕನ್ನಡದ‌ ಸಮಸ್ಯೆಗಳ ಬಗ್ಗೆ ಮುಖಾಮುಖಿ ಚರ್ಚೆಗಳ ಅವಶ್ಯಕತೆಯಿದೆ. ಗಂಭೀರವಾದ ವಿಚಾರಗಳ ಚರ್ಚೆ ಸಾಹಿತ್ಯ ಸಮ್ಮೇಳನದ ಘನತೆ ಹೆಚ್ಚಿಸಿದೆ. ಅಧ್ಯಾಪಕರು ಶಿಕ್ಷಣದ ಬಗ್ಗೆ ಚರ್ಚಿಸುವ ಗೋಷ್ಠಿಗಳಲ್ಲಿ ಹೆಚ್ಚು ಭಾಗವಹಿಸಬೇಕಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಿಭಾಯಿಸಬೇಕಾದ ಕೌಶಲ್ಯತೆ ರೂಢಿಸಿಕೊಳ್ಳಬೇಕಿದೆ. ಸಾಹಿತ್ಯ ಸಮ್ಮೇಳನದ ಚರ್ಚಿತ ವಿಚಾರಗಳನ್ನು ಕನ್ನಡದ ಮನಸ್ಸುಗಳು ಆತ್ಮಾವಲೋಕನ ನಡೆಸಬೇಕಿದೆ ಎಂದು ಹೇಳಿದರು‌.

ಸಮ್ಮೇಳನಾಧ್ಯಕ್ಷ ಲಕ್ಷ್ಮಣ್ ಕೊಡಸೆ ಮಾತನಾಡಿ, ಸಾಹಿತ್ಯ ಸಮ್ಮೇಳನ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಸಾರಸ್ವತ ಲೋಕದಿಂದ ಅನೇಕ ಗೌರವ ಪಡೆಯುವಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಖ್ಯ ಕಾರಣ ಎಂದು ಹೇಳಿದರು.

ಇದನ್ನೂ ಓದಿ: Karnataka Election: ವಿಧಾನಸಭೆಗೆ ಸ್ಪರ್ಧಿಸುವೆನೆಂದು ಪತ್ರ ಬರೆದ ಎಂಎಲ್‌ಸಿ ಆಯನೂರು ಮಂಜುನಾಥ್;‌ ಈಶ್ವರಪ್ಪಗೆ ಅಡ್ಡಗಾಲು?

ಮುಖ್ಯ ಅತಿಥಿ ಅರಣ್ಯ ಇಲಾಖೆ‌ಯ ನೌಕರರ ಮಹಾಮಂಡಲದ‌ ರಾಜ್ಯಾಧ್ಯಕ್ಷ ರಘುರಾಮ ದೇವಾಡಿಗ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಅವರು ಸಮ್ಮೇಳನಾಧ್ಯಕ್ಷ ಲಕ್ಷ್ಮಣ್ ಕೊಡಸೆ ಅವರನ್ನು ಸನ್ಮಾನಿಸಿದರು. ಶಿವಮೊಗ್ಗ ತಾಲೂಕು ಕಸಾಪ ಅಧ್ಯಕ್ಷೆ ಮಹಾದೇವಿ, ಶಿಕಾರಿಪುರ ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ರಘು, ಹೊಸನಗರ ತಾಲೂಕು ಕಸಾಪ ಅಧ್ಯಕ್ಷ ತಾ.ಮ.ನರಸಿಂಹ, ಭದ್ರಾವತಿ ತಾಲೂಕು ಕಸಾಪ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

Exit mobile version