Site icon Vistara News

Forest Encroachment : ಡೀಮ್ಡ್‌ ಫಾರೆಸ್ಟ್‌ ಒತ್ತುವರಿ ಮಾಡಿದ್ದ ಸಕಲೇಶಪುರ ರೆಸಾರ್ಟ್‌ಗೆ ಬೀಗ!

Sakleshpura resort closed for Forest encroaching deemed forest Encroachment

ಹಾಸನ: ಬೆಂಗಳೂರಿನಂತಹ ಮಹಾನಗರ ಸೇರಿದಂತೆ ಪಟ್ಟಣದಲ್ಲಿರುವ ಪ್ರಕೃತಿ ಪ್ರಿಯರಿಗೆ ವೀಕೆಂಡ್‌ ಬಂತೆಂದರೆ ಸಾಕು ನಿಸರ್ಗದಲ್ಲಿ ಒಂದು ಟ್ರಿಪ್‌ ಹಾಕಿ ಬರುವ ಪರಿಪಾಠ ನಡೆದುಕೊಂಡು ಬಂದಿದೆ. ಇದರ ಭಾಗವಾಗಿ ಇಂದು ರಾಜ್ಯದ ನಾನಾ ಕಡೆ ಹೋಂ ಸ್ಟೇಗಳು, ರೆಸಾರ್ಟ್‌ಗಳು ತಲೆ ಎತ್ತುತ್ತಲೇ ಇವೆ. ಬರುವ ಪ್ರವಾಸಿಗರಿಗೆ ಇಷ್ಟವಾಗುವಂತೆ ವ್ಯವಸ್ಥೆಯನ್ನೂ ಮಾಡಲಾಗಿರುತ್ತದೆ. ಈಗ ಸಕಲೇಶಪುರ ತಾಲೂಕಿನ ಯಸಳೂರು ವಲಯದ ಮಂಕನಹಳ್ಳಿ ವ್ಯಾಪ್ತಿಯಲ್ಲಿ ಡೀಮ್ಡ್ ಫಾರೆಸ್ಟ್ ಒತ್ತುವರಿ (Forest Encroachment) ನಡೆಸಿದ ಆರೋಪದ ಮೇಲೆ ರೆಸಾರ್ಟ್‌ವೊಂದಕ್ಕೆ ಬೀಗ ಬಿದ್ದಿದೆ.

ಅರಣ್ಯ ಭೂಮಿ ಒತ್ತುವರಿ ಮಾಡಿ ರೆಸಾರ್ಟ್ ನಿರ್ಮಾಣ ಮಾಡಲಾಗಿತ್ತು. ಪಾಂಡು, ಶರಣಪ್ಪ ಪಾಟೀಲ್, ಪುಟ್ಟರಾಜ್ ಎಂಬುವವರು 3 ಎಕರೆ 17 ಗುಂಟೆ ಡೀಮ್ಡ್ ಫಾರೆಸ್ಟ್ ಅನ್ನು ಒತ್ತುವರಿ ಮಾಡಿ ರೆಸಾರ್ಟ್ ನಿರ್ಮಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಹಾಸನ ಅರಣ್ಯ ಇಲಾಖೆಯು, ಒತ್ತುವರಿಯಾಗಿದೆ ಎಂದು ವರದಿ ನೀಡಿದ್ದಲ್ಲದೆ, ತೆರವು ಮಾಡಬೇಕು ಎಂದು ಆದೇಶ ಮಾಡಿತ್ತು.

ರೆಸಾರ್ಟ್‌ಗೆ ಬೀಗ ಜಡಿದ ಅರಣ್ಯ ಇಲಾಖೆ ಅಧಿಕಾರಿಗಳು

ಮೇಲ್ಮನವಿ ಸಲ್ಲಿಸಿದ್ದ ರೆಸಾರ್ಟ್‌ ಮಾಲೀಕರು

ಒತ್ತುವರಿ ತೆರವು ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿದ ಆದೇಶಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಒತ್ತುವರಿದಾರರು, ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಅರಣ್ಯ ಸಂರಕ್ಷಣಾಧಿಕಾರಿ ಮೇಲ್ಮನವಿ ಪ್ರಾಧಿಕಾರದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮೇಲ್ಮನವಿ ಪ್ರಾಧಿಕಾರಕ್ಕೆ ಒತ್ತುವರಿಯಾಗಿರುವುದು ಮನವರಿಕೆಯಾಗಿರುವ ಹಿನ್ನೆಲೆಯಲ್ಲಿ ಒತ್ತುವರಿ ಡೀಮ್ಡ್ ಫಾರೆಸ್ಟ್ ತೆರವಿಗೆ ಆದೇಶ ನೀಡಿದೆ. ಅಲ್ಲದೆ, ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಅತಿಕ್ರಮ ಪ್ರವೇಶ, ಮೂಲರೂಪ ಹಾನಿಗೊಳಿಸಿದ್ದಾರೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Video Viral : ಈಶ್ವರಪ್ಪಗೆ ಸನ್ಮಾನಿಸಲು ಒಲ್ಲೆ ಎಂದ ಸಿಎಂ ಸಿದ್ದರಾಮಯ್ಯ; ಕುಳಿತಲ್ಲಿಂದ ಏಳಲೇ ಇಲ್ಲ!

ರೆಸಾರ್ಟ್‌ಗೆ ಬೀಗ ಜಡಿದ ಅರಣ್ಯ ಇಲಾಖೆ

ಈ ನಿಮಿತ್ತ ಹಾಸನ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಒತ್ತುವರಿಯನ್ನು ತೆರವು ಮಾಡಿದ್ದಾರೆ. ಒತ್ತುವರಿ ಪ್ರದೇಶಗಳಿಗೆ ತೆರಳಿ ಸೀಲ್‌ ಮಾಡಿದ್ದಾರೆ. ಡೀಮ್ಡ್ ಫಾರೆಸ್ಟ್ ಒತ್ತುವರಿ ತೆರವುಗೊಳಿಸಿದ ಡಿಎಫ್‌ಒ ರಮೇಶ್, ಎಸಿಎಫ್‌ಗಳಾದ ಪ್ರಭು, ಸುರೇಶ್ ಮತ್ತು ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Exit mobile version