ಬೆಂಗಳೂರು : ಗ್ರಾಮ ಸಹಾಯಕರ ಹುದ್ದೆಯನ್ನು ‘ಜನಸೇವಕ’ ಎಂದು ಮರುನಾಮಕರಣ ಮಾಡುವುದಾಗಿ ರಾಜ್ಯ ಬಜೆಟ್ನಲ್ಲಿ (karnataka budget 2023 ) ಸಿಎಂ ಬಸವರಾಜ್ ಬೊಮ್ಮಾಯಿ ಅವರು ಘೋಷಿಸಿದ್ದಾರೆ. ಇದೇ ವೇಳೆ ಅವರು ಅವರಿಗೆ ನೀಡುತ್ತಿರುವ ಮಾಸಿಕ ಗೌರವ ಧನವನ್ನು 13,000 ರೂ. ಗಳಿಂದ 14,000 ರೂ. ಗಳಿಗೆ ಹೆಚ್ಚಿಸಲಾಗುವುದು ಎಂದು ಪ್ರಕಟಿಸಿದರು.
ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ 2022-23ನೇ ಸಾಲಿಗೆ ದೇವಸ್ಥಾನಗಳ ಮತ್ತು ಮಠಗಳ ಜೀರ್ಣೋದ್ಧಾರ ಕಾಮಗಾರಿಗಳಿಗೆ ಒಟ್ಟು 425 ಕೋಟಿ ರೂ. ಅನುದಾನ ನೀಡುವುದಾಗಿ ಬಜೆಟ್ನಲ್ಲಿ ಘೋಷಿಸಲಾಯಿತು. 2 ವರ್ಷಗಳಲ್ಲಿ ರಾಜ್ಯದಲ್ಲಿನ ವಿವಿಧ ದೇವಸ್ಥಾನ ಮತ್ತು ಮಠಗಳ ಜೀರ್ಣೋದ್ಧಾರಕ್ಕಾಗಿ ನಮ್ಮ ಸರ್ಕಾರ 1,000 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಸಮಗ್ರವಾಗಿ ಅಭಿವೃದ್ಧಿಪಡಿಸುವುದಾಗಿ ಹೇಳಿತು.
ಅನುಭವ ಮಂಟಪದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳ ಇನಾಂ ಜಮೀನುಗಳ ವರ್ಷಾಶನವನ್ನು 48,000 ರೂ. ಗಳಿಂದ 60,೦೦೦ ರೂ. ಗಳಿಗೆ ಹೆಚ್ಚಿಸಲಾಗಿದ್ದು, ಈ ಸೌಲಭ್ಯದಿಂದ 3,721 ಸಂಸ್ಥೆಗಳಿಗೆ ಅನುಕೂಲವಾಗಲಿದೆ.
ಮಾದರಿ ಉಪ ನೋಂದಣಿ ಕಚೇರಿ
ರಾಜ್ಯದ ಎಲ್ಲಾ ಉಪನೋಂದಣಿ ಕಚೇರಿಗಳನ್ನು ಮಾದರಿ ಉಪನೋಂದಣಿ ಕಚೇರಿಗಳಾಗಿ ಪರಿವರ್ತಿಸಲಾಗುವುದು. ಮೊದಲನೇ ಹಂತದಲ್ಲಿ ಪ್ರಸಕ್ತ ಸಾಲಿನಲ್ಲಿ 8 ಕಚೇರಿಗಳನ್ನು ನಿರ್ಮಿಸುವ ಭರವಸೆ ನೀಡಲಾಗಿದೆ. ಕರ್ನಾಟಕ ರಾಜ್ಯದೆಲ್ಲೆಡೆ 7,363 ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿಯವರೆಗೆ 1.5 ಕೋಟಿ ನಾಗರಿಕ ಸೇವೆಗಳನ್ನು ಒದಗಿಸಲಾಗಿದೆ.
ಕೃಷಿ ಸಾಲ ವಿತರಣೆ ಸರಳ
ಹಣಕಾಸು ಸಂಸ್ಥೆಗಳನ್ನು FRUITS, ಕಾವೇರಿ ಮತ್ತು ಭೂಮಿ ತಂತ್ರಾಂಶದೊಂದಿಗೆ ಸಂಯೋಜಿಸುವ ಮೂಲಕ ಕೃಷಿ ಸಾಲ ವಿತರಣೆ ಪ್ರಕ್ರಿಯೆಯನ್ನು ಬಜೆಟ್ನಲ್ಲಿ ಸರಳೀಕರಿಸಲಾಗಿದೆ. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ತಂತ್ರಾಂಶದ ಅಭಿವೃದ್ಧಿಗಾಗಿ ಕ್ಲೌಡ್ ತಂತ್ರಜ್ಞಾನ ಆಧಾರಿತ 3ನೇ ಹಂತದ ದತ್ತಾಂಶ ಕೇಂದ್ರವನ್ನು 590 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತದೆ.
ರಾಜ್ಯದ ಸಾರಿಗೆ ಇಲಾಖೆಯ ವಾಹನ ಹಾಗೂ ಸಾರಥಿ ಸೇವೆಗೆ ಸಂಬಂಧಿಸಿದ 31 ಸೇವೆಗಳನ್ನು ಸಂಪರ್ಕ ರಹಿತವಾಗಿ ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ಒದಗಿಸಲಾಗುತ್ತಿದೆ. ಅಲ್ಲದೇ, ಕೇಂದ್ರ ಸರ್ಕಾರದ ಮಾದರಿಯಲ್ಲಿ ʻನೊಂದಾಯಿತ ವಾಹನಗಳ ನಾಶಪಡಿಸುವಿಕೆ ನೀತಿ-2022ʼನ್ನು (Registered Vehicle Scrapping Policy-2022) ಜಾರಿಗೊಳಿಸಿದೆ. ಕೇಂದ್ರದ ಸಹಭಾಗಿತ್ವದಲ್ಲಿ 22 ಕೋಟಿ ರೂ. ವೆಚ್ಚದಲ್ಲಿ Vehicle Location Tracking System (VLTS) ವ್ಯವಸ್ಥೆಯನ್ನು ಅನುಷ್ಠಾನಗೊಳ್ಳಲಿದೆ.
ಇದನ್ನೂ ಓದಿ : Karnataka Budget 2023: ಜೀವಸುಧೆಯಿಂದ ವಾತ್ಸಲ್ಯದವರೆಗೆ; ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಿಕ್ಕ ಯೋಜನೆಗಳು ಏನೇನು?
ವಕೀಲರ ಅರೋಗ್ಯಕ್ಕೆ ಕಾರ್ಪಸ್ ಫಂಡ್
ರಾಜ್ಯದ ವಕೀಲರಿಗೆ ಆರೋಗ್ಯ ಸೌಲಭ್ಯ ಕಾರ್ಯಕ್ರಮ ರೂಪಿಸಲು 100 ಕೋಟಿ ರೂ. ಕಾರ್ಪಸ್ ಫಂಡ್ ರಚಿಸಲು ರಾಜ್ಯ ಸರ್ಕಾರದಿಂದ ಶೇ. 50 ರಷ್ಟು ಮೊತ್ತ ನೀಡಲು ಬಜೆಟ್ನಲ್ಲಿ ಅನುಮೋದನೆ ನೀಡಲಾಗಿದೆ. ನ್ಯಾಯಾಂಗ ಕಟ್ಟಡಗಳ ಯೋಜನೆಯಡಿಯಲ್ಲಿ ಕಳೆದ 4 ವರ್ಷಗಳಲ್ಲಿ 580 ಕೋಟಿ ರೂ. ವೆಚ್ಚ ಭರಿಸಿದ್ದು, ಇದರಲ್ಲಿ ರಾಜ್ಯದ ಪಾಲು 397 ಕೋಟಿ ರೂ. ಗಳಾಗಿರುತ್ತದೆ. ಈ ಅವಧಿಯಲ್ಲಿ 39 ನ್ಯಾಯಾಂಗ ಕಟ್ಟಡಗಳನ್ನು ಪೂರ್ಣಗೊಳಿಸಲಾಗಿದೆ.