Site icon Vistara News

Fake Pesticide: ಗಂಗಾವತಿಯಲ್ಲಿ ನಕಲಿ ವಿಳಾಸ ಬಳಸಿ ಕಳಪೆ ಕೀಟ ನಾಶಕ ಮಾರಾಟ; 86 ಸಾವಿರ ರೂ. ಮೌಲ್ಯದ ಕೀಟ ನಾಶಕ ಜಪ್ತಿ

Fake Pesticide

#image_title

ಗಂಗಾವತಿ: ನಗರದಲ್ಲಿ ನಕಲಿ ವಿಳಾಸ ನೀಡಿ ಕಳಪೆ ಗುಣಮಟ್ಟದ ಕೀಟ ನಾಶಕವನ್ನು (Fake Pesticide) ತಯಾರಿಸಿ ಮಾರಾಟ ಮಾಡಿ ರೈತರಿಗೆ ವಂಚಿಸುತ್ತಿದ್ದ ಜಾಲವೊಂದನ್ನು ಭೇದಿಸುವಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಗಂಜ್ ಪ್ರದೇಶದಲ್ಲಿರುವ ಅಭಿಷೇಕ್ ಆಗ್ರೋಸ್ ಎಂಬ ಕೀಟನಾಶಕ ಮಾರಾಟ ಅಂಗಡಿಯ ಮೇಲೆ ಕೃಷಿ ಇಲಾಖೆಯ ಜಾಗೃತ ದಳ ವಿಭಾಗದ ಅಧಿಕಾರಿಗಳು ಮಂಗಳವಾರ ದಾಳಿ ಮಾಡಿ ಪ್ರಕರಣ ಪತ್ತೆ ಹಚ್ಚಿದ್ದಾರೆ.  

ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸಹಾಯಕ ಕೃಷಿ ನಿರ್ದೇಶಕ ನಿಂಗಪ್ಪ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ, ಅಕ್ರಮ, ನಕಲಿ ಕೀಟ ನಾಶಕ ತಯಾರಿಕೆ ಮತ್ತು ಮಾರಾಟ ಜಾಲವನ್ನು ಪತ್ತೆ ಹಚ್ಚಿ, ಅಂಗಡಿ ಮಾಲಿಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಕನಕಗಿರಿ ತಾಲೂಕಿನ ನವಲಿ ಹೋಬಳಿಯ ಆದಾಪುರದಲ್ಲಿ ಗ್ರೀನ್ ಕೆಮಿಕಲ್ ಎಂಬ ಕೀಟನಾಶಕ ತಯಾರಿಕಾ ಘಟಕದಿಂದ ಖರೀದಿಸಿದ್ದಾಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Road accident : ಆಯಿಲ್‌ ಟ್ಯಾಂಕರ್‌, ಕಾರಿನ ನಡುವೆ ಮುಖಾಮುಖಿ ಡಿಕ್ಕಿ: ಮೂವರು ಗೆಳೆಯರ ದುರ್ಮರಣ

ಪರಿಶೀಲನೆ ವೇಳೆ ನಕಲಿ ವಿಳಾಸ ಮತ್ತು ನಕಲಿ ಕಂಪನಿಯ ಹೆಸರು ಬಳಸಿರುವುದು ಪತ್ತೆಯಾಗಿದೆ. ಹೀಗಾಗಿ ಅಂಗಡಿ ಮಾಲಿಕರು ಬೇರೆ ಸ್ಥಳದಲ್ಲಿ ನಕಲಿ ಕೀಟನಾಶ ತಯಾರಿಸಿ ಇಲ್ಲಿಗೆ ತಂದು ಮಾರಾಟ ಮಾಡುತ್ತಿರುವುದು ದೃಢವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಜಾಗೃತ ದಳದ ಸಹಾಯಕ ನಿರ್ದೇಶಕ ನಿಂಗಪ್ಪ, ಅಭಿಷೇಕ್ ಆಗ್ರೋಸ್ ನಕಲಿ ಕಂಪನಿಯಿಂದ ಖರೀದಿಸಿದ್ದು ಎಂದು ಹೇಳಲಾದ 86 ಸಾವಿರ ರೂಪಾಯಿ ಮೌಲ್ಯದ 40 ಲೀಟರ್ ನಕಲಿ ಕೀಟನಾಶಕ ವಶಕ್ಕೆ ಪಡೆಯಲಾಗಿದೆ. ದಾಸ್ತಾನು ಜಪ್ತಿ ಮಾಡಿ ಕೃಷಿ ಇಲಾಖೆಯ ಕಾಯ್ದೆಯಡಿ ಅಂಗಡಿಯ ಮಾಲಿಕರ ಮೇಲೆ ಪ್ರಕರಣ ದಾಖಲು ಮಾಡಲಾಗುವುದು. ಇವರು ಗುಜರಾತ್‌ನಿಂದ ಕಚ್ಚಾವಸ್ತುಗಳನ್ನು ಖರೀದಿಸಿ ಕೀಟನಾಶಕ ತಯಾರಿಸಿ ಬೇರೆ ಹೆಸರಲ್ಲಿ ಮಾರಾಟ ಮಾಡುತ್ತಿರುವ ಸಂದೇಹ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.

Exit mobile version