ಬೆಂಗಳೂರು: ನಗರದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ, ಸಮನ್ವಯ ಸಮಿತಿ ಕನ್ನಡವೇ ಸತ್ಯ ಸಾಹಿತ್ಯ ದಾಸೋಹ ವೇದಿಕೆ ವತಿಯಿಂದ ‘ಪಲ್ಲಟ’ 27 ಲೇಖಕರ ಖೋ ಕಾದಂಬರಿಯನ್ನು (Pallata Novel) ಮುಖ್ಯ ಅತಿಥಿ ಜಯಶ್ರೀ ದೇಶಪಾಂಡೆ ಅವರು ಬಿಡುಗಡೆ ಮಾಡಿದರು .
ಇದನ್ನೂ ಓದಿ | Book Release: ನಿಲ್ಲು ನಿಲ್ಲೆ ಪತಂಗ ಮತ್ತು ಮಾಸ್ತಿ ಸಾಹಿತ್ಯ ಪರಿಚಯ ಪುಸ್ತಕ ಬಿಡುಗಡೆ
ನಂತರ ಪಲ್ಲಟ ಕಾದಂಬರಿಗೆ ಮುನ್ನುಡಿ ಬರೆದ ಎನ್.ಎಸ್. ಶ್ರೀಧರಮೂರ್ತಿ ಅವರು ಮಾತನಾಡಿ, ಖೋ ಎಂಬ ಪ್ರಯೋಗ ಮೊದಲು ಮನೋಹರ ಗ್ರಂಥ ಮಾಲೆಯಲ್ಲಿ ನಡೆದಿದ್ದು, ಅನೇಕ ಘಟಾನುಘಟಿ ಲೇಖಕರು ಅದರಲ್ಲಿ ಭಾಗಿಯಾಗಿದ್ದರು ಎಂಬುದನ್ನು ಸ್ಮರಿಸಿ, ತಾವು ಮಲ್ಲಿಗೆ ಮಾಸಪತ್ರಿಕೆ ಸಂಪಾದಕರಾಗಿದ್ದಾಗ ಖೋ ಪ್ರಯೋಗವನ್ನು ನೆನಪಿಸಿಕೊಂಡರು.
ಈ ಪಲ್ಲಟ ಕೃತಿಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಸಾಧನೆಯನ್ನು ಮಾಡಿರುವವರಿಂದ ಹಿಡಿದು ಈಗ ತಾನೇ ಬರೆಯಲು ಆರಂಭಿಸಿದವರೂ ಇದ್ದಾರೆ. ಈ ಅಂಶ ಒಟ್ಟು ಕಥೆಯ ಓಟದಲ್ಲಿ ಗಮನಾರ್ಹ ಪರಿಣಾಮ ಬೀರಿಲ್ಲ ಎನ್ನುವುದು ಪ್ರಯೋಗದ ಯಶಸ್ಸಿಗೆ ಸಾಕ್ಷಿಯಾಗಿದೆ. ಕಾದಂಬರಿಯಲ್ಲಿ ಮೂರು ತಲೆಮಾರುಗಳ ಹೋಲಿಕೆ , ಸಾಂಸ್ಕೃತಿಕ ಮತ್ತು ಆರ್ಥಿಕ ನೆಲೆಯ ಬೆಳವಣಿಗೆ ಇಂತಹ ಅಂಶಗಳು ಸೇರಿವೆ. ಖೋ ಕಾದಂಬರಿ ಬರೆಯುವಾಗ ವಹಿಸಬೇಕಾದ ಎಚ್ಚರಿಕೆಯ ಬಗ್ಗೆ ತಿಳಿಸಿ ಯಾವುದೇ ಕಾರ್ಯದ ಫಲಿತಾಂಶ ಮುಖ್ಯ ಎಂದರು.
ಇದನ್ನೂ ಓದಿ | Sunday Read: ಹೊಸ ಪುಸ್ತಕ: ಕಾಣೆಯಾಗಿದ್ದಾರೆ ಹುಡುಕಿ ಕೊಡಬೇಡಿ
ಸ್ನೇಹ ಬುಕ್ ಹೌಸ್‌ನ ಕೆ.ಬಿ.ಪರಶಿವಪ್ಪ ಅವರು ಮಾತನಾಡಿ, ಪುಸ್ತಕದ ಪ್ರತಿಗಳಿಗೆ ಉತ್ತಮ ಬೇಡಿಕೆ ಬರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಲೇಖಕರನ್ನು ಹೊರತುಪಡಿಸಿ ಎರಡು ಉತ್ತಮ ವಿಮರ್ಶೆ ಬರೆದವರಿಗೆ ಬಹುಮಾನ ಕೊಡುವುದಾಗಿ ಘೋಷಿಸಿದರು
ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರಧಾನ ಸಂಚಾಲಕರಾದ ಬೆಂ. ಶ್ರೀ. ರವೀಂದ್ರ ಅವರು ಸಮನ್ವಯ ಸಮಿತಿಯ ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳಿ, ಮಾರ್ಚ್ 11 ರಂದು ಶ್ರೀ ಪ್ರಧಾನ ಗುರುದತ್ತ ಅವರು ಬರೆದ ʼಎಚ್ಚೆಸ್ಕೆ ಬದುಕು ಬರೆಹʼ ಎಂಬ ಕೃತಿ ಇದೇ ಸ್ಥಳದಲ್ಲಿ ಬಿಡುಗಡೆಯಾಗುತ್ತಿದೆ ಎಂದು ಹೇಳಿದರು.
ಸಮನ್ವಯ ಸಮಿತಿ ಕನ್ನಡವೇ ಸತ್ಯ ವೇದಿಕೆಯ ಸದಸ್ಯ, ಖೋ ಕಾದಂಬರಿಯ ಲೇಖಕ ಗೋನಾವರ ಕಿಶನ್ ರಾವ್, ಜಿ.ವಿ. ಅರುಣ, ಶಾಂತ ನಾಗಮಂಗಲ ಹಾಗೂ ಶೃಂಗೇಶರ ಶರ್ಮ ಅವರು ಖೋ ಕಾದಂಬರಿ ಅಭಿಯಾನದಲ್ಲಿ ಪಾಲ್ಗೊಂಡ ತಮ್ಮ ಅನುಭವದ ಕುರಿತಂತೆ ಮಾತನಾಡಿದರು. ಪ್ರಧಾನ ಸಂಪಾದಕ ಕೆ.ಎನ್.ಮಹಾಬಲ ಅವರು ಖೋ ಕಾದಂಬರಿ ರೂಪುಗೊಂಡ ಬಗೆಯನ್ನು ಕೆಲವೇ ಮಾತುಗಳಲ್ಲಿ ತೆರೆದಿಟ್ಟರು.
ಮಾಲತಿ ಶ್ರೀನಿವಾಸನ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ರಾಧಿಕಾ ಗುಜ್ಜರ್ ಅವರು ಎಲ್ಲರನ್ನೂ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಕಾದಂಬರಿಯ ಪ್ರಧಾನ ಸಂಪಾದಕ ಕೆ.ಎನ್. ಮಹಾಬಲ ಹಾಗೂ ಕಾದಂಬರಿಯ ಮೊದಲ ಅಧ್ಯಾಯ ಬರೆದ ಗೋನವಾರ ಕಿಶನ್ ರಾವ್ ಉಪಸ್ಥಿತರಿದ್ದರು.