ಬಳ್ಳಾರಿ: ವಿಭಿನ್ನ ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ಕವಿ ಮನಸ್ಸುಗಳ ಸಂಗಮಕ್ಕೆ ಸಂಗಂ ವಿಶ್ವಕವಿ ಸಮ್ಮೇಳನದ ಮೂಲಕ ಗಣಿನಾಡು ವೇದಿಕೆಯಾಯಿತು, ಇದಕ್ಕೆ ಬಿಐಟಿಎಂ ಕಾಲೇಜ್ ಸಭಾಂಗಣ ಸಾಕ್ಷಿಯಾಯಿತು.
ಇಸ್ರೇಲ್, ಇರಾನ್ ಸೇರಿದಂತೆ ೧೫ ದೇಶಗಳ ಕವಿಗಳು, ಭಾರತದ ೨೩ ರಾಜ್ಯಗಳ ಕವಿಗಳು ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು. ತಮ್ಮ ಭಾಷೆಯಲ್ಲಿಯೇ ಕಾವ್ಯ ಪ್ರಸ್ತುತ ಪಡಿಸಿದರೂ, ಅದಕ್ಕೆ ಅನುವಾದದ ವ್ಯವಸ್ಥೆಯನ್ನು ಮಾಡಿದ್ದು ಕವಿ ಮನಸ್ಸುಗಳಿಗೆ ಕಾವ್ಯದ ಸುಧೆಯನ್ನು ಸವಿಯಲು ಅನುಕೂಲವಾಯಿತು.
ಮನಸ್ಸುಗಳನ್ನು ಒಟ್ಟುಗೂಡಿಸುವ ಶಕ್ತಿ ಸಾಹಿತ್ಯಕ್ಕಿದೆ
ಅನಾರೋಗ್ಯದ ಹಿನ್ನಲೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ್ ಕಂಬಾರರು ಆನ್‌ಲೈನ್ ಮೂಲಕವೇ ಮೂರು ದಿನಗಳ ಸಂಗಂ-ವಿಶ್ವಕವಿ ಸಮ್ಮೇಳನಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು. ಸಮ್ಮೇಳನಕ್ಕೆ ಶುಭ ನುಡಿಗಳನ್ನು ಆಡಿದ ಕಂಬಾರರವರು, ಯಾವುದೇ ಭಾಷೆಯ ಸಾಹಿತ್ಯದ ಬೆಳವಣಿಗೆ ಹಿಂದೆ ಮತ್ತೊಂದು ಭಾಷೆಯ ಪ್ರೇರಣೆ ಇದ್ದೇ ಇರುತ್ತದೆ. ಅದು ನೇರವಾಗಿ ಇರಬಹುದು ಅಥವಾ ಪರೋಕ್ಷವಾಗಿಯೂ ಇರಬಹುದು. ಸಾಹಿತ್ಯ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಪಡೆದುಕೊಂಡಿದ್ದು ಎಲ್ಲರನ್ನು ಒಳಗೊಳ್ಳುವ, ಎಲ್ಲವನ್ನು ತಮ್ಮದಾಗಿಸಿಕೊಳ್ಳುವ ಅಸ್ಮಿತೆ ಕಾವ್ಯ ಮತ್ತು ಸಾಹಿತ್ಯಕ್ಕಿದೆ. ಇಂದು ವಿಶ್ವದ ಎಲ್ಲ ಕವಿಗಳು ಜಾಗತಿಕ ಶಾಂತಿ, ನೆಮ್ಮದಿಗಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದರು.
೧೨ನೇ ಶತಮಾನದಲ್ಲಿ ಬಸವಾದಿ ಶರಣರು ವಚನಗಳ ಮೂಲಕ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಿದರು. ಎಲ್ಲ ಜನಗಳ ಒಗ್ಗೂಡುವಿಕೆಗೆ ವಚನಗಳು ಬಹು ಪ್ರಭಾವ ಬೀರಿದವು. ಹೀಗೆ ಒಗ್ಗೂಡಿಸುವ ಪ್ರಕ್ರಿಯೆಯಲ್ಲಿ ಸಾಹಿತ್ಯ ಬಹುದೊಡ್ಡ ಕಾರ್ಯ ನಿರ್ವಹಿಸುತ್ತಿದೆ. ಬಳ್ಳಾರಿಯಲ್ಲಿ ವಿಶ್ವಕವಿ ಸಮ್ಮೇಳನ ಆಯೋಜಿಸಿರುವುದು ಹೆಚ್ಚು ಸಂತಸ ತಂದಿದೆ. ವಿಶ್ವಮಾನವ ಕಲ್ಪನೆಯ ಆಶಯವನ್ನು ಸಮ್ಮೇಳನ ಹೊಂದಿದೆ ಎಂದರು.
ಕವಿಗೆ ದೇಶ, ಭಾಷೆಯ ಗಡಿಗಳಿಲ್ಲ
ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ವಿಶ್ವದ ನಾನಾ ದೇಶಗಳ ಕವಿಗಳು ಬಳ್ಳಾರಿಗೆ ಆಗಮಿಸಿ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವುದು ಹೆಚ್ಚು ಖುಷಿ ತಂದಿದೆ. ನನ್ನ ಮೂರು ದಶಕಗಳ ರಾಜಕೀಯ ಜೀವನದಲ್ಲಿ ಇಂತಹದೊಂದು ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿರಲಿಲ್ಲ. ಕವಿ ಎಂದರೆ ಸತ್ಯಕ್ಕಾಗಿ ಶೋಧನೆ ಮಾಡುವ ವ್ಯಕ್ತಿ. ಆತನಿಗೆ ದೇಶ, ಭಾಷೆಗಳ ಗಡಿಗಳಿಲ್ಲ. ಕವಿಗಳು ವಿಶ್ವ ಜೀವಿಗಳು ಇದ್ದಂತೆ. ಅವರಿಗೆ ಯಾವುದೇ ನಿರ್ಬಂಧಗಳಿಲ್ಲ. ರವಿ ಕಾಣದನ್ನು ಕವಿ ಕಾಣುತ್ತೇನೆ ಎಂಬ ನಾಣ್ಣುಡಿಯಂತೆ ಕವಿ ಅನೇಕ ಸಂಗತಿಗಳನ್ನು ಅಂತರ್ಗತ ಮಾಡಿಕೊಳ್ಳುತ್ತಾನೆ. ತಾನು ಕಂಡುಕೊಂಡಂತೆ ಅನೇಕ ಸತ್ಯ ಶೋಧನೆಗಳನ್ನು ಕಥೆ, ಕಾವ್ಯಗಳ ಮೂಲಕ ಸಮಾಜದ ಸ್ವಾಸ್ಥಕ್ಕಾಗಿ ಅರ್ಪಿಸುತ್ತಾನೆ. ಹೀಗಾಗಿಯೇ ಕವಿಗೆ ವಿಶ್ವದಲ್ಲಿ ಅತಿ ದೊಡ್ಡ ಮಾನ್ಯತೆ ಇದೆ ಎಂದರು.
ಬಿಐಟಿಎಂ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಯಶ್ವಂತ ಭೂಪಾಲ್, ಸಮ್ಮೇಳನ ರೂವಾರಿ ಹಿರಿಯ ಕವಿ ಎಚ್.ಎಸ್.ಶಿವಪ್ರಕಾಶ್, ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಆರ್.ಭೀಮಸೇನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಇಸ್ರೇಲ್‌ನ ಕವಯತ್ರಿ ದಿತಿ ರೊನೆನ್ ಇದ್ದರು. ಅರಿವು ಸಂಸ್ಥೆಯ ಮುಖ್ಯಸ್ಥ ಸಿರಿಗೇರಿ ಪನ್ನರಾಜ್ ಅಧ್ಯಕ್ಷತೆ ವಹಿಸಿದ್ದರು. ಡಾ.ಅರವಿಂದ ಪಾಟೀಲ್, ಡಾ.ಉಮಾಮಹೇಶ್ವರಿ ಗಡ್ಡಿ ಹಾಗೂ ಕವಿ ಅಜಯ್ ಬಣಕಾರ್ ಕಾರ್ಯಕ್ರಮ ನಿರ್ವಹಿಸಿದರು.ರಮೇಶ್ ಗಬ್ಬೂರ್ ಅವರು ಪ್ರಾರ್ಥನೆ ಗೀತೆ ಹಾಡಿದರು. ಮೊದಲ ದಿನ ೬ ಕವಿಗೋಷ್ಠಿಗಳು ನಡೆದಿದ್ದು,೨೦ ಜನ ಕವಿಗಳು ಕಾವ್ಯವಾಚನ ಮಾಡಿದರು.
ಹಿಂದಿನ ಸುದ್ದಿ | ಕವಿ ಸಮ್ಮೇಳನ | ಅ.21ರಿಂದ ಬಳ್ಳಾರಿಯಲ್ಲಿ ಸಂಗಂ ವಿಶ್ವ ಕವಿ ಸಮ್ಮೇಳನ, 17 ದೇಶಗಳ ಕವಿಗಳು ಭಾಗಿ, ಸಂಗಂ ಪುರಸ್ಕಾರ ಪ್ರದಾನ