ವಿಜಯಪುರ: ಜಗತ್ತೇ ಒಂದು ಕುಟುಂಬ, ಇಡೀ ವಿಶ್ವವೇ ಒಂದು ಮನೆ, ಇಡೀ ತ್ರಿಲೋಕವೇ ಒಂದು ದೇಶ ಎಂಬ ಉದಾತ್ತ ಭಾವನೆಯ ಪ್ರತಿರೂಪವೇ ನಮ್ಮ ಭಾರತೀಯ ಸಂಸ್ಕೃತಿ. ಎಲ್ಲರಿಗೂ ಕಷ್ಟ, ಸುಖಗಳು ಬರುವುದು ಸಾಮಾನ್ಯ, ಕಷ್ಟಗಳು ಬಂದಾಗ ಕಷ್ಟದಲ್ಲಿರುವವರು ನಮ್ಮ ಕುಟುಂಬ ಸದಸ್ಯರೇ ಎಂದು ತಿಳಿದು ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕು, (Samvedana) ಅಭಯ ನೀಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕರೆ ನೀಡಿದರು.
ನಗರದ ಮಹಾತ್ಮ ಗಾಂಧಿ ಕಾಲೋನಿಯಲ್ಲಿ ಸೇವಾ ಭಾರತಿ ಹಾಗೂ ಲೋಕಹಿತ ಟ್ರಸ್ಟ್ ಸಹಯೋಗದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ‘ಸಂವೇದನಾ’ ಎನ್ನುವ ಸೇವಾ ಪ್ರಕಲ್ಪ – ಕುಷ್ಠರೋಗಿಗಳಿಗೆ ನಿತ್ಯ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಸುದೈವ ಕುಟುಂಬಕಂ ಎನ್ನುವುದು ಭಾರತೀಯ ಸಂಸ್ಕೃತಿಯ ಮೂಲಾಧಾರ, ಈ ಉಕ್ತಿಯನ್ನು ಜೀವನದ ಉಸಿರಾಗಿಸಿಕೊಂಡು ಎಲ್ಲರೂ ಒಂದೇ ಕುಟುಂಬದ ಸದಸ್ಯರು ಎಂಬ ಭಾವನೆ ಬೆಳೆಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದರು.
ಇದನ್ನೂ ಓದಿ | Yakshagana Sammelana | ಫೆ.11, 12ರಂದು ಉಡುಪಿಯಲ್ಲಿ ʼಕರ್ನಾಟಕ ಸಮಗ್ರ ಯಕ್ಷಗಾನ ಸಮ್ಮೇಳನʼ
ಶಂಕರ ಎಂದರೆ ಶಿವ, ಶಿವ ಇಡೀ ಜಗತ್ತಿಗೆ ತಂದೆ, ಹೀಗಾಗಿ ಶಿವ ಭಕ್ತರೆಲ್ಲ ಬಂಧುಗಳೇ, ಇಡೀ ತ್ರಿಲೋಕವೇ ನಮ್ಮ ದೇಶ, ಇದು ಭಾರತೀಯರ ಕಲ್ಪನೆ. ಸೇವೆಯು ಜೀವನದ ಭಾಗವಾಗಬೇಕು, ಸೇವೆ ಎಂದರೆ ಒಂದು ಕರ್ತವ್ಯ, ರೋಗಿ ನಮ್ಮ ಮನೆಯಲ್ಲಿದ್ದರೆ ನಾವು ಆರೈಕೆ ಮಾಡುವುದಿಲ್ಲವೇ? ಹಾಗೆಯೇ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಪ್ರತಿಯೊಬ್ಬರನ್ನೂ ಕುಟುಂಬ ಸದಸ್ಯರೆಂದು ತಿಳಿದು ಆರೈಕೆ ಮಾಡಬೇಕು ಎಂದು ಹೇಳಿದರು.
ಅನಾಥ ಮಕ್ಕಳ ಸೇವೆ ಪ್ರತಿಯೊಬ್ಬರ ಕರ್ತವ್ಯ, ಯಾವ ಅನಾಥ ಮಕ್ಕಳಿಗೂ ತಾವು ಅನಾಥರು ಎಂಬ ಭಾವನೆ ಬರದಂತೆ ಸಮಾಜ ಅವನನ್ನು ಅಕ್ಕರೆಯಿಂದ ಕಾಣಬೇಕು, ಅವರ ಜೀವನ ರೂಪಿಸಬೇಕು. ನಾವೆಲ್ಲರೂ ಒಂದೇ ಎಂಬ ಭಾವನೆ ಹೃದಯದಿಂದ ಬರಬೇಕು, ಹೃದಯದಿಂದ ಸೇವೆ ಮಾಡಬೇಕು. ಒಬ್ಬರಿಗೊಬ್ಬರು ಸಹಾಯ, ಸಹಕಾರ, ಸಹಯೋಗ ನೀಡುತ್ತಾ ಜೀವನದಲ್ಲಿ ಮುನ್ನಡೆಯಬೇಕು ಎಂದು ತಿಳಿಸಿದರು.
ಈ ಸೇವಾ ಕಾರ್ಯವನ್ನೇ ಸಂಘವು ತನ್ನ ಧ್ಯೇಯವಾಗಿಸಿಕೊಂಡಿದೆ. ಕೋವಿಡ್ ಕಾಲಘಟ್ಟದಲ್ಲಿ ಅನೇಕ ನೋವುಗಳನ್ನು ನೋಡಿದ್ದೇವೆ. ಅದೇ ಸಮಯದಲ್ಲಿ ಲಕ್ಷಾಂತರ ಜನರ ನಿಸ್ವಾರ್ಥ ಮನೋಭಾವದ ಸೇವೆಯನ್ನೂ ನಾವು ಗಮನಿಸಿದ್ದೇವೆ, ಈ ಸೇವೆ ನಮಗೆ ಸ್ಫೂರ್ತಿಯಾಗಲಿ, ಸೇವೆ ಮಾಡುತ್ತಾ ಮುನ್ನಡೆಯರಿ ಎಂದು ಸ್ಫೂರ್ತಿದಾಯಕ ಮಾತುಗಳನ್ನು ಹೇಳಿದರು.
ಪ್ರಾಸ್ತಾವಿಕವಾಗಿ ಕಾಲೋನಿಯ ಶಿವಾನಂದ ನೇಕಾರ ಅವರು ಮಾತನಾಡಿ, ಈ ಕುಷ್ಠರೋಗ ಬಂಧುಗಳ ಕಾಲನಿಯಲ್ಲಿ ಅನ್ನ ನೀಡುವ ಸೇವಾ ಕಾರ್ಯ ಪ್ರಾರಂಭಿಸಿದ್ದಕ್ಕೆ ಸಂತಸ ವ್ಯಕ್ತಪಡಿಸುತ್ತಾ, 1980 ದಶಕದಿಂದಲೇ ಈ ಕಾಲೋನಿಯ ಕುಷ್ಠರೋಗಿ ಬಂಧುಗಳ ಸಲುವಾಗಿ ದಿ. ವೆಂಕಟೇಶ ಗುರುನಾಯಕ ಅವರು ನಮಗೆಲ್ಲ ಜೀವನ ನೀಡಿದ ಪುಣ್ಯಾತ್ಮರು ಎಂದು ಹೇಳಿದರು.
ಕುಷ್ಠರೋಗಿ ಬಂಧುಗಳ ಜತೆಗೆ ದತ್ತಾತ್ರೆಯ ಹೊಸಬಾಳೆಯವರು ಸಹಪಂಕ್ತಿ ಭೋಜನ ಮಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರೀಯ ಸಂಘ ಚಾಲಕ ವಿ. ನಾಗರಾಜ, ಕ್ಷೇತ್ರಿಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ, ಪ್ರಾಂತ ಪ್ರಚಾರಕ ನರೇಂದ್ರ, ಲೋಕಹಿತ ಟ್ರಸ್ಟಿನ ಶ್ರೀಧರ ನಾಡಗೀರ, ವಿಭಾಗ ಸಂಘಚಾಲಕ ಚಿದಂಬರ ಕರಮರಕರ, ಜಿಲ್ಲಾ ಸಂಘ ಚಾಲಕ ಡಾ ಸತೀಶ ಜಿಗಜಿನ್ನಿ ಸೇವಾ ಭಾರತಿ ಟ್ರಸ್ಟ್ ಅಧ್ಯಕ್ಷ ಬಾಬುರಾವ, ಟ್ರಸ್ಟಿ ಚಂದ್ರಶೇಖರ ಗೋಕಾಕ, ರಮೇಶ, ಪ್ರಾಂತ ಸಂಯೋಜಕ ಶಂಕರ ಗುಮಾಸ್ತೆ, ಉಪಸ್ಥಿತರಿದ್ದರು.
ಇದನ್ನೂ ಓದಿ | Weavers Branding | ಇಳಕಲ್ ಸೀರೆ, ನೇಕಾರರ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಬ್ರ್ಯಾಂಡಿಂಗ್: ಸಿಎಂ ಬೊಮ್ಮಾಯಿ ಭರವಸೆ