ಕಾರವಾರ: ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಮರಳುಗಾರಿಕೆಗೆ (Sand Mining) ಅನುಮತಿ ಕೊಡಲು ಜಿಲ್ಲಾಡಳಿತದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಲಾಗಿದೆ.
ಸಿಆರ್‌ಝೆಡ್ ವಲಯದಲ್ಲಿ ಮರಳುಗಾರಿಕೆ ನಡೆಯುತ್ತಿದ್ದು, ಮರಳು ದಿಬ್ಬಗಳನ್ನು ತೆರವು ಮಾಡುವ ಬದಲು ಮಾಫಿಯಾ ಮಾಡಲಾಗುತ್ತಿದೆ ಎಂದು ಉಡುಪಿ ಜಿಲ್ಲೆಯ ಕೆಲವರು ರಾಷ್ಟ್ರೀಯ ಹಸಿರು ಪೀಠದ ಮೊರೆ ಹೋಗಿದ್ದರಿಂದ ಕಳೆದ ವರ್ಷದ ಮೇ ತಿಂಗಳಲ್ಲಿ ಮರಳುಗಾರಿಕೆ ನಿಲ್ಲಿಸುವಂತೆ ಆದೇಶಿಸಲಾಗಿತ್ತು.
ಮರಳುಗಾರಿಕೆ ಸ್ಥಗಿತ ಮಾಡಿರುವುದರಿಂದ ಜಿಲ್ಲೆಯಲ್ಲಿ ಮರಳಿನ ಅಭಾವ ಸೃಷ್ಟಿಯಾಗಿದ್ದು, ಜನರು ಮನೆ ಕಟ್ಟಲು, ಸರ್ಕಾರಿ ಕಾಮಗಾರಿಗಳಿಗೆ ಮರಳು ಇಲ್ಲದೇ ಪರದಾಡುವಂತಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅನುಮತಿ ನೀಡದಿದ್ದರೆ ಅಭಿವೃದ್ಧಿ ಚಟುವಟಿಕೆ ಮೇಲೆ ಸಾಕಷ್ಟು ಪರಿಣಾಮ ಬೀಳಲಿದ್ದು, ಅವಕಾಶ ಕೊಡುವಂತೆ ಒತ್ತಾಯ ಕೇಳಿ ಬಂದಿತ್ತು.
ಇದನ್ನೂ ಓದಿ | BMTC Vajra ticket price hike | ಬಿಎಂಟಿಸಿ ವಜ್ರ ಬಸ್ ಪ್ರಯಾಣದ ಟಿಕೆಟ್ ದರ ಏರಿಕೆ
ಮಂಗಳೂರಿನಲ್ಲಿ ಹಸಿರು ಪೀಠ ನೀಡಿರುವ ತೀರ್ಪು ಕೇವಲ ಉಡುಪಿ ಜಿಲ್ಲೆಗೆ ಸಂಬಂಧಿಸಿದ್ದಾಗಿದೆ. ಅಲ್ಲದೆ, ಮಂಗಳೂರಿನಲ್ಲಿ ಈಗಾಗಲೇ ಮರಳು ದಿಬ್ಬಗಳ ತೆರವಿಗೆ ಅನುಮತಿ ನೀಡಿದ್ದು, ಜಿಲ್ಲೆಯಲ್ಲೂ ಇದೇ ಮಾದರಿಯಲ್ಲಿ ಮರಳು ದಿಬ್ಬಗಳನ್ನು ತೆರವು ಮಾಡುವಂತೆ ಹಲವಾರು ಮಂದಿ ಆಗ್ರಹಿಸಿದ್ದರು. ಈ ನಿಟ್ಟಿನಲ್ಲಿ ಮರಳುಗಾರಿಕೆಗೆ ಅನುಮತಿ ಕೊಡುವ ಸಂಬಂಧ ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನ್ಯಾಯಾಲಯ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಮರಳು ದಿಬ್ಬಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.
ಇದನ್ನೂ ಓದಿ | Dharma dangal | ಸುಳ್ಯ ಜಾತ್ರೆಯಲ್ಲಿ ಹಿಂದು ವ್ಯಾಪಾರಿಗಳಿಗೆ ಮಾತ್ರ ಅವಕಾಶ: ಒತ್ತಡಕ್ಕೆ ಮಣಿದು ಬದಲಾದ ನಿಲುವು
ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದ ವ್ಯಾಪ್ತಿಯಲ್ಲಿ ಮೀನುಗಾರಿಕಾ ದೋಣಿಗಳು ಮತ್ತು ಸ್ಥಳೀಯ ಗೃಹೋಪಯೋಗಿ ದೋಣಿಗಳ ಸಂಚಾರಕ್ಕೆ ಅಡ್ಡಿಪಡಿಸುವ ಮರಳು ದಿಬ್ಬಗಳನ್ನು ತೆರವುಗೊಳಿಸುವಂತೆ ಸ್ವೀಕೃತಿಯಾದ ಮನವಿಗೆ ಸಂಬಂಧಿಸಿದಂತೆ ಕಾರವಾರ ತಾಲೂಕಿನ ಕಾಳಿ ನದಿ ಪಾತ್ರದಲ್ಲಿ 7 ಮರಳು ದಿಬ್ಬಗಳು, ಅಂಕೋಲಾ ತಾಲೂಕಿನ ಗಂಗಾವಳಿ ನದಿ ಪಾತ್ರದಲ್ಲಿ 2 ಮರಳು ದಿಬ್ಬಗಳು, ಕುಮಟಾ ತಾಲೂಕಿನ ಅಘನಾಶಿನಿ ನದಿ ಪಾತ್ರದಲ್ಲಿ 4 ಮರಳು ದಿಬ್ಬಗಳು ಮತ್ತು ಹೊನ್ನಾವರ ತಾಲೂಕಿನ ಶರಾವತಿ ನದಿ ಪಾತ್ರದಲ್ಲಿ 7 ಮರಳು ದಿಬ್ಬಗಳಂತೆ ಒಟ್ಟು 20 ಮರಳು ದಿಬ್ಬಗಳನ್ನು ತೆರವುಗೊಳಿಸಲು ಎನ್‌ಐಟಿಕೆ ತಜ್ಞರು ನೀಡಿರುವ ವರದಿಯನ್ನು ಸಲ್ಲಿಸಲಾಗಿದೆ.
ವರದಿ ಪರಿಶೀಲಿಸಿ ಮರಳು ದಿಬ್ಬಗಳನ್ನು ತೆರವುಗೊಳಿಸುವ ಸಂಬಂಧ ಸಿಆರ್‌ಜೆಡ್‌ನಿಂದ ನಿರಕ್ಷೇಪಣಾ ಪತ್ರ ಪಡೆಯಲು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ಜಿಲ್ಲಾ ಸಿ.ಆರ್.ಜೆಡ್ ಸಮಿತಿಯ ಮೂಲಕ ಕ್ರಮ ವಹಿಸುವ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು.
ಇದನ್ನೂ ಓದಿ | Actress Haripriya | ಸಿಂಹ-ಪ್ರಿಯಾ ಮದುವೆ ಡೇಟ್ ಫಿಕ್ಸ್: ಮದುವೆ ಎಲ್ಲಿ,ಯಾವಾಗ?
ಈ ಸಂದರ್ಭದಲ್ಲಿ ಹಿರಿಯ ಭೂವಿಜ್ಞಾನಿ ಆಶಾ ಎಂ.ಎಸ್, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ತಳೇಕರ, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಪ್ರಸನ್ನ ಪಟಗಾರ, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರತೀಕ್ ಶೆಟ್ಟಿ, ಭೂವಿಜ್ಞಾನಿ ಜಯರಾಂ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.
ಅಕ್ರಮ ಮರಳುಗಾರಿಕೆ
ಒಂದೆಡೆ ಮರಳುಗಾರಿಕೆ ಸ್ಥಗಿತವಾಗಿದೆ ಎಂದು ಕೆಲವರು ಜಿಲ್ಲೆಯಲ್ಲಿ ಪರದಾಡುತ್ತಿದ್ದರೆ, ಇನ್ನು ಕೆಲವರು ಸದ್ದಿಲ್ಲದೆ ಅಕ್ರಮವಾಗಿ ಮರಳು ತೆಗೆಯುವ ಕಾಯಕದಲ್ಲಿ ತೊಡಗಿದ್ದಾರೆಂಬ ಆರೋಪ ಕೇಳಿಬಂದಿದೆ. ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಅಕ್ರಮವಾಗಿ ಮರಳು ತೆಗೆದು ರವಾನೆ ಮಾಡಲಾಗುತ್ತಿದೆ. ಮರಳಿನ ಅಭಾವ ಇರುವುದರಿಂದ ಅನಿವಾರ್ಯವಾಗಿ ತೆಗೆದು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ಇದಕ್ಕೆ ಸೂಕ್ತ ಕ್ರಮವಹಿಸಬೇಕೆಂಬ ಆಗ್ರಹವೂ ಕೇಳಿಬಂದಿದೆ.
ಇದನ್ನೂ ಓದಿ | Bengaluru-Mysuru Expressway | ಬೆಂಗಳೂರಿನಿಂದ ಮೈಸೂರಿಗೆ ಇನ್ನು ಒಂದೂವರೆ ತಾಸಿನಲ್ಲಿ ತಲುಪಬಹುದು!