ಹಾಸನ: ಇಲ್ಲಿನ ಹೊಳೆನರಸೀಪುರ ತಾಲೂಕಿನ ಶ್ರವಣೂರು ಗ್ರಾಮದಲ್ಲಿ ಅನುಮತಿ ಪಡೆಯದೆ ಕಳೆದ 13 ದಿನಗಳ ಹಿಂದೆ ವೃತ್ತ ನಿರ್ಮಾಣ ಮಾಡಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರವನ್ನು (Sangolli Rayanna Circle) ಇರಿಸಲಾಗಿತ್ತು. ಇದಕ್ಕೆ ಗ್ರಾಮದಲ್ಲಿ ಹಲವರಿಂದ ಆಕ್ಷೇಪ ವ್ಯಕ್ತವಾಗಿ ವಿವಾದ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ (ಡಿ. ೧೮) ಜಿಲ್ಲಾಡಳಿತದ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ಸಂಗೊಳ್ಳಿ ರಾಯಣ್ಣ ವೃತ್ತ ನಿರ್ಮಾಣವಾಗಿದ್ದೇ ತಡ ಇದೇ ಸ್ಥಳದಲ್ಲಿ ಬೇರೆ ನಾಯಕರ ಪ್ರತಿಮೆ ಸ್ಥಾಪನೆಗೆ ಕೋರಿ ಮನವಿ ಸಲ್ಲಿಕೆ ಆಗಿದ್ದವು. ಹೀಗಾಗಿ ತೆರವು ವಿಚಾರವಾಗಿ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಭೆಯನ್ನೂ ನಡೆಸಲಾಗಿತ್ತು. ಆದರೆ, ವೃತ್ತ ತೆರವಿಗೆ ಕೆಲವರು ಒಪ್ಪಿಗೆ ನೀಡಿರಲಿಲ್ಲ. ಒಪ್ಪಿಗೆ ನೀಡದ ಕಾರಣ ಜಿಲ್ಲಾಡಳಿತವು ಪೊಲೀಸ್ ಸರ್ಪಗಾವಲಿನಲ್ಲಿ ರಾಯಣ್ಣ ವೃತ್ತವನ್ನು ತೆರವು ಮಾಡಲಾಯಿತು.
ಇದಕ್ಕಾಗಿ ಬೆಳಗಿನ ಜಾವವೇ ಸ್ಥಳದಲ್ಲಿ 400ಕ್ಕೂ ಹೆಚ್ಚು ಪೊಲೀಸರು, ಡಿಎಆರ್ ನಾಲ್ಕು ತುಕಡಿ, ಇಬ್ಬರು ಡಿವೈಎಸ್‌ಪಿ, 10 ಸರ್ಕಲ್ ಇನ್ಸ್‌ಪೆಕ್ಟರ್, 20 ಪಿಎಸ್‌ಐಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಜತೆಗೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ಬ್ಯಾರಿಕೇಡ್ ಹಾಕಿ, ಶ್ರವಣೂರಿಗೆ ಯಾರೂ ಬರದಂತೆ ನಿರ್ಬಂಧ ಹೇರಲಾಗಿತ್ತು.
ಸಕಲ ಸರ್ಕಾರಿ ಗೌರವ
ಸಕಲ ಸರ್ಕಾರಿ ಗೌರವದೊಂದಿಗೆ ರಾಯಣ್ಣ ವೃತ್ತದಲ್ಲಿ ಅಳವಡಿಕೆ ಮಾಡಿದ್ದ ಭಾವಚಿತ್ರ ತೆರವು ಮಾಡಲಾಯಿತು. ತೆರವಿಗೂ ಮುನ್ನ ಪೊಲೀಸ್ ಬ್ಯಾಂಡ್ ಮೂಲಕ ಸ್ವಾತಂತ್ರ್ಯ ಸೇನಾನಿಗೆ ಗೌರವಾರ್ಪಣೆ ಹಾಗೂ ಕೆ.ಆರ್.ನಗರದ ಕಾಗಿನೆಲೆ ಮಠದ ಡಾ.ಶಿವಪುರಿ ಶಿವಾನಂದ ಸ್ವಾಮೀಜಿ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದರು. ತೆರವು ವೇಳೆ ಅಡ್ಡಿಪಡಿಸದಂತೆ ಇಡಿ ಗ್ರಾಮದಲ್ಲಿ ನಾಕಾಬಂದಿ ಹಾಕಲಾಗಿತ್ತು. ಹಾಸನ ಉಪವಿಭಾಗದ ಎಸಿ ಬಿ.ಎ.ಜಗದೀಶ್, ಎಸ್‌ಪಿ ಹರಿರಾಂ ಶಂಕರ್, ತಹಸೀಲ್ದಾರ್ ಕೃಷ್ಣಮೂರ್ತಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು.
ವೃತ್ತ ತೆರವಿಗೆ ಗ್ರಾಮಸ್ಥರ ಆಕ್ರೋಶ
ಬ್ರಿಟಿಷರ ವಿರುದ್ಧ ಹೋರಾಡಿದ ಸಂಗೊಳ್ಳಿ ರಾಯಣ್ಣನಿಗೆ ಅವಮಾನ ಮಾಡಿರುವುದಾಗಿ ರಾಯಣ್ಣನ ಅನುಯಾಯಿಗಳು ಆಕ್ರೋಶ ಹೊರಹಾಕಿದರು. ಶ್ರವಣೂರು ಗ್ರಾಮದಲ್ಲಿ ಜನರು ಜಮಾಯಿಸುತ್ತಿದ್ದಂತೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಚೌಕ ತೆರವುಗೊಳಿಸುತ್ತಿದ್ದಂತೆ ಸೆಡ್ಡು ಹೊಡೆದು ಮತ್ತೊಂದು ಸಂಗೊಳ್ಳಿ ರಾಯಣ್ಣ ಪ್ರತಿಮೆ ತಂದ ಪ್ರಸಂಗವು ನಡೆಯಿತು. ಬಿಡದಿಯಿಂದ ಎಂಟು ಅಡಿ ಎತ್ತರದ ರಾಯಣ್ಣನ ಪ್ರತಿಮೆ ತಂದು, ಚೌಕಿ ತೆರವುಗೊಳಿಸಿದ ಅಣತಿ ದೂರದಲ್ಲಿರುವ ಮನೆಯ ಮುಂದೆ ಪ್ರತಿಮೆ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಯಿತು.
ಪ್ರಕರಣ ಸಂಬಂಧ ಹಾಸನ ಎಸ್‌ಪಿ ಹರಿರಾಂ ಶಂಕರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಯಾರೋ ಹುಡುಗರು ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ವೃತ್ತ ಎಂದು ನಾಮಕರಣ ಮಾಡಿ, ವೃತ್ತದ ನಡುವಿನಲ್ಲಿ ಒಂದು ಚೌಕಿ ನಿರ್ಮಿಸಿದ್ದರು. ಚೌಕಿಗೆ ಸಂಗೊಳ್ಳಿ ರಾಯಣ್ಣ ಫೋಟೊವನ್ನು ಹಾಕಲಾಗಿತ್ತು. ಇದನ್ನು ಬೇರೆ ಸಮಾಜದವರು ವಿರೋಧ ವ್ಯಕ್ತಪಡಿಸಿದ್ದರು. ಆಯಾ ಸಮಾಜದ ಮುಖಂಡರ ಪ್ರತಿಮೆ ನಿರ್ಮಿಸುತ್ತೇವೆ ಎಂದು ಪಟ್ಟು ಹಿಡಿದಿದ್ದರು. ಇದರಿಂದ ಎಲ್ಲ ಸಮಾಜದ ಮುಖಂಡರನ್ನು ಸೇರಿಸಿ ಸಭೆ ನಡೆಸಲಾಗಿತ್ತು. ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲರೊಂದಿಗೆ ಚರ್ಚಿಸಿ ತೆರವುಗೊಳಿಸಿದ್ದೇವೆ ಎಂದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅನುಮತಿ ಇಲ್ಲದೆ ಯಾವ ಪ್ರತಿಮೆಯನ್ನು ನಿರ್ಮಿಸುವಂತಿಲ್ಲ. ಕೋರ್ಟ್ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ. ವೃತ್ತಕ್ಕೆ ನಾಮಕರಣ ಮಾಡಲು ಮೊದಲಿಗೆ ಗ್ರಾಪಂ ಒಪ್ಪಿಗೆ ಬೇಕು. ಗ್ರಾಪಂ ಅನುಮೋದನೆ ಮಾಡಿ ಸರ್ಕಾರಕ್ಕೆ ಕಳಿಸಿದ ನಂತರ ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ಮುಂದಿನ ಕ್ರಮ ಕೈಗೊಳ್ಳುತ್ತದೆ ಎಂದು ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ಕಾಗಿನೆಲೆ ಪೀಠದ ಡಾ.ಶಿವಪುರಿ ಶಿವಾನಂದ ಸ್ವಾಮೀಜಿ, ಶ್ರವಣೂರು ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಹಾಕಿ ಚೌಕಿ ನಿರ್ಮಾಣ ಮಾಡಿದ್ದರು. ಇಲ್ಲಿನ ಯುವಕರು ಮಾಡಿರುವುದು ತಪ್ಪು. ಅದನ್ನು ಸರಿಮಾಡಿಕೊಳ್ಳಲು ಬೇಕಾದಷ್ಟು ದಾರಿಗಳಿವೆ. ಸುಪ್ರೀಂ ಕೋರ್ಟ್ ಆದೇಶ ಸರ್ವೇ ಸಾಮಾನ್ಯವಾಗಿ ಜನರಿಗೆ ಗೊತ್ತಿರುವುದಿಲ್ಲ. ಇದನ್ನು ತೆರವುಗೊಳಿಸುವ ಅನಿವಾರ್ಯತೆ ಇರುವುದರಿಂದ ಎಲ್ಲರಿಗೂ ಮನವರಿಕೆ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡು ಪೊಲೀಸ್ ಭದ್ರತೆಯಲ್ಲಿ ತೆರವು ಮಾಡಲಾಗಿದೆ.
ಈ ಸರ್ಕಲ್‌ಗೆ ಸಂಗೊಳ್ಳಿ ರಾಯಣ್ಣ ಹೆಸರು ಇಡಬೇಕೆಂದು ನಾವೆಲ್ಲ ನಿರ್ಧರಿಸಿದ್ದು, ಇದಕ್ಕೆ ಎಲ್ಲ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಅದನ್ನು ಯಾರೂ ಬದಲಾಯಿಸಲು ಆಗುವುದಿಲ್ಲ, ಯಾರ ತಂಟೆ ತಕರಾರು ಇರುವುದಿಲ್ಲ. ಮುಂದಿನ ದಿನಗಳಲ್ಲಿ ಅನುಕೂಲ, ಅನನೂಕೂಲ ನೋಡಿ ದೊಡ್ಡ ಪ್ರತಿಮೆಯನ್ನು ಸ್ಥಾಪಿಸಬಹುದು ಎಂದರು.
ಇದನ್ನೂ ಓದಿ | ಗರ್ಭಿಣಿ ನೀನು, ಚೆನ್ನಾಗಿರಬೇಕು ಎನ್ನುತ್ತ ಪತ್ನಿಗೆ ಎಚ್ಐವಿ ಸೋಂಕಿನ ರಕ್ತ ಇಂಜೆಕ್ಟ್ ಮಾಡಿಸಿದ ಪತಿ; ನಂಬಿ ಮೋಸ ಹೋದ ಹೆಂಡತಿ