Site icon Vistara News

Sangolli Rayanna | ಶ್ರವಣೂರಿನಲ್ಲಿ ನಾಳೆ ರಾಯಣ್ಣ ಪ್ರತಿಮೆ ಅನಾವರಣ; ಜಿಲ್ಲಾಡಳಿತಕ್ಕೆ ಸಡ್ಡು

Sangolli Rayanna Circle

ಹಾಸನ: ಅನುಮತಿ ಪಡೆಯದೆ ವೃತ್ತ ನಿರ್ಮಾಣ ಮಾಡಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರವನ್ನು (Sangolli Rayanna) ಇರಿಸಿ ವಿವಾದಕ್ಕೆ ಕಾರಣವಾಗಿದ್ದ ಹೊಳೆನರಸೀಪುರ ತಾಲೂಕಿನ ಶ್ರವಣೂರು ಗ್ರಾಮವು ಈಗ ಮತ್ತೆ ಸುದ್ದಿಯಲ್ಲಿದೆ. ಪಟ್ಟುಬಿಡದ ರಾಯಣ್ಣ ಅಭಿಮಾನಿಗಳು ಈಗ ಪ್ರತಿಮೆ ಸ್ಥಾಪನೆಗೆ ಮುಂದಾಗಿದ್ದು, ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶುಕ್ರವಾರ (ಜ.೧೩) ಅನಾವರಣಗೊಳಿಸಲಿದ್ದಾರೆ. ಈ ಮೂಲಕ ಜಿಲ್ಲಾಡಳಿತಕ್ಕೆ ಸಡ್ಡುಹೊಡೆಯಲಾಗಿದೆ.

ಈ ಗ್ರಾಮದಲ್ಲಿ ಡಿ.18ರಂದು ರಾತ್ರೋ ರಾತ್ರಿ ರಾಯಣ್ಣ ವೃತ್ತ ನಿರ್ಮಾಣ ಮಾಡಿ, ಫೋಟೊವನ್ನು ಹಾಕಲಾಗಿತ್ತು. ಇದರಿಂದ ಜಿಲ್ಲಾಡಳಿತವು ತೆರವುಗೊಳಿಸಿತ್ತು. ಪುನಃ ಜಿಲ್ಲಾಡಳಿತಕ್ಕೆ ಸೆಡ್ಡು ಹೊಡೆದಿದ್ದ ಗ್ರಾಮದ ಯುವಕರು ಆ ದಿನವೇ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ತಂದಿದ್ದರು. ವಿವಾದವಾಗಿದ್ದ ಪಕ್ಕದ ಖಾಸಗಿ ಜಾಗದಲ್ಲಿಯೇ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ನಿರ್ಮಿಸಿದ್ದು, ಶುಕ್ರವಾರ ಮಾಜಿ ಸಿಎಂ ಸಿದ್ದರಾಮಯ್ಯ ಅನಾವರಣಗೊಳಿಸಲಿದ್ದಾರೆ. ಸಿದ್ದರಾಮಯ್ಯ ಆಗಮನ ಹಿನ್ನೆಲೆ ಗ್ರಾಮಕ್ಕೆ ಹೆಚ್ಚಿನ ಬಂದೋಬಸ್ತ್ ಒದಗಿಸುವ ಸಾಧ್ಯತೆ ಇದೆ.

ಏನಿದು ಘಟನೆ?
ಶ್ರವಣೂರು ಗ್ರಾಮದಲ್ಲಿ ಅನುಮತಿ ಪಡೆಯದೆ ವೃತ್ತ ನಿರ್ಮಾಣ ಮಾಡಿದ್ದಲ್ಲದೇ ಸಂಗೊಳ್ಳಿ ರಾಯಣ್ಣನ ಭಾವಚಿತ್ರವನ್ನು (Sangolli Rayanna Circle) ಇರಿಸಿದ್ದರು. ಇದಕ್ಕೆ ಗ್ರಾಮದಲ್ಲಿ ಹಲವರಿಂದ ಆಕ್ಷೇಪ ವ್ಯಕ್ತವಾಗಿ ವಿವಾದ ಸೃಷ್ಟಿಯಾಗಿತ್ತು. ಸಂಗೊಳ್ಳಿ ರಾಯಣ್ಣ ವೃತ್ತ ನಿರ್ಮಾಣವಾಗಿದ್ದೇ ತಡ ಇದೇ ಸ್ಥಳದಲ್ಲಿ ಬೇರೆ ನಾಯಕರ ಪ್ರತಿಮೆ ಸ್ಥಾಪನೆಗೆ ಕೋರಿ ಮನವಿ ಸಲ್ಲಿಕೆ ಆಗಿದ್ದವು. ಹೀಗಾಗಿ ತೆರವು ವಿಚಾರವಾಗಿ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಭೆಯನ್ನೂ ನಡೆಸಲಾಗಿತ್ತು. ಆದರೆ, ವೃತ್ತ ತೆರವಿಗೆ ಕೆಲವರು ಒಪ್ಪಿಗೆ ನೀಡಿರಲಿಲ್ಲ.

ಸಕಲ ಸರ್ಕಾರಿ ಗೌರವದೊಂದಿಗೆ ತೆರವು
ಒಪ್ಪಿಗೆ ನೀಡದ ಕಾರಣ ಜಿಲ್ಲಾಡಳಿತವು ಪೊಲೀಸ್ ಸರ್ಪಗಾವಲಿನಲ್ಲಿ ರಾಯಣ್ಣ ವೃತ್ತವನ್ನು ಡಿ.18ರಂದು ತೆರವು ಮಾಡಲಾಗಿತ್ತು. ಸಕಲ ಸರ್ಕಾರಿ ಗೌರವದೊಂದಿಗೆ ರಾಯಣ್ಣ ವೃತ್ತದಲ್ಲಿ ಅಳವಡಿಕೆ ಮಾಡಿದ್ದ ಭಾವಚಿತ್ರ ತೆರವು ಮಾಡಲಾಯಿತು.ತೆರವು ವೇಳೆ ಅಡ್ಡಿಪಡಿಸದಂತೆ ಇಡಿ ಗ್ರಾಮದಲ್ಲಿ ನಾಕಾಬಂದಿ ಹಾಕಲಾಗಿತ್ತು. ಹಾಸನ ಉಪವಿಭಾಗದ ಎಸಿ ಬಿ.ಎ.ಜಗದೀಶ್, ಎಸ್‌ಪಿ ಹರಿರಾಂ ಶಂಕರ್, ತಹಸೀಲ್ದಾರ್ ಕೃಷ್ಣಮೂರ್ತಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆದಿತ್ತು.

ವೃತ್ತ ತೆರವಿಗೆ ಗ್ರಾಮಸ್ಥರ ಆಕ್ರೋಶ
ಬ್ರಿಟಿಷರ ವಿರುದ್ಧ ಹೋರಾಡಿದ ಸಂಗೊಳ್ಳಿ ರಾಯಣ್ಣನಿಗೆ ಅವಮಾನ ಮಾಡಿರುವುದಾಗಿ ರಾಯಣ್ಣನ ಅನುಯಾಯಿಗಳು ಆಕ್ರೋಶವನ್ನು ಹೊರಹಾಕಿದರು. ಚೌಕ ತೆರವುಗೊಳಿಸುತ್ತಿದ್ದಂತೆ ಸಡ್ಡು ಹೊಡೆದು ಮತ್ತೊಂದು ಸಂಗೊಳ್ಳಿ ರಾಯಣ್ಣ ಪ್ರತಿಮೆ ತಂದ ಪ್ರಸಂಗವು ನಡೆಯಿತು. ಬಿಡದಿಯಿಂದ ಎಂಟು ಅಡಿ ಎತ್ತರದ ರಾಯಣ್ಣನ ಪ್ರತಿಮೆ ತಂದು, ಚೌಕಿ ತೆರವುಗೊಳಿಸಿದ ಅಣತಿ ದೂರದಲ್ಲಿರುವ ಮನೆಯೊಂದರ ಮುಂದೆ ಪ್ರತಿಮೆಯನ್ನು ಇರಿಸಲಾಗಿತ್ತು. ಇದೀಗ ಇದೇ ಪ್ರತಿಮೆಯ ಅನಾವರಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದು, ಮತ್ತೊಂದು ಸ್ವರೂಪಕ್ಕೆ ತಿರುಗುವ ಸಾಧ್ಯತೆ ಇದೆ.

ಇದನ್ನೂ ಓದಿ | Medical negligence : ಜ್ವರ, ಮೈಕೈ ನೋವು ಎಂದು ಆಸ್ಪತ್ರೆ ಸೇರಿದ್ದ ಯುವಕ ಸಾವು; ವೈದ್ಯರ ವಿರುದ್ಧ ಕುಟುಂಬಸ್ಥರ ಪ್ರತಿಭಟನೆ

Exit mobile version